ಸುದ್ದಿಗಳು

ಸುಧಾ ಭಾರದ್ವಾಜ್ ಜಾಮೀನು ಪ್ರಶ್ನಿಸಿದ್ದ ಎನ್ಐಎ ಮೇಲ್ಮನವಿ ಸುಪ್ರೀಂಕೋರ್ಟ್‌ನಲ್ಲಿ ತಿರಸ್ಕೃತ

Bar & Bench

ಭೀಮಾ ಕೋರೆಗಾಂವ್-ಎಲ್ಗಾರ್ ಪರಿಷತ್ ಜಾತಿ ಹಿಂಸಾಚಾರ ಪ್ರಕರಣದಲ್ಲಿ ವಕೀಲೆ ಸಾಮಾಜಿಕ ಹೋರಾಟಗಾರ್ತಿ ಸುಧಾ ಭಾರದ್ವಾಜ್‌ ಅವರಿಗೆ ಡಿಫಾಲ್ಟ್‌ ಜಾಮೀನು ನೀಡಿದ ಬಾಂಬೆ ಹೈಕೋರ್ಟ್‌ ಆದೇಶದ ವಿರುದ್ಶ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸಲ್ಲಿಸಿದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ತಿರಸ್ಕರಿಸಿದೆ.

ಎನ್‌ಐಎ ಪ್ರಕರಣಗಳ ವಿಚಾರಣೆ ನಡೆಸುವ ವಿಶೇಷ ನ್ಯಾಯಾಲಯ ಮಾತ್ರ ಯುಎಪಿಎ ಸೆಕ್ಷನ್ 43 ಡಿ(2) ಮತ್ತು ಸಿಆರ್‌ಪಿಸಿ ಸೆಕ್ಷನ್ 167(2) ರ ನಿಯಮಗಳ ಅಡಿ ತನಿಖೆ ಮತ್ತು ಬಂಧನ ಅವಧಿ ವಿಸ್ತರಿಸಬಹುದಾಗಿದೆ ಎಂದು ನ್ಯಾಯಮೂರ್ತಿಗಳಾದ ಯು ಯು ಲಲಿತ್, ಎಸ್ ರವೀಂದ್ರ ಭಟ್ ಹಾಗೂ ಬೇಲಾ ಎಂ ತ್ರಿವೇದಿ ಅವರಿದ್ದ ಪೀಠ ತಿಳಿಸಿದೆ.

"ವಿಶೇಷ ನ್ಯಾಯಾಧೀಶರು ಇರುವ ವಿಶೇಷ ನ್ಯಾಯಾಲಯಗಳು ಅಸ್ತಿತ್ವದಲ್ಲಿರುವಾಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ವಿಸ್ತರಣೆಗಾಗಿ ನೀವು ಈ ಅರ್ಜಿ ಏಕೆ ಸಲ್ಲಿಸಿದ್ದೀರಿ" ಎಂದು ಪೀಠ ಪ್ರಶ್ನಿಸಿತು.

ಡಿಫಾಲ್ಟ್ ಜಾಮೀನು ಪಡೆಯಲು ಸುಧಾ ಅವರಿಗೆ ಬಾಂಬೆ ಹೈಕೋರ್ಟ್‌ ಡಿಸೆಂಬರ್ 1 ರಂದು ಅನುಮತಿ ನೀಡಿತ್ತು. ತನಿಖೆಯ ಗಡುವು ವಿಸ್ತರಿಸಿದ್ದು ಹಾಗೂ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಸೆಕ್ಷನ್ 43 ಡಿ (2) ಮತ್ತು ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 167 (2) ರ ನಿಬಂಧನೆಗಳ ಅಡಿ ಅವರನ್ನು ವಶಕ್ಕೆ ನೀಡುವಂತೆ ಸೂಚಿಸಿರುವುದು ತೀರ್ಪು ನೀಡಿದ ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೈಕೋರ್ಟ್‌ ಹೇಳಿತ್ತು. ಪುಣೆಯಲ್ಲಿರುವ ವಿಶೇಷ ನ್ಯಾಯಾಲಯದಲ್ಲೇ ಆರೋಪಪಟ್ಟಿ ಸಲ್ಲಿಸಬೇಕಿತ್ತು ಎಂದು ನ್ಯಾಯಾಲಯ ಹೇಳಿತ್ತು.

ಡಿಫಾಲ್ಟ್ ಜಾಮೀನಿನ ಮೇಲೆ ಆರೋಪಿಯನ್ನು ಬಿಡುಗಡೆ ಮಾಡುವ ಹಕ್ಕನ್ನು ತೆಗೆದುಹಾಕಲಾಗದು ಮತ್ತು ಅದು ಸಂವಿಧಾನದ 21 ನೇ ಪರಿಚ್ಛೇದದ ಅಡಿಯಲ್ಲಿ ಕಾನೂನು ಸ್ಥಾಪಿಸಿದ ಕಾರ್ಯವಿಧಾನದಿಂದ ದೊರೆತ ಮೂಲಭೂತ ಹಕ್ಕಿಗೆ ಸಂಬಂಧಿಸಿದ್ದಾಗಿದೆ ಎಂದು ಹಲವು ತೀರ್ಪುಗಳನ್ನು ಆಧರಿಸಿ ಅದು ತೀರ್ಪು ನೀಡಿತ್ತು.