ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿರುವ ಅಮೆರಿಕದ ನಿವಾಸಿ, ದೇವಾಸ್ ಮಲ್ಟಿಮೀಡಿಯಾ ಪ್ರೈವೇಟ್ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ರಾಮಚಂದ್ರನ್ ವಿಶ್ವನಾಥನ್ ಅವರನ್ನು ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಬೆಂಗಳೂರಿನ ವಿಶೇಷ ಸಿಬಿಐ ನ್ಯಾಯಾಲಯ ಗುರುವಾರ ಘೋಷಣೆ ಮಾಡಿದೆ.
ವಿಚಾರಾಣಾಧೀನ ನ್ಯಾಯಾಲಯದ ಮುಂದೆ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ವಿಶ್ವನಾಥನ್ ಅವರನ್ನು ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಘೋಷಿಸುವಂತೆ ಜಾರಿ ನಿರ್ದೇಶನಾಲಯ ಕೋರಿತ್ತು. ಇದಾಗಲೇ ದೇಶ ತೊರೆದಿರುವ ಆರ್ಥಿಕ ಅಪರಾಧಿಗಳಾದ ವಿಜಯ್ ಮಲ್ಯ, ನೀರವ್ ಮೋದಿ ಪಟ್ಟಿಗೆ ರಾಮಚಂದ್ರನ್ ವಿಶ್ವನಾಥನ್ ಹೆಸರು ಸೇರ್ಪಡೆಯಾಗಿದೆ.
ರಾಮಚಂದ್ರನ್ ವಿಶ್ವನಾಥನ್ ಅವರನ್ನು ದೇಶಭ್ರಷ್ಟ ಆರ್ಥಿಕ ಅಪರಾಧಗಳ ಕಾಯಿದೆ 2018ರ ಸೆಕ್ಷನ್ 4 ಸಹವಾಚನ ಸೆಕ್ಷನ್ 10 ಮತ್ತು 12ರ ಅಡಿ ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಘೋಷಿಸುವಂತೆ ಕೋರಿ ಜಾರಿ ನಿರ್ದೇಶನಾಲಯದ ಬೆಂಗಳೂರಿನ ವಲಯ ಅಧಿಕಾರಿ ಸಲ್ಲಿಸಿದ್ದ ಅರ್ಜಿಯನ್ನು ಸಿಬಿಐ ನ್ಯಾಯಾಲಯದ ಪ್ರಧಾನ ವಿಶೇಷ ನ್ಯಾಯಾಧೀಶರಾದ ಕೆ ಎಲ್ ಅಶೋಕ್ ಅವರು ಪುರಸ್ಕರಿಸಿದ್ದಾರೆ.
ದೇಶಭ್ರಷ್ಟ ಆರ್ಥಿಕ ಅಪರಾಧಗಳ ಕಾಯಿದೆ ಸೆಕ್ಷನ್ 12(2)ರ ಅಡಿ ದಾಖಲೆಯಲ್ಲಿ ಉಲ್ಲೇಖಿಸಿರುವ ಆಸ್ತಿಗಳು ಕೇಂದ್ರ ಸರ್ಕಾರದ ವಶಕ್ಕೊಳಪಡಲಿವೆ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ. ಮುಂದಿನ ಕ್ರಮಗಳಿಗಾಗಿ ಪ್ರಕರಣದ ವಿಚಾರಣೆಯನ್ನು ಜೂನ್ 26ಕ್ಕೆ ನ್ಯಾಯಾಲಯ ಮುಂದೂಡಿದೆ. ವಿಸ್ತೃತವಾದ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.
ದೇಶಭ್ರಷ್ಟ ಆರ್ಥಿಕ ಅಪರಾಧಗಳ ಕಾಯಿದೆ 2018ರ ಸೆಕ್ಷನ್ 10ರ ಅಡಿ ವಿಶ್ವನಾಥನ್‌ಗೆ ನ್ಯಾಯಾಲಯವು 2023ರ ಜನವರಿಯಲ್ಲಿ ನೋಟಿಸ್ ಜಾರಿ ಮಾಡಲಾಗಿತ್ತು. ವಿದೇಶದಲ್ಲಿ ನೆಲೆಸಿರುವುದರಿಂದ ವಿಶ್ವನಾಥನ್‌ಗೆ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ ಸೆಕ್ಷನ್ 7ರ ಅಡಿ ನೋಟಿಸ್ ನೀಡಲಾಗಿರಲಿಲ್ಲ. ವಿದೇಶಾಂಗ ಸಚಿವಾಲಯದ ಮೂಲಕ ವಿಶ್ವನಾಥನ್‌ಗೆ ನೋಟಿಸ್ ಜಾರಿ ಮಾಡಲಾಗಿತ್ತು. ಆನಂತರ ಅವರು 2022ರ ಡಿಸೆಂಬರ್ 12ರಂದು ವಿಚಾರಣೆಗೆ ಗೈರಾಗಿದ್ದರು. ಇದರಿಂದಾಗಿ ಡಿಸೆಂಬರ್ 26ರಂದು ವಿಚಾರಣೆಗೆ ಹಾಜರಾಗಲು ಮತ್ತೊಂದು ಅವಕಾಶವನ್ನು ನ್ಯಾಯಾಲಯ ನೀಡಿತ್ತು. ಆದರೂ ವಿಶ್ವನಾಥನ್ ವಿಚಾರಣೆಗೆ ಹಾಜರಾಗಲಿಲ್ಲ.
ವಿಶ್ವನಾಥನ್ ವಿರುದ್ಧದ ಆರೋಪವೇನು?: 2004ರಲ್ಲಿ ಬೆಂಗಳೂರಿನಲ್ಲಿ ಉಪಗ್ರಹ ಆಧಾರಿತ ಮಲ್ಟಿಮೀಡಿಯಾ ಸೇವೆಗಳನ್ನು ನೀಡುವ ಉದ್ದೇಶದಿಂದ ವಿಶ್ವನಾಥನ್ ಅವರು ದೇವಾಸ್ ಮಲ್ಟಿಮೀಡಿಯಾ ಪ್ರೈ. ಲಿ ಎಂಬ ಕಂಪೆನಿ ಆರಂಭಿಸಿದ್ದರು. ಒಂದು ವರ್ಷದ ಬಳಿಕ ದೇವಾಸ್ ಸಂಸ್ಥೆಯು ಆಂತರಿಕ್ಷ್ ಕಾರ್ಪೊರೇಶನ್ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಆಂತರಿಕ್ಷ್ ಎರಡು ಉಪಗ್ರಹಗಳನ್ನು ನಿರ್ಮಿಸಬೇಕಿತ್ತು. ದೇವಾಸ್ ಎಸ್-ಬ್ಯಾಂಡ್ ಟ್ರಾನ್ಸ್‌ಪಾಂಡರ್ಸ್ ಸಂಹವನ ಉಪಗ್ರಹದ ಮೂಲಕ ಭಾರತೀಯ ಮೊಬೈಲ್ ಬಳಕೆದಾರರಿಗೆ ಮಲ್ಟಿಮೀಡಿಯಾ ಸೇವೆ ನೀಡಬೇಕಿತ್ತು. ಇದಕ್ಕೆ ಹಲವು ಹೂಡಿಕೆದಾರರು ಬೆಂಬಲ ನೀಡಿದ್ದರು. ಆನಂತರ ಆಂತರಿಕ್ಷ್-ದೇವಾಸ್ ಒಡಂಬಡಿಕೆಯಲ್ಲಿ ಭ್ರಷ್ಟಾಚಾರ, ಅಕ್ರಮದ ಹಿನ್ನೆಲೆಯಲ್ಲಿ ತನಿಖೆ ಆರಂಭಿಸಲಾಗಿತ್ತು.
ಮುಂದೆ ಅಂತರಿಕ್ಷ್ ಸಂಸ್ಥೆಯು ದೇವಾಸ್ ಸಂಸ್ಥೆಯ ಭಾರತದ ಚಟುವಟಿಕೆಗಳನ್ನು ಅಂತ್ಯಗೊಳಿಸುವಂತೆ ಕೋರಿ ಎನ್‌ಸಿಎಲ್‌ಟಿ ಮೆಟ್ಟಿಲೇರಿತ್ತು. ವಂಚನೆಯ ಉದ್ದೇಶದಿಂದ ಸಂಸ್ಥೆಯನ್ನು ಆರಂಭಿಸಲಾಗಿದೆ ಎಂದು ಅದು ಹೇಳಿತ್ತು. ಅಂತರಿಕ್ಷ್ ಪರವಾಗಿ ಎನ್‌ಸಿಎಲ್‌ಟಿ ತೀರ್ಪು ನೀಡಿತು. ಇದನ್ನು ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿ ಎನ್‌ಸಿಎಲ್‌ಎಟಿಯಲ್ಲಿ ನಿಲ್ಲಲಿಲ್ಲ. ಸುಪ್ರೀಂ ಕೋರ್ಟ್ ಸಹ ಎನ್‌ಸಿಎಲ್‌ಎಟಿ ತೀರ್ಪನ್ನು ಎತ್ತಿಹಿಡಿದಿತ್ತು.
ಮತ್ತೊಂದೆಡೆ ವಿಶ್ವನಾಥನ್ ಅವರನ್ನು ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಘೋಷಿಸುವಂತೆ ಜಾರಿ ನಿರ್ದೇಶನಾಲಯವು ವಿಶೇಷ ನ್ಯಾಯಾಲಯದ ಮೆಟ್ಟಿಲೇರಿತ್ತು. ಇಸ್ರೋದ ಆರ್ಥಿಕ ವಿಭಾಗವಾದ ಆಂತರಿಕ್ಷ್‌ನಿಂದ ಅಕ್ರಮವಾಗಿ 578 ಕೋಟಿ ರೂಪಾಯಿಗಳನ್ನು ಖಾಸಗಿ ಮಲ್ಟಿಮೀಡಿಯಾ ಕಂಪೆನಿಯಾದ ದೇವಾಸ್ ಲಾಭ ಮಾಡಿಕೊಂಡಿರುವುದಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿತ್ತು.
2018ರಲ್ಲಿ ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆ ಕಾಯಿದೆ 2002ರ ಸೆಕ್ಷನ್ 45(1) ಜೊತೆಗೆ 3, 4 ಮತ್ತು 8(5) ಅಡಿ ದೇವಾಸ್ ಮಲ್ಟಿಮೀಡಿಯಾ ಪ್ರೈ.ಲಿ, ಸಿಇಒ ರಾಮಚಂದ್ರನ್ ವಿಶ್ವನಾಥನ್, ನಿರ್ದೇಶಕಾರದ ಎಂ ಜಿ ಚಂದ್ರಶೇಖರ್, ಮುಖ್ಯ ತಂತ್ರಜ್ಞಾನ ಅಧಿಕಾರಿ ದೇಸರಾಜು ವೇಣುಗೋಪಾಲ್, ಮಾಜಿ ನಿರ್ದೇಶಕರಾದ ನಟರಾಜ್ ದಕ್ಷಿಣಮೂರ್ತಿ, ರಂಗನಾಥನ್ ಮೋಹನ್, ದೇವಾಸ್ ಮಲ್ಟಿಮೀಡಿಯಾ ಅಮೆರಿಕಾ ಇಂಕ್, ಡಿಸಿಟಿ ಟೆಲಿಕಮ್ಯೂನಿಕೇಷನ್ ಪ್ರೈ. ಲಿ, ಡಿಸಿಟಿ ನೆಟ್‌ವರ್ಕ್ಸ್ ಪ್ರೈ. ಲಿ, ಕುಪ್ಪಮ್ ರಾಮೈರ್ ಶ್ರೀಧರ್ ಮೂರ್ತಿ ಅವರ ವಿರುದ್ಧ ಪ್ರಕರಣ ದಾಖಲಿಸಿತ್ತು. 2019ರಲ್ಲಿ ಬೆಂಗಳೂರಿನ ವಿಶೇಷ ನ್ಯಾಯಾಲಯವು ಹತ್ತೂ ಆರೋಪಿಗಳ ವಿರುದ್ಧ ಸಂಜ್ಞೇಯ ಪರಿಗಣಿಸಿತ್ತು. ಈ ಮಧ್ಯೆ, ಹೈಕೋರ್ಟ್ ಹತ್ತನೇ ಆರೋಪಿ ಕುಪ್ಪಮ್ ರಾಮೈರ್ ಶ್ರೀಧರ್ ಮೂರ್ತಿ ವಿರುದ್ಧದ ಪ್ರಕರಣ ವಜಾ ಮಾಡಿದೆ.
ಎರಡನೇ ಆರೋಪಿ ಸಿಇಒ ರಾಮಚಂದ್ರನ್ ವಿಶ್ವನಾಥನ್ ಮತ್ತು ಏಳನೇ ಆರೋಪಿಯಾಗಿರುವ ದೇವಾಸ್ ಮಲ್ಟಿಮೀಡಿಯಾ ಅಮೆರಿಕಾ ಇಂಕ್ ವಿರುದ್ಧ ಜಾರಿ ನಿರ್ದೇಶನಾಲಯವು ಪ್ರತ್ಯೇಕ ಪ್ರಕರಣ ದಾಖಲಿಸಿತ್ತು. ಈ ಪ್ರಕರಣದಲ್ಲಿ ರಾಮಚಂದ್ರನ್ ವಿಶ್ವನಾಥನ್ ಅವರನ್ನು ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಈಗ ಬೆಂಗಳೂರಿನ ವಿಶೇಷ ನ್ಯಾಯಾಲಯ ಈಗ ಘೋಷಿಸಿದೆ.
ಜಾರಿ ನಿರ್ದೇಶನಾಲಯದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾಗಿ ಪಿ ಪ್ರಸನ್ನ ಕುಮಾರ್ ಅವರು ವಾದಿಸಿದ್ದರು.