ಸಲಿಂಗ ದಂಪತಿಗೂ ವಿಶೇಷ ವಿವಾಹ ಕಾಯಿದೆ ಅನ್ವಯಿಸುತ್ತದೆ ಎಂದು ಆದೇಶಿಸಲು ಕೋರಿ ದೆಹಲಿ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಕೆ

ಸಲಿಂಗ ವಿವಾಹಗಳಿಗೂ ವಿದೇಶಿ ವಿವಾಹ ಕಾಯಿದೆ-1969 ಅನ್ವಯವಾಗುತ್ತದೆ ಎಂದು ಆದೇಶಿಸುವಂತೆಯೂ ಕೋರಿ ಮತ್ತೊಂದು ಮನವಿ ಮಾಡಲಾಗಿದೆ.
ಲಿಂಗ ಗುರುತಿಸುವಿಕೆ ಮತ್ತು ಲೈಂಗಿಕ ಮನೋಭಾವದ ಆಚೆಗೂ ಎಲ್ಲ ದಂಪತಿಗೂ ವಿಶೇಷ ವಿವಾಹ ಕಾಯಿದೆ ಅನ್ವಯ-ಮನವಿ
ಲಿಂಗ ಗುರುತಿಸುವಿಕೆ ಮತ್ತು ಲೈಂಗಿಕ ಮನೋಭಾವದ ಆಚೆಗೂ ಎಲ್ಲ ದಂಪತಿಗೂ ವಿಶೇಷ ವಿವಾಹ ಕಾಯಿದೆ ಅನ್ವಯ-ಮನವಿ

ಲಿಂಗ ಗುರುತಿಸುವಿಕೆ ಮತ್ತು ಲೈಂಗಿಕ ಮನೋಭಾವದ ಆಚೆಗೂ ಎಲ್ಲ ದಂಪತಿಗೂ ವಿಶೇಷ ವಿವಾಹ ಕಾಯಿದೆ-1954 ಅನ್ವಯಿಸುತ್ತದೆ ಎಂದು ಘೋಷಿಸುವಂತೆ ಕೋರಿ ದೆಹಲಿ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಲಾಗಿದೆ (ಡಾ ಕವಿತಾ ಅರೋರಾ ವರ್ಸಸ್ ಭಾರತ ಸರ್ಕಾರ).

ಎಂಟು ವರ್ಷಗಳಿಂದ ವಿವಾಹ ಬಂಧನದಲ್ಲಿರುವ ಸಲಿಂಗ ದಂಪತಿ ಅರ್ಜಿ ಸಲ್ಲಿಸಿದ್ದು, ಸಲಿಂಗ ದಂಪತಿಯ ವಿವಾಹ ಸಂಭ್ರಮಕ್ಕೆ ಅವಕಾಶ ಮಾಡಿಕೊಡದೇ ಇರುವುದರಿಂದ ವಿಶೇಷ ವಿವಾಹ ಕಾಯಿದೆ-1954 ಅಸಾಂವಿಧಾನಿಕ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ವರ್ಷದ ಆರಂಭದಲ್ಲಿ ದಂಪತಿಯು ಆಗ್ನೇಯ ದೆಹಲಿಯ ಕಲ್ಕಾಜಿಯಲ್ಲಿ ವಿವಾಹಾಧಿಕಾರಿಯನ್ನು (ಎಸ್‌ಡಿಎಂ) ಸಂಪರ್ಕಿಸುವ ಮೂಲಕ ವಿಶೇಷ ವಿವಾಹ ಕಾಯಿದೆ-1954ರ ಅಡಿ ಸಂಭ್ರಮಕ್ಕೆ ಅವಕಾಶ ಮಾಡಿಕೊಡುವಂತೆ ಕೋರಿದ್ದರು. ಲೈಂಗಿಕ ಮನೋಭಾವದ ಏಕೈಕ ಕಾರಣವನ್ನು ನೀಡಿ ಅವರ ಇಚ್ಛೆಯ ವ್ಯಕ್ತಿಯನ್ನು ವರಿಸುವುದಕ್ಕೆ ನಿರಾಕರಿಸಲಾಗಿತ್ತು.

“ವಿವಾಹದ ಹೊರತು ಮನವಿದಾರರು ಕಾನೂನಿನ ಅನ್ವಯ ಅಪರಿಚಿತರು. ಭಾರತ ಸಂವಿಧಾನದ ಪರಿಚ್ಛೇದ 21ರ ಅಡಿ ಇಚ್ಛೆಯ ವ್ಯಕ್ತಿಯನ್ನು ವರಿಸುವ ಹಕ್ಕು ನೀಡಲಾಗಿದೆ: ಇದು ವಿರುದ್ಧ ಲಿಂಗ ಹೊಂದಿರುವವರಿಗೆ ಅನ್ವಯಿಸುವಂತೆ ಸಲಿಂಗ ದಂಪತಿಗೂ ಅನ್ವಯವಾಗುತ್ತದೆ” ಎಂದು ಮನವಿದಾರರು ವಾದಿಸಿದ್ದಾರೆ. ಇದರ ನಿರಾಕರಣೆಯು ಸಂವಿಧಾನದ ಪರಿಚ್ಛೇದ 14, 15, 19 ಮತ್ತು 21ರ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದೂ ಹೇಳಲಾಗಿದೆ.

ಶಕ್ತಿ ವಾಹಿನಿ ವರ್ಸಸ್ ಭಾರತ ಸರ್ಕಾರ ಮತ್ತು ಇತರರು ಪ್ರಕರಣವನ್ನು ಆಧರಿಸಿರುವ ಅರ್ಜಿದಾರರು ವ್ಯಕ್ತಿಯೊಬ್ಬರ ಆಯ್ಕೆಯು ಅವರ ಘನತೆಯ ಬೇರ್ಪಡಿಸಲಾಗದ ಭಾಗವಾಗಿದೆ. ಸಂಗಾತಿ ಆಯ್ಕೆಯು ಪ್ರತಿಯೊಬ್ಬ ವ್ಯಕ್ತಿಯ ವಿಶೇಷ ವ್ಯಾಪ್ತಿಗೆ ಒಳಪಟ್ಟಿರುತ್ತದೆ ಎಂದಿದ್ದಾರೆ. ಮುಂದುವರೆದು, ಸಾಂವಿಧಾನಿಕ ನೈತಿಕತೆಯು ಸಾಮಾಜಿಕ ನೈತಿಕತೆಯನ್ನು ಸೋಲಿಸುತ್ತದೆ ಎಂದು ಮನವಿದಾರರು ತಿಳಿಸಿದ್ದಾರೆ.

“ಸಂಗಾತಿಯ ಆಯ್ಕೆಯು ಸಂವಿಧಾನದತ್ತವಾಗಿ ದೊರೆತಿರುವ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಘನತೆಯ ಆಯ್ಕೆಯಾಗಿದೆ... ಸಮಾಜವು ಅಂತರ ಜಾತಿ ಮತ್ತು ಅಂತರ ಧರ್ಮೀಯ ವಿವಾಹಕ್ಕೆ ಅಸಮ್ಮತಿಸುವಂತೆ ಸಲಿಂಗ ಸಂಗಾತಿ ಆಯ್ಕೆಗೂ ವಿರೋಧಿಸುತ್ತದೆ. ಆದರೆ, ಸಾಂವಿಧಾನಿಕ ಹಕ್ಕನ್ನು ಜಾರಿಗೊಳಿಸುವ ಸಾಂವಿಧಾನಿಕ ಜವಾಬ್ದಾರಿ ನ್ಯಾಯಾಲಯಗಳಿದೆ” ಎಂದು ಹೇಳಲಾಗಿದೆ.

ಅರ್ಜಿದಾರರು ನವತೇಜ್ ಸಿಂಗ್ ಜೋಹರ್ ತೀರ್ಪಿನ್ನು ಆಧರಿಸಿದ್ದು, ಸಲಿಂಗ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಲು ಯಾವುದೇ ತರ್ಕಬದ್ಧ ಆಧಾರಗಳಿಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

“... ಜಾತ್ಯತೀತ ಶಾಸನದಡಿ ವಿಧ್ಯುಕ್ತ ವಿವಾಹಕ್ಕೆ ಸಂಬಂಧಿಸಿದಂತೆ ಸಲಿಂಗ ಅಥವಾ ವಿರುದ್ಧ ಲಿಂಗ ವಿವಾಹದ ಕುರಿತಾದ ವರ್ಗೀಕರಣದಲ್ಲಿ ಯಾವುದೇ ತೆರನಾದ ಸಮಂಜಸವಾದ ಅಥವಾ ಬೌದ್ಧಿಕ ವ್ಯತ್ಯಾಸಗಳಿಲ್ಲ” ಎಂದು ವಕೀಲರಾದ ಅರುಂಧತಿ ಕಾಟ್ಜು ಮತ್ತು ಸುರಭಿ ಧರ್ ಮೂಲಕ ಸಲ್ಲಿಸಿರುವ ಮನವಿಯಲ್ಲಿ ವಿವರಿಸಲಾಗಿದೆ.

ವಿದೇಶಿ ವಿವಾಹ ಕಾಯಿದೆ

ವಿಶೇಷ ವಿವಾಹ ಕಾಯಿದೆ ಪ್ರಶ್ನಿಸಿರುವುದರ ಜೊತೆಗೆ, ವಿದೇಶಿ ವಿವಾಹ ಕಾಯಿದೆ-1969 ಸಲಿಂಗ ವಿವಾಹಗಳಿಗೂ ಅನ್ವಯಿಸುತ್ತದೆ ಮತ್ತು ಹಾಗೆ ಮಾಡದೆ ಹೋದಲ್ಲಿ ಅಷ್ಟರಮಟ್ಟಿಗೆ ಅದು ಅಸಾಂವಿಧಾನಿಕವಾಗುತ್ತದೆ ಎಂದು ಘೋಷಿಸುವಂತೆ ಕೋರಿ ಮತ್ತೊಂದು ಅರ್ಜಿಯೂ ಸಲ್ಲಿಕೆಯಾಗಿದೆ (ವೈಭವ್ ಜೈನ್ ಮತ್ತು ಇತರರು ವರ್ಸಸ್ ಭಾರತ ಸರ್ಕಾರ).

ಅಮೆರಿಕಾದ ವಾಷಿಂಗ್ಟನ್ ಡಿ ಸಿಯಲ್ಲಿ ವಿವಾಹವಾಗಿರುವ ಇಬ್ಬರು ಸಲಿಂಗಿಗಳು ಅರ್ಜಿ ಸಲ್ಲಿಸಿದ್ದು, ಅವರ ಲೈಂಗಿಕ ಮನೋಭಾವದ ಆಧಾರದಲ್ಲಿ ನ್ಯೂಯಾರ್ಕ್‌ನ ಭಾರತೀಯ ದೂತವಾಸವು ವಿವಾಹ ನೋಂದಣಿಗೆ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತ್ತು.

Also Read
ವಿಶೇಷ ವಿವಾಹ ಕಾಯ್ದೆಯಡಿ ದಂಪತಿಯ ವೈಯಕ್ತಿಕ ವಿವರ ಸಲ್ಲಿಕೆ: ಕೇಂದ್ರಕ್ಕೆ ಸುಪ್ರೀಂ ನೋಟಿಸ್

ಸಲಿಂಗ ವಿವಾಹವನ್ನು ಗುರುತಿಸದಿರುವುದು ಕ್ರೂರ ನಡೆಯ ತಾರತಮ್ಯವಾಗಿದ್ದು, ಇದು ಎಲ್‌ಜಿಬಿಟಿಕ್ಯು ದಂಪತಿಯ ಘನತೆ ಮತ್ತು ಸ್ವಯಂ ಪರಿಪೂರ್ಣತೆಗೆ ಮೂಲದಲ್ಲಿ ಧಕ್ಕೆ ತರುತ್ತದೆ ಅರ್ಜಿದಾರರು ವಾದಿಸಿದ್ದಾರೆ.

ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ನವೀನ್ ಚಾವ್ಲಾ ಅವರಿದ್ದ ಏಕಸದಸ್ಯ ಪೀಠವು ಅರ್ಜಿ ವಿಚಾರಣೆ ನಡೆಸಿದ್ದು, ಅಕ್ಟೋಬರ್ 14ರಂದು ವಿಭಾಗೀಯ ಪೀಠದ ಮುಂದೆ ಅರ್ಜಿ ವಿಚಾರಣೆಗೆ ಮಂಡಿಸುವಂತೆ ಸೂಚಿಸಿದ್ದಾರೆ. ಹಿರಿಯ ವಕೀಲ ಮೇನಕಾ ಗುರುಸ್ವಾಮಿ ಅವರು ಅರ್ಜಿದಾರರ ಪರವಾಗಿ ವಾದಿಸಿದರು.

Related Stories

No stories found.
Kannada Bar & Bench
kannada.barandbench.com