ಕೇಂದ್ರ ಸರ್ಕಾರದ ಅಗ್ನಿಪಥ ಯೋಜನೆ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳನ್ನು ದೆಹಲಿ ಹೈಕೋರ್ಟ್‌ಗೆ ವರ್ಗಾಯಿಸುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ತಿಳಿಸಿದೆ.
ಇಲ್ಲದೆ ಹೋದರೆ, ಹೈಕೋರ್ಟ್‌ಗಳು ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಬಾಕಿ ಇಡಬಹುದು ಎಂದು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್, ಎ ಎಸ್ ಬೋಪಣ್ಣ ಮತ್ತು ಸೂರ್ಯ ಕಾಂತ್ ಅವರಿದ್ದ ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಅಲ್ಲದೆ ಪ್ರಕರಣದ ಕುರಿತು ದೆಹಲಿ ಹೈಕೋರ್ಟ್ ಮೊದಲು ನಿರ್ಧರಿಸಲಿ ಎಂದಿರುವ ಸುಪ್ರೀಂ ಕೋರ್ಟ್‌ತನ್ನ ಮುಂದಿರುವ ಮೂರು ರಿಟ್ ಅರ್ಜಿಗಳನ್ನು ಕೂಡ ದೆಹಲಿ ಹೈಕೋರ್ಟ್‌ಗೆ ವರ್ಗಾಯಿಸುವಂತೆ ಸೂಚಿಸಿದೆ.
ನಾಲ್ಕು ವರ್ಷಗಳ ಮಟ್ಟಿಗೆ ಯುವಕರನ್ನು ಸೇನೆಗೆ ಸೇರಿಸಿಕೊಳ್ಳುವ ಅಗ್ನಿಪಥ್ ಯೋಜನೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ವಕೀಲ ಎಂ ಎಲ್ ಶರ್ಮಾ ಖುದ್ದಾಗಿ ಸಲ್ಲಿಸಿದ್ದ ಒಂದು ಅರ್ಜಿ, ಯೋಜನೆ ಘೋಷಿಸಿದ್ದ ರಕ್ಷಣಾ ಸಚಿವಾಲಯದ ಅಧಿಸೂಚನೆ ರದ್ದುಗೊಳಿಸಬೇಕೆಂದು ಕೋರಿತ್ತು.
ಹಾಸ್ಯದ ಹೊನಲು…
ವಿಚಾರಣೆಯ ಒಂದು ಹಂತದಲ್ಲಿ ಶರ್ಮಾ ಅವರನ್ನು ಉದ್ದೇಶಿಸಿ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರು “ಶರ್ಮಾ ಅವರೇ ನೀವು ಅರ್ಜಿದಾರರಲ್ಲ ಅಥವಾ ಅಗ್ನಿವೀರರೂ ಅಲ್ಲ. ನೀವು ವೀರರಿರಬಹುದು ಆದರೆ ಅಗ್ನಿವೀರರಲ್ಲ” ಎಂದು ಚಟಾಕಿ ಹಾರಿಸಿದರು. ಶರ್ಮಾ ತಾವು ಸಲ್ಲಿಸುವ ಪಿಐಎಲ್‌ಗಳಿಂದಾಗಿಯೇ ಸದಾ ಸುದ್ದಿಯಲ್ಲಿರುತ್ತಾರೆ.