Uniform Civil Code 
ಸುದ್ದಿಗಳು

ಲಿವ್‌-ಇನ್: ಏಕರೂಪ ನಾಗರಿಕ ಸಂಹಿತೆಯಿಂದ ಗೌಪ್ಯತೆಗೆ ಧಕ್ಕೆ ಎಂದ ಅರ್ಜಿದಾರರಿಗೆ ಉತ್ತರಾಖಂಡ ಹೈಕೋರ್ಟ್ ತರಾಟೆ

ಸಂಬಂಧ ರಹಸ್ಯವಾಗಿ ಉಳಿದಿಲ್ಲದಿರುವಾಗ, ಸರ್ಕಾರ ಅರ್ಜಿದಾರರ ಖಾಸಗಿತನದ ಮೇಲೆ ಹೇಗೆ ಆಕ್ರಮಣ ಮಾಡಿದಂತಾಗುತ್ತದೆ ಎಂದು ನ್ಯಾಯಾಲಯ ಪ್ರಶ್ನಿಸಿತು.

Bar & Bench

ರಾಜ್ಯ ಸರ್ಕಾರ ಇತ್ತೀಚೆಗೆ ಜಾರಿಗೆ ತಂದ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ತನ್ನ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಗೌಪ್ಯತೆಗೆ ಧಕ್ಕೆ ತರುತ್ತದೆ ಎಂಬ 23 ವರ್ಷದ ಅರ್ಜಿದಾರರ ವಾದಕ್ಕೆ ಉತ್ತರಾಖಂಡ ಹೈಕೋರ್ಟ್ ಸೋಮವಾರ ಅಸಮಾಧಾನ ವ್ಯಕ್ತಪಡಿಸಿದೆ.

ಸಂಬಂಧ ರಹಸ್ಯವಾಗಿ ಉಳಿದಿಲ್ಲದಿರುವಾಗ, ಸರ್ಕಾರ ಅರ್ಜಿದಾರರ ಖಾಸಗಿತನದ ಮೇಲೆ ಹೇಗೆ ಆಕ್ರಮಣ ಮಾಡಿದಂತಾಗುತ್ತದೆ ಎಂದು ನ್ಯಾಯಾಲಯ ಪ್ರಶ್ನಿಸಿತು.

ಯುಸಿಸಿ ಅಡಿಯಲ್ಲಿ ಲಿವ್-ಇನ್ ಸಂಬಂಧಗಳ ನೋಂದಣಿ ಪ್ರಶ್ನಿಸಿ ಅರ್ಜಿದಾರರಾದ ಜೈ ತ್ರಿಪಾಠಿ ಅರ್ಜಿ ಸಲ್ಲಿಸಿದ್ದರು. ಸರ್ಕಾರ ಲಿವ್‌ ಇನ್‌ ಸಂಬಂಧಗಳ ವಿಚಾರವಾಗಿ ತನಿಖೆ ನಡೆಸಿದರೆ ಮತ್ತು ಯುಸಿಸಿ ಜಾರಿಗೆ ಬಂದರೆ ಗಾಳಿಮಾತುಗಳು ಸಾಂಸ್ಥೀಕರಣಗೊಳ್ಳುತ್ತವೆ ಎಂದು ವಾದಿಸಿದರು.

ಆಗ ಮುಖ್ಯ ನ್ಯಾಯಮೂರ್ತಿ  ಜಿ ನರೇಂದರ್  ಮತ್ತು ನ್ಯಾಯಮೂರ್ತಿ  ಅಲೋಕ್ ಮಹ್ರಾ ಅವರಿದ್ದ ಪೀಠ ಮೌಖಿಕವಾಗಿ "ರಹಸ್ಯ ಎಂದರೆ ಏನು? ನೀವಿಬ್ಬರೂ ಒಟ್ಟಿಗೆ ವಾಸಿಸುತ್ತಿದ್ದೀರಿ; ನಿಮ್ಮ ನೆರೆಹೊರೆಯವರಿಗೆ ಸಮಾಜಕ್ಕೆ ಹಾಗೂ ಜಗತ್ತಿಗೂ ಅದು ತಿಳಿದಿದೆ. ಹಾಗಾದರೆ ನೀವು ಹೇಳುತ್ತಿರುವ ರಹಸ್ಯ ಎಲ್ಲಿ ಉಳಿದಿದೆ?... ಗಾಳಿಮಾತು ಎಂದರೇನು? ನೀವು ರಹಸ್ಯವಾಗಿ, ಯಾವುದೋ ಏಕಾಂತ ಗುಹೆಯಲ್ಲಿ ವಾಸಿಸುತ್ತಿದ್ದೀರಾ? ನೀವು ನಾಗರಿಕ ಸಮಾಜದ ನಡುವೆ ಬದುಕುತ್ತಿದ್ದೀರಿ. ನೀವು ಮದುವೆಯೇ ಇಲ್ಲದೆ ನಿರ್ಲಜ್ಜವಾಗಿ ಒಟ್ಟಿಗೆ ವಾಸಿಸುತ್ತಿದ್ದೀರಿ. ಇದಾದ ಬಳಿಕ ರಹಸ್ಯವೇನು? ಗೌಪ್ಯತೆಗೆ ಆಕ್ರಮಣ ಒದಗುವುದು ಎಂದರೇನು?" ಎಂದು ಪ್ರಶ್ನೆಗಳ ಮಳೆ ಸುರಿಸಿತು.

ರಹಸ್ಯ ಎಂದರೆ ಏನು? ನೀವಿಬ್ಬರೂ ಒಟ್ಟಿಗೆ ವಾಸಿಸುತ್ತಿದ್ದೀರಿ; ನಿಮ್ಮ ನೆರೆಹೊರೆಯವರಿಗೆ, ಸಮಾಜಕ್ಕೆ ಹಾಗೂ ಜಗತ್ತಿಗೆ ಅದು ತಿಳಿದಿದೆ. ನೀವು ಯಾವುದಾದರೂ ಏಕಾಂತದ ಗುಹೆಯಲ್ಲಿ ರಹಸ್ಯವಾಗಿ ವಾಸಿಸುತ್ತಿದ್ದೀರಾ?
ಉತ್ತರಾಖಂಡ ಹೈಕೋರ್ಟ್‌

ಅರ್ಜಿದಾರ ತಮ್ಮ ಲಿವ್‌ ಇನ್‌ ಸಂಬಂಧವನ್ನು ಘೋಷಿಸಲು ಇಷ್ಟಪಡುವುದಿಲ್ಲ ಏಕೆಂದರೆ ಇದು ಗೌಪ್ಯತೆಯ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದಾಗ ನ್ಯಾಯಾಲಯ “ರಾಜ್ಯ ಸರ್ಕಾರ ಲಿವ್-ಇನ್ ಸಂಬಂಧಗಳನ್ನು ನಿಷೇಧಿಸುತ್ತಿಲ್ಲ, ಬದಲಿಗೆ ಅವುಗಳ ನೋಂದಣಿಗೆ ಅವಕಾಶ ನೀಡುತ್ತಿದೆ. ಹಾಗೆ ಮಾಡುವುದು ಅಂತಹ ಸಂಬಂಧಗಳ ಘೋಷಣೆಗೆ ಸಮನಾಗದು” ಎಂದಿತು.

ಖಾಸಗಿತನಕ್ಕೆ ಧಕ್ಕೆಯಾಗಿದೆ ಎಂಬ ವಾದ ನಿರ್ದಿಷ್ಟವಾಗಿರಬೇಕು ಮತ್ತು ಅರ್ಜಿದಾರರು ಸಾಮಾನ್ಯವಾದ ವಾದ  ಮಂಡಿಸಲು ಸಾಧ್ಯವಿಲ್ಲ ಎಂದು ಪೀಠ ನುಡಿಯಿತು.

ರಾಜ್ಯ ಸರ್ಕಾರಕ್ಕೆ ಪ್ರಕರಣದ ಸಂಬಂಧ ಈ ಹಿಂದೆ ನೋಟಿಸ್‌ ನೀಡಿತ್ತು. ಈಗ ಅದೇ ಪ್ರಕರಣದೊಂದಿಗೆ ಆಲಿಸಲು ಅರ್ಜಿಯನ್ನು ಸೇರಿಸಿತು. ಪ್ರಕರಣದ ಮುಂದಿನ ವಿಚಾರಣೆ ಏಪ್ರಿಲ್ 1ರಂದು ನಡೆಯಲಿದೆ.