Karnataka HC and Visually impaired students
Karnataka HC and Visually impaired students 
ಸುದ್ದಿಗಳು

ಬ್ರೈಲ್‌ ಪಠ್ಯ: 403 ಪುಸ್ತಕಗಳನ್ನು 2 ತಿಂಗಳಲ್ಲಿ ಇ-ಪಬ್ ಮಾದರಿಗೆ ಪರಿವರ್ತಿಸಿಲು ಹೈಕೋರ್ಟ್‌ ಗಡುವು

Bar & Bench

ರಾಜ್ಯದಲ್ಲಿರುವ ಅಂಧ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅಗತ್ಯವಿರುವ ಬ್ರೈಲ್ ಲಿಪಿಯ ಪಠ್ಯಪುಸ್ತಕಗಳನ್ನು ಇ-ಪಬ್ (ಎಲೆಕ್ಟ್ರಾನಿಕ್‌ ಪಬ್ಲಿಕೇಶನ್‌) ಮಾದರಿಗೆ ಪರಿವರ್ತಿಸಿ ಪೂರೈಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಗುರುವಾರ ಎರಡು ತಿಂಗಳ ಗಡುವು ನೀಡಿದೆ.

‘ದಿ ನ್ಯಾಷನಲ್ ಫೆಡರೇಷನ್ ಆಫ್ ದಿ ಬ್ಲೈಂಡ್’ ಸಂಸ್ಥೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ವಿಭಾಗೀಯ ಪೀಠವು ನಡೆಸಿತು.

“ಸದ್ಯ 132 ಪುಸ್ತಕಗಳನ್ನು ಇ-ಪಬ್ ಮಾದರಿಯಲ್ಲಿ ಒದಗಿಸಲಾಗಿದೆ ಎಂದು ಸರ್ಕಾರ ಹೇಳಿದೆ. ಉಳಿದ 403 ಪುಸ್ತಕಗಳನ್ನೂ ಎರಡು ತಿಂಗಳ ಒಳಗೆ ಇ-ಪಬ್ ಮಾದರಿಗೆ ಪರಿವರ್ತಿಸಿ ಅಂಧ ವಿದ್ಯಾರ್ಥಿಗಳಿಗೆ ಲಭ್ಯವಾಗುವಂತೆ ಮಾಡಬೇಕು” ಎಂದು ಪೀಠವು ಸರ್ಕಾರಕ್ಕೆ ನಿರ್ದೇಶಿಸಿತು.

ಇದಕ್ಕೂ ಮುನ್ನ ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲೆ ಎಚ್‌ ವಾಣಿ, “ಅಂಧ ವಿದ್ಯಾರ್ಥಿಗಳಿಗೆ ರಾಜ್ಯ ಪಠ್ಯ ಕ್ರಮದ 1ರಿಂದ 10ನೇ ತರಗತಿಯ 132 ಬ್ರೈಲ್ ಲಿಪಿಯ ಪಠ್ಯ ಪುಸ್ತಕಗಳನ್ನು ಇ-ಪಬ್ 3 ಮಾದರಿಯಲ್ಲಿ ಕರ್ನಾಟಕ ಪಠ್ಯಪುಸ್ತಕ ಸೊಸೈಟಿಯ (ಕೆಟಿಬಿಎಸ್) ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಮಾಡಲಾಗಿದೆ. ಉಳಿದ 403 ಪುಸ್ತಕಗಳನ್ನು ಪರಿವರ್ತಿಸಿ ಅಪ್‌ಲೋಡ್ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಅದಕ್ಕಾಗಿ ಹೊರಗುತ್ತಿಗೆ ನೀಡಲಾಗಿದೆ. ಮುಂದಿನ ಶೈಕ್ಷಣಿಕ ವರ್ಷ ಆರಂಭವಾಗುವುದರೊಳಗೆ ಆ ಕಾರ್ಯ ಪೂರ್ಣಗೊಳಿಸಲಾಗುವುದು” ಎಂದು ತಿಳಿಸಿದರು.

ಇದಕ್ಕೆ ಪೀಠವು ಈಗಾಗಲೇ ಸಾಕಷ್ಟು ಕಾಲಾವಕಾಶ ನೀಡಲಾಗಿದೆ. ಮತ್ತೆ ಮೂರು ತಿಂಗಳು ಸಮಯ ನೀಡಲಾಗದು. ಪುಸ್ತಕಗಳಿಲ್ಲದೆ ವಿದ್ಯಾರ್ಥಿಗಳು ಶಿಕ್ಷಣ ಮುಂದುವರಿಸುವುದಾದರೂ ಹೇಗೆ, ಇನ್ನು ಎರಡು ತಿಂಗಳು ನೀಡಲಾಗುವುದು. ಅಷ್ಟರೊಳಗೆ ಬಾಕಿ 403 ಪುಸ್ತಕಗಳನ್ನೂ ಇ-ಪಬ್ ಮಾದರಿಗೆ ಪರಿವರ್ತಿಸಿ ವಿದ್ಯಾರ್ಥಿಗಳಿಗೆ ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಇಲ್ಲವಾದರೆ, ನ್ಯಾಯಾಲಯ ಗಂಭೀರವಾಗಿ ಪರಿಗಣಿಸಲಿದೆ ಎಂದು ತಿಳಿಸಿ ವಿಚಾರಣೆಯನ್ನು ಏಪ್ರಿಲ್‌ 4ಕ್ಕೆ ಮುಂದೂಡಿತು.

ರಾಜ್ಯದಲ್ಲಿ 1,692 ಅಂಧ ವಿದ್ಯಾರ್ಥಿಗಳು

ಸರ್ಕಾರದ ಪರ ವಕೀಲರು, ರಾಜ್ಯದಾದ್ಯಂತ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿರುವ ಅಂಧ ವಿದ್ಯಾರ್ಥಿಗಳನ್ನು ಗುರುತಿಸಲು ಸಮೀಕ್ಷೆ ನಡೆಸುವಂತೆ ಕಳೆದ ವಿಚಾರಣೆ ವೇಳೆ ನ್ಯಾಯಾಲಯ ನಿರ್ದೇಶಿಸಿತ್ತು. ನ್ಯಾಯಾಲಯದ ನಿರ್ದೇಶನದಂತೆ ಸಮೀಕ್ಷೆ ನಡೆಸಿ ವರದಿ ಸಲ್ಲಿಸಲಾಗಿದೆ. ವರದಿಯ ಪ್ರಕಾರ ಖಾಸಗಿ ಶಾಲೆಗಳಲ್ಲಿ 1,014, ಅನುದಾನಿತ ಶಾಲೆಗಳಲ್ಲಿ 533 ಹಾಗೂ ಸರ್ಕಾರಿ ಶಾಲೆಗಳಲ್ಲಿ 145 ವಿದ್ಯಾರ್ಥಿಗಳು ಸೇರಿ ರಾಜ್ಯದಾದ್ಯಂತೆ ಒಟ್ಟು 1,692 ಅಂಧ ವಿದ್ಯಾರ್ಥಿಗಳಿದ್ದಾರೆ ಎಂದು ತಿಳಿಸಿದರು.

ಅರ್ಜಿದಾರರ ಪರ ವಕೀಲೆ ವರ್ಷಾ ಅಯ್ಯಂಗಾರ್‌ ಅವರು ಸರ್ಕಾರದ ವರದಿಯನ್ನು ಅದರಲ್ಲೂ ಮುಖ್ಯವಾಗಿ ಅಂಧ ವಿದ್ಯಾರ್ಥಿಗಳ ಸಂಖ್ಯೆಯ ಕುರಿತು ನೀಡಿರುವ ಅಂಕಿ-ಅಂಶಗಳ ಬಗ್ಗೆ ಪರಿಶೀಲನೆ ನಡೆಸಬೇಕಿದೆ. ರಾಜ್ಯದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಅಂಧ ವಿದ್ಯಾರ್ಥಿಗಳಿರುವ ಸಾಧ್ಯತೆ ಇದೆ. ಸರ್ಕಾರ ನೀಡಿರುವ ಸಂಖ್ಯೆ ಬಹಳ ಕಡಿಮೆ ಎನಿಸುತ್ತಿದೆ. ಆದ್ದರಿಂದ, ಈ ಕುರಿತು ಪರಿಶೀಲನೆ ನಡೆಸಿ, ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು ಎಂದು ಕೋರಿದರು. ಅದಕ್ಕೆ ನ್ಯಾಯಾಲಯ ಅನುಮತಿ ನೀಡಿತು.