Subramanya Swamy and Air India

 
ಸುದ್ದಿಗಳು

ಏರ್ ಇಂಡಿಯಾ ಬಂಡವಾಳ ಹಿಂತೆಗೆತ: ಸುಬ್ರಮಣಿಯನ್ ಸ್ವಾಮಿ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್

ಹರಾಜು ಪ್ರಕ್ರಿಯೆ ಅಸಾಂವಿಧಾನಿಕ, ದುರುದ್ದೇಶಪೂರ್ವಕ, ಭ್ರಷ್ಟತೆಯಿಂದ ಕೂಡಿದ್ದು ಟಾಟಾ ಪರವಾಗಿ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಸ್ವಾಮಿ ಅರ್ಜಿಯಲ್ಲಿ ಆಕ್ಷೇಪಿಸಿದ್ದರು.

Bar & Bench

ಏರ್‌ ಇಂಡಿಯಾ ಬಂಡವಾಳ ಹಿಂತೆಗೆತ ಪ್ರಕ್ರಿಯೆ ಪ್ರಶ್ನಿಸಿ ರಾಜ್ಯಸಭಾ ಸದಸ್ಯ ಬಿಜೆಪಿ ನಾಯಕ ಸುಬ್ರಮಣಿಯನ್‌ ಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್‌ ಇಂದು ವಜಾಗೊಳಿಸಿದೆ [ಸುಬ್ರಮಣಿಯನ್‌ ಸ್ವಾಮಿ ಮತ್ತು ಭಾರತ ಒಕ್ಕೂಟ ಮತ್ತಿತರರ ನಡುವಣ ಪ್ರಕರಣ].

ಮುಖ್ಯ ನ್ಯಾಯಮೂರ್ತಿ ಡಿಎನ್ ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರಿದ್ದ ಪೀಠ ಮಂಗಳವಾರ ತನ್ನ ಆದೇಶ ಕಾಯ್ದಿರಿಸಿತ್ತು. ವಿವರವಾದ ಆದೇಶ ನ್ಯಾಯಾಲಯದ ವೆಬ್‌ಸೈಟ್‌ನಲ್ಲಿ ಶೀಘ್ರದಲ್ಲೇ ಲಭಿಸಲಿದೆ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ, ಸರ್ಕಾರಿ ಕಂಪೆನಿ ಎಐಎಸ್‌ಎಟಿಎಸ್‌ನ ಅರ್ಧದಷ್ಟು ಪಾಲಿನೊಂದಿಗೆ ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಶೇ 100ರಷ್ಟು ಈಕ್ವಿಟಿ ಷೇರು ಪಡೆಯುವುದಕ್ಕಾಗಿ ಟಾಟಾ ಸನ್ಸ್ ಮಾಡಿದ ಅತ್ಯಧಿಕ ಬಿಡ್ ಅನ್ನು ಕೇಂದ್ರ ಅಂಗೀಕರಿಸಿತ್ತು. ಅದೇ ತಿಂಗಳು, ₹18,000 ಕೋಟಿಗೆ ಏರ್ ಇಂಡಿಯಾ ಮಾರಾಟ ಮಾಡಲೆಂದು ಸರ್ಕಾರ ಟಾಟಾದೊಂದಿಗೆ ಷೇರು ಖರೀದಿ ಒಪ್ಪಂದಕ್ಕೆ ಸಹಿ ಹಾಕಿತ್ತು.

ಏರ್ ಇಂಡಿಯಾದ ಬಂಡವಾಳ ಹಿಂತೆಗೆತ ರದ್ದುಪಡಿಸಬೇಕು ಜೊತೆಗೆ ಈ ಉದ್ದೇಶಕ್ಕಾಗಿ ನೀಡಿರುವ ಯಾವುದೇ ಬಗೆಯ ಅನುಮತಿಯನ್ನು ಹಿಂಪಡೆಯಬೇಕು ಎಂದು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸ್ವಾಮಿ ಅವರು ಹೈಕೋರ್ಟ್‌ ಮೊರೆ ಹೋಗಿದ್ದರು.

ಸ್ಪೈಸ್‌ಜೆಟ್‌ ಮಾಲೀಕರ ನೇತೃತ್ವದ ಒಕ್ಕೂಟವೊಂದು ಈ ಹರಾಜು ಪ್ರಕರಣದಲ್ಲಿ ಪಾಲ್ಗೊಂಡಿದ್ದ ಮತ್ತೊಬ್ಬ ಬಿಡ್‌ದಾರನಾಗಿತ್ತು. ತಾನು ಇಲ್ಲದಿದ್ದರೆ ಹರಾಜು ಪ್ರಕ್ರಿಯೆ ಮುಂದುವರೆಯುತ್ತಿರಲಿಲ್ಲ, ಹರಾಜಿನಲ್ಲಿ ಪಾಲ್ಗೊಂಡಿರುವುದು ಸಂತಸದ ಸಂಗತಿ ಎಂದು ಈ ಒಕ್ಕೂಟ ಹೇಳಿದ ಸುದ್ದಿಯೊಂದು ಪತ್ರಿಕೆಯಲ್ಲಿ ಪ್ರಕಟವಾಗಿದೆ. ಮದ್ರಾಸ್‌ ಹೈಕೋರ್ಟ್‌ನಲ್ಲಿ ಸ್ಪೈಸ್‌ಜೆಟ್‌ ವಿರುದ್ಧ ದಿವಾಳಿತನದ ಪ್ರಕರಣದ ವಿಚಾರಣೆ ಬಾಕಿ ಇದ್ದು ಅದು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅರ್ಹವಲ್ಲ ಎಂಬ ಸ್ಪಷ್ಟ ಮಾತುಗಳಿವೆ. ಇದರರ್ಥ ಒಬ್ಬ ಬಿಡ್‌ದಾರ ಮಾತ್ರ ಹರಾಜು ಪ್ರಕ್ರಿಯೆಯಲ್ಲಿದ್ದು (ಈ ರೀತಿಯ) ಬಿಡ್‌ ನಡೆಯಲು ಸಾಧ್ಯವಿಲ್ಲ ಎಂದು ಸ್ವಾಮಿ ನ್ಯಾಯಾಲಯದ ಮುಂದೆ ವಾದಿಸಿದ್ದರು.

ಖಾಸಗೀಕರಣ ಪ್ರಕ್ರಿಯೆಯಲ್ಲಿ ಪ್ರತಿವಾದಿಗಳ ಪಾತ್ರದ ಬಗ್ಗೆ ತನಿಖೆ ನಡೆಸಿ ನ್ಯಾಯಾಲಯದ ಮುಂದೆ ವಿವರವಾದ ವರದಿಯನ್ನು ಸಲ್ಲಿಸುವಂತೆ ಮನವಿ ಮಾಡಲಾಗಿತ್ತು. ಮಂಗಳವಾರ ತಮ್ಮ ಅರ್ಜಿಯ ಪರವಾಗಿ ವಕೀಲರೂ ಆದ ಸ್ವಾಮಿ ಖುದ್ದು ವಾದ ಮಂಡಿಸಿದ್ದರು. ಕೇಂದ್ರ ಸರ್ಕಾರದ ಪರ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ಟಾಟಾ ಪರವಾಗಿ ಹಿರಿಯ ವಕೀಲ ಹರೀಶ್ ಸಾಳ್ವೆ ವಾದಿಸಿದ್ದರು.