ಸುದ್ದಿಗಳು

ದೆಹಲಿ ಚುನಾಯಿತ ಸರ್ಕಾರದ ಕೆಲ ಅಧಿಕಾರ ಮೊಟಕುಗೊಳಿಸುವ ದೆಹಲಿ ಎನ್‌ಸಿಟಿ ತಿದ್ದುಪಡಿ ಮಸೂದೆಗೆ ಲೋಕಸಭೆ ಅಸ್ತು

Bar & Bench

ಲೆಫ್ಟಿನೆಂಟ್‌ ಗವರ್ನರ್‌ ಅಧಿಕಾರವನ್ನು ಹೆಚ್ಚಿಸಿ ದೆಹಲಿ ಚುನಾಯಿತ ಸರ್ಕಾರದ ಅಧಿಕಾರವನ್ನು ಕೆಲ ವಿಷಯಗಳಲ್ಲಿ ಮೊಟಕುಗೊಳಿಸುವ 2021ರ ದೆಹಲಿ ರಾಷ್ಟ್ರ ರಾಜಧಾನಿ ಪ್ರದೇಶ (ತಿದ್ದುಪಡಿ) ಮಸೂದೆಯನ್ನು ಲೋಕಸಭೆ ಇಂದು ಅಂಗೀಕರಿಸಿದೆ. ಕಾಯಿದೆಯನ್ನು 1991ರಲ್ಲಿ ಜಾರಿಗೆ ತರಲಾಗಿತ್ತು.

ಮಸೂದೆಯ ಮುಖ್ಯಾಂಶಗಳು

  • ಮಸೂದೆಗೆ ಸೆಕ್ಷನ್ 21ಅನ್ನು ಸೇರಿಸಲಾಗಿದ್ದು ಅದರ ಪ್ರಕಾರ ಶಾಸಕಾಂಗ ಮಾಡಬೇಕಾದ ಯಾವುದೇ ಕಾನೂನಿನಲ್ಲಿ ಉಲ್ಲೇಖಿಸಲಾದ ʼಸರ್ಕಾರʼ ಎಂಬ ಪದದ ಅರ್ಥ ಲೆಫ್ಟಿನೆಂಟ್‌ ಗವರ್ನರ್‌ ಎಂದಾಗುತ್ತದೆ.

  • "ಮಸೂದೆಗಳಿಗೆ ಸಮ್ಮತಿ" ಸೂಚಿಸುವ ಕುರಿತಾದ 1991ರ ಕಾಯಿದೆಯ ಸೆಕ್ಷನ್ 24ಕ್ಕೆ ನೂತನ ಮಸೂದೆಯ ಸೆಕ್ಷನ್‌ 3ರ ಮೂಲಕ ತಿದ್ದುಪಡಿ ತಂದಿದ್ದು, ಇದು ಲೆಫ್ಟಿನೆಂಟ್ ಗವರ್ನರ್‌ ಅವರ ಅಧಿಕಾರವನ್ನು ವಿಸ್ತರಿಸಲು ಪ್ರಯತ್ನಿಸುತ್ತದೆ.

  • ದೆಹಲಿಯ ದೈನಂದಿನ ಆಡಳಿತದ ವಿಷಯಗಳಿಗೆ ಸಂಬಂಧಿಸಿದಂತೆ ಪರಿಗಣಿಸಲು ಅಥವಾ ಆಡಳಿತಕ್ಕೆ ಸಂಬಂಧಿಸಿದಂತೆ ವಿಚಾರಣೆಗಳನ್ನು ನಡೆಸಲು ಶಾಸಕಾಂಗವು ತನ್ನನ್ನು ಅಥವಾ ತನ್ನ ಸಮಿತಿಯನ್ನು ಶಕ್ತಗೊಳಿಸಲು ಯಾವುದೇ ನಿಯಮ ರೂಪಿಸಲು ಸಾಧ್ಯವಾಗದಂತೆ ಕಾಯಿದೆಯ ಸೆಕ್ಷನ್ 33 ಕ್ಕೆ ಬದಲಾವಣೆಗಳನ್ನು ತರಲಾಗಿದೆ. ಗಮನಾರ್ಹವಾಗಿ, ಈ ನಿಬಂಧನೆಯನ್ನು ಅದರ ಪರಿಣಾಮದಲ್ಲಿ ಪೂರ್ವಾನ್ವಯವಾಗುವಂತೆ ಮಾಡಲು ಸಹ ಪ್ರಯತ್ನಿಸಲಾಗಿದೆ.

  • ಮಸೂದೆಯ 5 ನೇ ಸೆಕ್ಷನ್‌ ಕಾಯಿದೆಯಸೆಕ್ಷನ್ 44 ಕ್ಕೆ ('ವ್ಯವಹಾರದ ನಡವಳಿಕೆ' ಯೊಂದಿಗೆ ವ್ಯವಹರಿಸುವಾಗ) ಒಂದು ನಿಬಂಧನೆಯನ್ನು ಸೇರಿಸಲು ಪ್ರಯತ್ನಿಸುತ್ತದೆ, ಇದು ಕಾರ್ಯಾಂಗ ಕ್ರಮಕ್ಕೆ ಮೊದಲು ಎಲ್ಲಾ ವಿಚಾರಗಳಲ್ಲಿ ಯಾವುದೇ ವಿಷಯವನ್ನು ಪರಿಗಣಿಸುವ ಮುನ್ನ ಸರ್ಕಾರ ಲೆಫ್ಟಿನೆಂಟ್‌ ಗವರ್ನರ್ ಅಭಿಪ್ರಾಯ ಪಡೆಯುವುದನ್ನು ಕಡ್ಡಾಯಗೊಳಿಸುತ್ತದೆ.

ದೆಹಲಿ ಎನ್‌ಸಿಟಿ ಸರ್ಕಾರ ಮತ್ತು ಭಾರತ ಸರ್ಕಾರ ನಡುವಣ ಪ್ರಕರಣದಲ್ಲಿ ಮಾನ್ಯ ಸುಪ್ರೀಂ ಕೋರ್ಟ್ ಮಾಡಿದ ವ್ಯಾಖ್ಯಾನಕ್ಕೆ ಅನುಗುಣವಾಗಿ ಈ ತಿದ್ದುಪಡಿಯನ್ನು ಜಾರಿಗೆ ತರಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮಸೂದೆಯನ್ನು ಅಸಾಂವಿಧಾನಿಕ, ಪ್ರಜಾಪ್ರಭುತ್ವ ವಿರೋಧಿ ಎಂದು ಖಂಡಿಸಿದ್ದು ದೆಹಲಿ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವಣ ಅಧಿಕಾರ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ 2018ರಲ್ಲಿ ನೀಡಿದ್ದ ತೀರ್ಪಿಗೆ ವ್ಯತಿರಿಕ್ತವಾಗಿದೆ ಎಂದಿದ್ದಾರೆ.