Delhi high court, amazon and future 
ಸುದ್ದಿಗಳು

ಅಮೆಜಾನ್‌-ಪ್ಯೂಚರ್‌ ವಿವಾದ: ಮಧ್ಯಸ್ಥಿಕೆ ಅಂತ್ಯಗೊಳಿಸಲು ಕೋರಿದ್ದ ಫ್ಯೂಚರ್ ಮನವಿ ವಜಾಗೊಳಿಸಿದ ದೆಹಲಿ ಹೈಕೋರ್ಟ್

ವಾದದ ಅರ್ಹತೆ ಕುರಿತಂತೆ ಅಭಿಪ್ರಾಯ ವ್ಯಕ್ತಪಡಿಸದ ನ್ಯಾ. ಸಿ ಹರಿಶಂಕರ್ ಅವರಿದ್ದ ಏಕಸದಸ್ಯ ಪೀಠ ಮಧ್ಯಸ್ಥಿಕೆ ಮುಂದುವರೆಸಲು ಸರಳವಾಗಿ ಅನುಮತಿಸಿತು.

Bar & Bench

ಸಿಂಗಪೋರ್‌ ಅಂತರರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರದಲ್ಲಿ (ಎಸ್‌ಐಎಸಿ) ಅಮೆಜಾನ್ ಆರಂಭಿಸಿದ್ದ ಮಧ್ಯಸ್ಥಿಕೆ ಪ್ರಕ್ರಿಯೆಗಳನ್ನು ಮುಕ್ತಾಯಗೊಳಿಸುವಂತೆ ಫ್ಯೂಚರ್ ಗ್ರೂಪ್ ಮಾಡಿದ್ದ ಮನವಿಯನ್ನು ದೆಹಲಿ ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ.

ತಾವು ಕಕ್ಷೀದಾರರ ವಾದಗಳ ಅರ್ಹತೆ ಬಗ್ಗೆ ಯಾವುದೇ ಅಭಿಪ್ರಾಯ ವ್ಯಕ್ತಪಡಿಸುತ್ತಿಲ್ಲ. ಆದರೆ, ಎಸ್‌ಐಎಸಿಯಲ್ಲಿ ನಡೆಯುತ್ತಿರುವ ಮಧ್ಯಸ್ಥಿಕೆ ಮುಂದುವರೆಯಬೇಕು ಎಂದು ನ್ಯಾ. ಸಿ ಹರಿಶಂಕರ್‌ ಅವರಿದ್ದ ಏಕಸದಸ್ಯ ಪೀಠ ತಿಳಿಸಿತು.

ಫ್ಯೂಚರ್ ಕೂಪನ್ಸ್ ಪ್ರೈವೇಟ್ ಲಿಮಿಟೆಡ್‌ನ (ಎಫ್‌ಸಿಪಿಎಲ್) ಶೇ 49ರಷ್ಟು ಪಾಲನ್ನು ತನ್ನದಾಗಿಸಿಕೊಳ್ಳುವ ಅಮೆಜಾನ್‌ನ 2019ರ ಒಪ್ಪಂದಕ್ಕೆ ಸಂಬಂಧಿಸಿದಂತೆ ಮಧ್ಯಸ್ಥಿಕೆಯು ನಡೆಯುತ್ತಿದ್ದು ಈ ಎರಡೂ ಕಂಪನಿಗಳು ಸಿಲುಕಿರುವ ಹಲವಾರು ಕಾನೂನು ವ್ಯಾಜ್ಯಗಳಲ್ಲಿ ಇದೂ ಒಂದು.

ಅಮೆಜಾನ್ ಮತ್ತು ಫ್ಯೂಚರ್ ಗ್ರೂಪ್ ನಡುವಿನ ಮಧ್ಯಸ್ಥಿಕೆಗೆ ಸಂಬಂಧಿಸಿದ ವಿಚಾರಣೆಯನ್ನು ಸಿಂಗಪೋರ್‌ ಅಂತರರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರ ಆಲಿಸುತ್ತಿದೆ. ಈ ವರ್ಷ ಜೂನ್ 28 ರಂದು, ಫ್ಯೂಚರ್ ಗ್ರೂಪ್ ನಡಾವಳಿಗಳನ್ನು ಮುಕ್ತಾಯಗೊಳಿಸುವಂತೆ ಕೋರಿ ಸಲ್ಲಿಸಿದ್ದ ಎರಡು ಅರ್ಜಿಗಳನ್ನು ನ್ಯಾಯ ಮಂಡಳಿ ತಿರಸ್ಕರಿಸಿತ್ತು. ಈ ಆದೇಶ ಪ್ರಶ್ನಿಸಿ ಫ್ಯೂಚರ್‌ ಗ್ರೂಪ್‌ ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿತ್ತು.

ಎರಡು ಸಂಸ್ಥೆಗಳ ನಡುವಿನ ಒಪ್ಪಂದಕ್ಕೆ ನೀಡಿದ್ದ ಸಮ್ಮತಿಯನ್ನು ಡಿಸೆಂಬರ್ 2021ರಲ್ಲಿ ಅಮಾನತುಗೊಳಿಸಿದ್ದ ಭಾರತೀಯ ಸ್ಪರ್ಧಾತ್ಮಕ ಆಯೋಗ (CCI) ಸ್ಪರ್ಧಾ ಕಾಯಿದೆಯ ಸೆಕ್ಷನ್ 6(2) ಅಡಿಯಲ್ಲಿ ನೀಡಬೇಕಿದ್ದ ಕೆಲವು ನಿರ್ಣಾಯಕ ವಿವರಗಳನ್ನು ತಿಳಿಸಲು ಅಮೆಜಾನ್‌ ವಿಫಲವಾಗಿದೆ ಎಂದಿತ್ತು ಎಂಬುದಾಗಿ ಕಿಶೋರ್ ಬಿಯಾನಿ ನೇತೃತ್ವದ ಫ್ಯೂಚರ್ ಗ್ರೂಪ್ ವಾದಿಸಿತ್ತು.

ಸಿಸಿಐ ಆದೇಶದಿಂದ ಮಧ್ಯಸ್ಥಿಕೆ ಪ್ರಕ್ರಿಯೆಗಳ ಮುಂದುವರಿಕೆಗೆ ಕಾನೂನು ತೊಡಕುಂಟಾಗಿದೆ ಎಂಬುದನ್ನು ಎತ್ತಿ ಹಿಡಿಯಲು ನ್ಯಾಯ ಮಂಡಳಿ ವಿಫಲವಾಗಿತ್ತು ಎಂದು ಫ್ಯೂಚರ್‌ ಗ್ರೂಪ್‌ ಮನವಿಯಲ್ಲಿ  ತಿಳಿಸಲಾಗಿತ್ತು. ಮಧ್ಯಸ್ಥಿಕೆ ಪರಿಹಾರಕ್ಕೆ ತಿದ್ದುಪಡಿ ಮಾಡುವಂತೆ ಅಮೆಜಾನ್‌ ಸಲ್ಲಸಿದ್ದ ಮನವಿಗೆ ಅನುಮತಿಸುವ ನ್ಯಾಯಮಂಡಳಿಯ ಆದೇಶ ವಿರೋಧಿಸಿ ಫ್ಯೂಚರ್ ಗ್ರೂಪ್ ಮತ್ತೊಂದು ಅರ್ಜಿ ಸಲ್ಲಿಸಿತ್ತು.