[ಅಕ್ರಮ ಹಣ ವರ್ಗಾವಣೆ ಪ್ರಕರಣ] ಮಹಾರಾಷ್ಟ್ರ ಸಚಿವ ನವಾಬ್‌ ಮಲಿಕ್‌ ಜಾಮೀನು ಮನವಿ ವಜಾ ಮಾಡಿದ ಸುಪ್ರೀಂ ಕೋರ್ಟ್‌

“ಸೂಕ್ತ ನ್ಯಾಯಾಲಯದಲ್ಲಿ ನೀವು ಜಾಮೀನು ಕೋರಬಹುದಾಗಿದ್ದು, ನಾವು ಈ ಹಂತದಲ್ಲಿ ಮಧ್ಯಪ್ರವೇಶಿಸಲಾಗದು. ಇದು ಅತ್ಯಂತ ಆರಂಭ ಸಮಯ” ಎಂದು ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಅವರ ನೇತೃತ್ವದ ವಿಭಾಗೀಯ ಪೀಠವು ಹೇಳಿದೆ.
Nawab Malik, ED
Nawab Malik, ED
Published on

ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜೊತೆ ಸಂಪರ್ಕದ ಶಂಕೆಯ ಹಿನ್ನೆಲೆಯಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಮಹಾರಾಷ್ಟ್ರ ಸಂಪುಟ ದರ್ಜೆ ಸಚಿವ ನವಾಬ್‌ ಮಲಿಕ್‌ ಅವರು ನ್ಯಾಯಾಂಗ ಬಂಧನದಿಂದ ಬಿಡುಗಡೆ ಮಾಡುವಂತೆ ಕೋರಿದ್ದ ಮನವಿಯನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ವಜಾ ಮಾಡಿದೆ.

“ಸೂಕ್ತ ನ್ಯಾಯಾಲಯದಲ್ಲಿ ನೀವು ಜಾಮೀನು ಕೋರಬಹುದಾಗಿದ್ದು, ನಾವು ಈ ಹಂತದಲ್ಲಿ ಮಧ್ಯಪ್ರವೇಶಿಸಲಾಗದು. ಇದು ಅತ್ಯಂತ ಆರಂಭಿಕ ಹಂತ” ಎಂದು ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಅವರ ನೇತೃತ್ವದ ವಿಭಾಗೀಯ ಪೀಠವು ಹೇಳಿತು.

ಮಲಿಕ್‌ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಕಪಿಲ್‌ ಸಿಬಲ್‌ ಅವರು “ದೃಢೀಕೃತವಾದ ಯಾವುದೇ ಅಪರಾಧ ಇಲ್ಲದಿರುವಾಗ ಅಕ್ರಮ ಹಣ ವರ್ಗಾವಣೆ ಪ್ರಕರಣ ಹೇಗೆ ಅನ್ವಯಿಸುತ್ತದೆ” ಎಂದರು.

Also Read
ದಾವೂದ್ ಇಬ್ರಾಹಿಂಗೆ ಅಕ್ರಮ ಹಣ ವರ್ಗಾವಣೆ ಪ್ರಕರಣ: ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ 8 ದಿನ ಇ ಡಿ ವಶಕ್ಕೆ

ಅರ್ನಬ್‌ ಗೋಸ್ವಾಮಿ ಪ್ರಕರಣದಲ್ಲಿ ನ್ಯಾ. ಚಂದ್ರಚೂಡ್‌ ಅವರ ತೀರ್ಪನ್ನು ಉಲ್ಲೇಖಿಸಿದ ಸಿಬಲ್‌ ಅವರು “ಯಾವುದೇ ದೃಢೀಕೃತ ಅಪರಾಧವಿಲ್ಲ. ಹೀಗಿರುವಾಗ ಅಕ್ರಮ ಹಣ ವರ್ಗಾವಣೆ ಕಾಯಿದೆ ಹೇಗೆ ಅನ್ವಯಿಸುತ್ತದೆ? ನಾವು ಹೈಕೋರ್ಟ್‌ ಆದೇಶವನ್ನು ವಿರೋಧಿಸುತ್ತೇವೆ. ಅರ್ನಬ್‌ ಗೋಸ್ವಾಮಿ ಪ್ರಕರಣವು ನಮ್ಮ ಪರವಾಗಿದೆ” ಎಂದರು.

ಆಗ ಪೀಠವು “ಇದಕ್ಕೆ ಅನುಮತಿಸಲಾಗದು. ಮನವಿ ವಜಾ ಮಾಡಲಾಗಿದೆ” ಎಂದಿತು. ಮಾರ್ಚ್‌ 15ರಂದು ಜಾಮೀನು ಮನವಿ ವಜಾ ಮಾಡಿದ ಬಾಂಬೆ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಮಲಿಕ್‌ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ದಾವೂದ್ ಇಬ್ರಾಹಿಂ ಅವರಿಂದ ಮಲಿಕ್‌ ಆಸ್ತಿ ಖರೀದಿಸಿದ್ದಾರೆ ಎಂದು ಆರೋಪಿಸಿ ಜಾರಿ ನಿರ್ದೇಶನಾಲಯವು ಮಲಿಕ್‌ ಅವರನ್ನು ಬಂಧಿಸಿದೆ.

Kannada Bar & Bench
kannada.barandbench.com