Nawab Malik, ED
Nawab Malik, ED 
ಸುದ್ದಿಗಳು

ಅಕ್ರಮ ಹಣ ವರ್ಗಾವಣೆ ಪ್ರಕರಣ: ನವಾಬ್ ಮಲಿಕ್ ಜಾಮೀನು ಅರ್ಜಿ ತಿರಸ್ಕರಿಸಿದ ಮುಂಬೈ ನ್ಯಾಯಾಲಯ

Bar & Bench

ಭೂಗತ ಪಾತಕಿ ದಾವೂದ್ ಇಬ್ರಾಹಿಂ ನಂಟಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ  ಮಾಜಿ ಸಚಿವ ನವಾಬ್ ಮಲಿಕ್ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಮುಂಬೈ ನ್ಯಾಯಾಲಯ ಬುಧವಾರ ತಿರಸ್ಕರಿಸಿದೆ.

ಮಲಿಕ್ ಅವರು ಸಲ್ಲಿಸಿದ್ದ ಸಾಮಾನ್ಯ ಜಾಮೀನು ಅರ್ಜಿಗೆ ಸಂಬಂಧಿಸಿದ ತೀರ್ಪನ್ನು ಪಿಎಂಎಲ್‌ಎ ವಿಶೇಷ ನ್ಯಾಯಾಧೀಶ ಆರ್‌ ಎನ್‌ ರೋಕಡೆ ಅವರು ಇಂದು ಪ್ರಕಟಿಸಿದರು. ಆದೇಶದ ವಿವರವಾದ ಪ್ರತಿಯನ್ನು ನಿರೀಕ್ಷಿಸಲಾಗುತ್ತಿದೆ.

ದಾವೂದ್‌ನಿಂದ ಮಾರುಕಟ್ಟೆ ಮೌಲ್ಯಕ್ಕಿಂತ ಕಡಿಮೆ ದರದಲ್ಲಿ ಆಸ್ತಿ ಖರೀದಿಸಿದ ಆರೋಪದ ಮೇಲೆ ಜಾರಿ ನಿರ್ದೇಶನಾಲಯ ( ಇ ಡಿ ) ಮಲಿಕ್ ಅವರನ್ನು ಬಂಧಿಸಿತ್ತು.

ಮಲಿಕ್‌ ಅವರಿಗೆ ಸಮನ್ಸ್‌ ನೀಡಿದ್ದ ಇ ಡಿ ನಂತರ ವಿಚಾರಣೆಗಾಗಿ ಫೆಬ್ರವರಿ 23ರಂದು ಬೆಳಗ್ಗೆ 7ಕ್ಕೆ ಅವರ ನಿವಾಸದಿಂದ ಕರೆದೊಯ್ದಿತ್ತು ಎನ್ನಲಾಗಿದೆ. ಸುಮಾರು 8 ಗಂಟೆಗಳ ಕಾಲ ವಿಚಾರಣೆ ನಡೆಸಿದ ನಂತರ, ಮಲಿಕ್ ಅವರನ್ನು ಬಂಧಿಸಿ 8 ದಿನಗಳ ಕಾಲ ಇ ಡಿ ಕಸ್ಟಡಿಗೆ ಒಪ್ಪಿಸಲಾಗಿತ್ತು. ನಂತರ ಅವರು ನ್ಯಾಯಾಂಗ ಬಂಧನಕ್ಕೊಳಪಟ್ಟಿದ್ದರು.

ಈ ಹಿನ್ನೆಲೆಯಲ್ಲಿ ನವಾಬ್‌ ಅವರು ಬಾಂಬೆ ಹೈಕೋರ್ಟ್‌ಗೆ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿತ್ತು. ಈ ಆದೇಶವನ್ನು ಸುಪ್ರೀಂ ಕೋರ್ಟ್‌ ಎತ್ತಿಹಿಡಿದಿತ್ತು.

ಮೇ 2022ರಲ್ಲಿ ಪಿಎಂಎಲ್‌ಎ ವಿಶೇಷ ನ್ಯಾಯಾಲಯ ಆರೋಪಪಟ್ಟಿಯನ್ನು ವಿಚಾರಣೆಗೆ ಪರಿಗಣಿಸಿದ ನಂತರ ಮಲಿಕ್ ಅವರು ಸಿಆರ್‌ಪಿಸಿ ಸೆಕ್ಷನ್ 439ರ ಅಡಿಯಲ್ಲಿ ನಿಯಮಿತ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು.

6 ತಿಂಗಳ ತನಿಖೆಯ ನಂತರ 9 ಸಂಪುಟಗಳಲ್ಲಿ ಬೃಹತ್ ಆರೋಪಪಟ್ಟಿ ಸಲ್ಲಿಸಲಾಯಿತಾದರೂ, ಇ ಡಿ ಇನ್ನೂ 22 ವರ್ಷಗಳ ಹಿಂದೆ ಸುಳ್ಳು ಆರೋಪ ಮಾಡಿದ್ದ ಮುನೀರಾ ಎಂಬುವವರು ನೀಡಿದ್ದ ಹೇಳಿಕೆಯನ್ನೇ ಅವಲಂಬಿಸಿದೆ ಎಂದು ಮಲಿಕ್‌ ದೂರಿದ್ದರು. ರಾಜಕೀಯ ದ್ವೇಷಕ್ಕೆ ತನ್ನನ್ನು ಗುರಿ ಮಾಡಲಾಗಿದೆ ಎಂದು ಕಿಡಿಕಾರಿದ್ದರು.