Kerala High Court
Kerala High Court  
ಸುದ್ದಿಗಳು

ಬ್ರಹ್ಮಪುರಂ ತ್ಯಾಜ್ಯ ಘಟಕದ ಅಗ್ನಿ ಆಕಸ್ಮಿಕದಿಂದ ಏಕೆ ಪಾಠ ಕಲಿಯುತ್ತಿಲ್ಲ? ಕೇರಳ ಹೈಕೋರ್ಟ್ ಅಸಮಾಧಾನ

Bar & Bench

ತ್ಯಾಜ್ಯ ವಿಲೇವಾರಿಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಕೊಚ್ಚಿ ಬಳಿಯ ಬ್ರಹ್ಮಪುರಂ ತ್ಯಾಜ್ಯ ಘಟಕದಲ್ಲಿ ಸಂಭವಿಸಿದ ಅಗ್ನಿ ಅವಘಡ ಕೇರಳದಲ್ಲಿ ಎಲ್ಲಿ ಬೇಕಾದರೂ ಸಂಭವಿಸಬಹುದು ಎಂದು ಕೇರಳ ಹೈಕೋರ್ಟ್‌ ಬುಧವಾರ ಹೇಳಿದೆ [ಸಂತ ಸ್ಟೀಫನ್‌ರ ಮಳಂಕರ ಕ್ಯಾಥೋಲಿಕ್‌ ಚರ್ಚ್‌ ಕಟ್ಟಣಂ ಗ್ರಾಮ ಮತ್ತು ಕೇರಳ ಸರ್ಕಾರ ನಡುವಣ ಪ್ರಕರಣ].

ರಸ್ತೆಗಳಲ್ಲಿನ ಅಕ್ರಮ ಜಾಹೀರಾತು ಫಲಕಗಳು, ಫ್ಲೆಕ್ಸ್ ಹಾಗೂ ಬ್ಯಾನರ್‌ಗಳ ವಿಲೇವಾರಿ ಕುರಿತ ಅರ್ಜಿಯನ್ನು ಪರಿಗಣಿಸುವಾಗ ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.

ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದ ಸಮಸ್ಯೆ ರಾಜ್ಯದೆಲ್ಲೆಡೆ ಇದೆ. ತಿರುವನಂತಪುರ ಜಿಲ್ಲೆಯಲ್ಲಿ ಬ್ಯಾನರ್‌ಗಳನ್ನು ತ್ಯಾಜ್ಯ ಘಟಕಗಳಿಗೆ ಸುರಿಯಲಾಗುತ್ತಿದ್ದು ಇವುಗಳನ್ನು ಸುಟ್ಟಾಗ ವಿಷಕಾರಿ ಹೊಗೆ ಹೊರಹೊಮ್ಮುತ್ತಿದೆ ಎಂದು ನ್ಯಾಯಾಲಯ ತಿಳಿಸಿತು.

“ಕೊಚ್ಚಿಯಲ್ಲಿ ನಡೆದ ಈ ಘಟನೆ ಬೇರೆಲ್ಲೂ ನಡೆಯುವುದಿಲ್ಲ ಎಂಬುದು ನಿಮ್ಮ ಭಾವನೆಯೇ? ಇದು ಎಲ್ಲಿ ಬೇಕಾದರೂ ಘಟಿಸಬಹುದು... ತಿರುವನಂತಪುರ ಫಲಕಗಳಿಂದ ತುಂಬಿ ಹೋಗಿದೆ. ನೀವು (ತಿರುವನಂತಪುರಂ ಪಾಲಿಕೆ ಅಧಿಕಾರಿಗಳು) ತ್ಯಾಜ್ಯ ವಿಲೇವಾರಿ ಮಾಡಿರುವುದಾಗಿ ಹೇಳುತ್ತಿದ್ದೀರಿ. ಅದನ್ನು ತ್ಯಾಜ್ಯ ಘಟಕಕ್ಕೆ ಸ್ಥಳಾಂತರಿಸಿದಾಗ, ಅದು ಉಳಿಕೆ ತ್ಯಾಜ್ಯವಾಗಿ ಅಲ್ಲಿ ಸಂಗ್ರಹವಾಗುತ್ತದೆ. ನಂತರ ಸುಟ್ಟಾಗ ನಾಗರಿಕರು ತೊಂದರೆ ಅನುಭವಿಸಬೇಕಾಗುತ್ತದೆ. ಫ್ಲೆಕ್ಸ್‌ಗಳನ್ನು ಸುಟ್ಟಾಗ ಬರುವ ಹೊಗೆ ವಿಷಕಾರಿ. ನೀವು ಜನರ ಹೆಸರಿನಲ್ಲಿ ಇದೆಲ್ಲವನ್ನೂ ಮಾಡುತ್ತೀರಿ” ಎಂದು ನ್ಯಾ. ರಾಮಚಂದ್ರನ್ ಮೌಖಿಕವಾಗಿ ಅಸಮಾಧಾನ ಸೂಚಿಸಿದರು.

ಪೋಸ್ಟರ್‌ಗಳು ಮತ್ತು ಬ್ಯಾನರ್‌ಗಳ ವಿಲೇವಾರಿ ಬಗ್ಗೆ ಯಾವುದೇ ಕಾಳಜಿ ತೋರದ ರಾಜಕೀಯ ಪಕ್ಷಗಳನ್ನು ಕೂಡ ಅವರು ತರಾಟೆಗೆ ತೆಗೆದುಕೊಂಡರು.

“ಈ ಜನರಿಗೆ ಪರಿಸರ ಅಥವಾ ರಾಜ್ಯ ಮತ್ತು ನಾಗರಿಕರ ಬಗ್ಗೆ ಸ್ವಲ್ಪವಾದರೂ ಕಾಳಜಿ ಇರಬೇಕಲ್ಲವೇ? ಜನರ ಮೇಲಿನ ಹೊರೆ ತುಂಬಾ ಹೆಚ್ಚಾಗಿದೆ. ಬ್ರಹ್ಮಪುರಂ ಘಟನೆ ನಡೆದರೂ ನಾವೇಕೆ ಪಾಠ ಕಲಿಯುತ್ತಿಲ್ಲ? ನಾಗರಿಕರು ತೊಂದರೆ ಅನುಭವಿಸಬೇಕಿದ್ದು ಫಲಕಗಳನ್ನು ಹಾಕಿದ ಮಂದಿ ಇದು ಜನರಿಗಾಗಿ ಎಂದು ಹೇಳುತ್ತಿದ್ದಾರೆ. ಇದನ್ನು ಪರಿಹರಿಸುವ ಸಾಮರ್ಥ್ಯ ನಮ್ಮ ಸರ್ಕಾರಕ್ಕೆ ಇಲ್ಲ . ಫಲಕಗಳನ್ನು ಮರುಬಳಕೆ ಮಾಡಲಾಗುತ್ತಿದೆ ಎಂದು ನೀವು ಸಲೀಸಾಗಿ ಹೇಳಲು ಸಾಧ್ಯವಿಲ್ಲ,’’ ಎಂದು ಅವರು ಕಿಡಿಕಾರಿದರು.

ಕಳೆದ ವಾರ ಕೊಚ್ಚಿಯ ಹೊರವಲಯದಲ್ಲಿರುವ ಬ್ರಹ್ಮಪುರಂ ಅಗ್ನಿ ಆಕಸ್ಮಿಕದಿಂದಾಗಿ ಇಡೀ ನಗರ ಹೊಗೆಯಿಂದ ತತ್ತರಿಸುವಂತಾಗಿತ್ತು. ಬೆಂಕಿ ನಂದಿಸಲು ನೌಕಾದಳದ ಹೆಲಿಕಾಪ್ಟರ್‌ಗಳನ್ನು ಕೂಡ ಜಿಲ್ಲಾಡಳಿತ ಬಳಸಿಕೊಂಡಿತ್ತು. ಘಟನೆಯನ್ನು ಕೇರಳ ಹೈಕೋರ್ಟ್‌ ಗಂಭೀರವಾಗಿ ಪರಿಗಣಿಸಿತ್ತು.