ಏಕರೂಪ ನಾಗರಿಕ ಸಂಹಿತೆ ಜಾರಿಯಾಗಬೇಕು: ಮಧ್ಯಪ್ರದೇಶ ಹೈಕೋರ್ಟ್

ಉತ್ತಮ ರೀತಿಯಲ್ಲಿ ಮಂಡಿಸಲಾಗುವ ಏಕರೂಪ ನಾಗರಿಕ ಸಂಹಿತೆ ಮೂಢನಂಬಿಕೆ ಮತ್ತು ಅನಿಷ್ಟ ಪದ್ಧತಿಗಳಿಗೆ ಕಡಿವಾಣವಾಗಿ ಕಾರ್ಯನಿರ್ವಹಿಸಿ ರಾಷ್ಟ್ರದ ಸಮಗ್ರತೆಯನ್ನು ಬಲಪಡಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.
Uniform Civil Code
Uniform Civil Code
Published on

ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಕೇವಲ ಕಾಗದದ ಮೇಲೆ ಉಳಿಯಬಾರದು ಅದು ಜಾರಿಯಾಗಬೇಕು ಎಂದು ಮಧ್ಯಪ್ರದೇಶ ಹೈಕೋರ್ಟ್ ಇತ್ತೀಚೆಗೆ ಹೇಳಿದೆ.

ಧರ್ಮಶ್ರದ್ಧೆ ಮತ್ತು ನಂಬಿಕೆಯ ಹೆಸರಿನಲ್ಲಿ ಸಮಾಜದಲ್ಲಿ ಸವಕಲಾದ, ಮೂಲಭೂತವಾದಿ, ಮೌಢ್ಯ ಮತ್ತು ಅತಿ ಸಂಪ್ರದಾಯವಾದಿ ಆಚರಣೆಗಳಿವೆ ಎಂದು ನ್ಯಾಯಮೂರ್ತಿ ಅನಿಲ್ ವರ್ಮಾ ಹೇಳಿದರು.

ನಾಗರಿಕರಿಗೆ ಏಕರೂಪ ನಾಗರಿಕ ಸಂಹಿತೆಯನ್ನು ಪ್ರತಿಪಾದಿಸುವ 44ನೇ ವಿಧಿ ಸಂವಿಧಾನದಲ್ಲಿ ಇದೆಯಾದರೂ ಅದು ಕೇವಲ ಕಾಗದದ ಮೇಲೆ ಉಳಿಯದೆ ವಾಸ್ತವರೂಪಕ್ಕೆ ಬರಬೇಕಿದೆ. ಉತ್ತಮವಾಗಿ ಮಂಡಿಸಲಾಗುವ ಏಕರೂಪ ನಾಗರಿಕ ಸಂಹಿತೆಯು, ಮೂಢನಂಬಿಕೆ ಮತ್ತು ಅನಿಷ್ಟ ಪದ್ಧತಿಗಳಿಗೆ ಕಡಿವಾಣ ಹಾಕಿ ರಾಷ್ಟ್ರದ ಸಮಗ್ರತೆಯನ್ನು ಬಲಪಡಿಸುತ್ತದೆ ಎಂದು ನ್ಯಾಯಾಲಯ ನುಡಿದಿದೆ.

Also Read
ಏಕರೂಪ ನಾಗರಿಕ ಸಂಹಿತೆ ಜಾರಿ: ಅರ್ಜಿ ತಿರಸ್ಕರಿಸಿದ ದೆಹಲಿ ಹೈಕೋರ್ಟ್

ಐಪಿಸಿ ಸೆಕ್ಷನ್ 498 ಎ, ವರದಕ್ಷಿಣೆ ನಿಷೇಧ ಕಾಯಿದೆ ಹಾಗೂ ಮುಸ್ಲಿಂ ಮಹಿಳೆಯರ (ವಿವಾಹದ ಮೇಲಿನ ಹಕ್ಕುಗಳ ರಕ್ಷಣೆ) ಕಾಯಿದೆ, 2019ರ ವಿವಿಧ ಸೆಕ್ಷನ್‌ಗಳಡಿ ಆರೋಪಿಗಳ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದ ತೀರ್ಪಿನಲ್ಲಿ ಪೀಠ ಈ ವಿಚಾರ ತಿಳಿಸಿದೆ.

ಪತಿ, ಅತ್ತೆ ಮತ್ತು ನಾದಿನಿ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ದೂರುದಾರೆ ಆರೋಪಿಸಿದ್ದರು. ಆರೋಪಿಗಳು ತನಗೆ ಥಳಿಸಿದ್ದು ತನ್ನ ಪತಿ ಮೂರು ಬಾರಿ ʼತಲಾಖ್ ' ಹೇಳಿದ್ದಾನೆ ಎಂದು ಅವರು ಆರೋಪಿಸಿದ್ದರು.

ನ್ಯಾಯವ್ಯಾಪ್ತಿಯ ಆಧಾರದ ಮೇಲೆ ಅತ್ತೆ ಮತ್ತು ನಾದಿನಿ ಎಫ್‌ಐಆರ್ ಅನ್ನು ಪ್ರಶ್ನಿಸಿದರು ಮತ್ತು ಪತಿ ತಲಾಖ್  ಘೋಷಿಸುವ ನಿಬಂಧನೆಯು ಅವನಿಗೆ ಮಾತ್ರ ಅನ್ವಯಿಸುತ್ತದೆ ವಿನಾ ಅತ್ತೆಯ ವಿರುದ್ಧ ಅಲ್ಲ ಎಂದು ವಾದಿಸಿದರು.

ಅತ್ತೆ ಮತ್ತು ಸೊಸೆಯ ವಿರುದ್ಧ ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ರಕ್ಷಣೆ) ಕಾಯಿದೆ, 2019ರ ಸೆಕ್ಷನ್‌ಗಳನ್ನು ಅನ್ವಯಿಸಲಾಗುವುದಿಲ್ಲ ಎಂದು ನ್ಯಾಯಾಲಯ ಒಪ್ಪಿಕೊಂಡಿತು. ಅದರಂತೆ ಅವರ ವಿರುದ್ಧ ಹೂಡಲಾಗಿದ್ದ ಸೆಕ್ಷನ್ 4ರ (ತಲಾಖ್ ಉಚ್ಚರಿಸುವ ಶಿಕ್ಷೆ) ಅಪರಾಧವನ್ನು ರದ್ದುಗೊಳಿಸಿತು.

Also Read
ಉತ್ತರಾಖಂಡದ ಏಕರೂಪ ನಾಗರಿಕ ಸಂಹಿತೆ ಮಸೂದೆಗೆ ರಾಷ್ಟ್ರಪತಿ ಅಂಕಿತ

ಆದರೆ,  ಮಾನಸಿಕ ಮತ್ತು ದೈಹಿಕ ಕಿರುಕುಳದ ಆರೋಪಗಳಿಗೆ ಸಂಬಂಧಿಸಿದ ಪ್ರತಿವಾದವನ್ನು ಪರಿಗಣಿಸಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಶಾಯರಾ ಬಾನೋ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣದಲ್ಲಿ ಸರ್ವೋಚ್ಚ  ನ್ಯಾಯಾಲಯ ಈಗಾಗಲೇ ತ್ರಿವಳಿ ತಲಾಖ್ ಪದ್ಧತಿಯನ್ನು ಕಾನೂನುಬಾಹಿರ ಎಂದು ಘೋಷಿಸಿದ್ದರೂ , ಅದರ ವಿರುದ್ಧ ಕಾನೂನನ್ನು 2019ರಲ್ಲಿ ಜಾರಿಗೆ ತರಲಾಗಿದೆ ಎಂದು ನ್ಯಾಯಾಲಯ ಹೇಳಿದೆ.

"ಇದು ಖಂಡಿತವಾಗಿಯೂ ಸಮಾನತೆ ಮತ್ತು ಸಾಮಾಜಿಕ ಬದಲಾವಣೆಯೆಡೆಗೆ ಇರಿಸಿದ ಒಂದು ದೊಡ್ಡ ಹೆಜ್ಜೆಯಾಗಿದೆ. ತ್ರಿವಳಿ ತಲಾಖ್ ಅಸಾಂವಿಧಾನಿಕ ಮತ್ತು ಸಮಾಜಕ್ಕೆ ಕೆಟ್ಟದ್ದು ಎಂದು  ಅರ್ಥಮಾಡಿಸಲು ಕಾನೂನು ರೂಪಿಸುವವರಿಗೆ ಹಲವು ವರ್ಷಗಳೇ ಬೇಕಾಯಿತು. ನಮ್ಮ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆಯ ಅಗತ್ಯವನ್ನು ನಾವೀಗ ಅರಿತುಕೊಳ್ಳಬೇಕು” ಎಂದು ನ್ಯಾಯಮೂರ್ತಿಗಳು ತಿಳಿಸಿದರು.

Kannada Bar & Bench
kannada.barandbench.com