ಅಸ್ಸಾಂ ಕಾಂಗ್ರೆಸ್ ಯುವ ಘಟಕದ ಉಚ್ಛಾಟಿತ ನಾಯಕಿಯೊಬ್ಬರ ಗೌರವಕ್ಕೆ ಧಕ್ಕೆ ತಂದ ಆರೋಪದಲ್ಲಿ ಕರ್ನಾಟಕ ಮೂಲದ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ ವಿ ಶ್ರೀನಿವಾಸ್ ಅವರ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಬುಧವಾರ ನಿರೀಕ್ಷಣಾ ಜಾಮೀನು ನೀಡಿದೆ [ಬಿ ವಿ ಶ್ರೀನಿವಾಸ್ ಮತ್ತು ಅಸ್ಸಾಂ ಸರ್ಕಾರ ನಡುವಣ ಪ್ರಕರಣ].
ಸ್ಥಾಪಿತವಾದ ಕಾನೂನಿನಂತೆ ನಿರೀಕ್ಷಣಾ ಜಾಮೀನು ಹಂತದಲ್ಲಿ ವಾದದ ವಿವರಗಳನ್ನು ಪರಿಶೀಲಿಸುವ ಬದಲು ಕನಿಷ್ಠ ವಾಸ್ತವ ಸಂಗತಿಗಳ ಮೇಲೆ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಸಂಜಯ್ ಕರೋಲ್ ಅವರಿದ್ದ ಪೀಠ ತನ್ನ ತೀರ್ಪು ಕೇಂದ್ರೀಕರಿಸಿತು.
“ಸುದೀರ್ಘ ವಾದ ಸರಣಿ ಮುಂದುವರಿಸಲಾಗಿದ್ದರೂ ಈ ಹಂತದಲ್ಲಿ ಪ್ರಕರಣವನ್ನು ವಿವರವಾಗಿ ಪರಿಗಣಿಸಲು ಉದ್ದೇಶಿಸಿಲ್ಲ. ನಿರೀಕ್ಷಣಾ ಜಾಮೀನಿನ ವಿಚಾರಣೆ ನಡೆಸುವಾಗ ಸಾಕ್ಷ್ಯದ ವಿವರವಾದ ವಿಶ್ಲೇಷಣೆ ಇರಬಾರದು ಎಂಬುದನ್ನು ಈಗಾಗಲೇ ಇತ್ಯರ್ಥಗೊಳಿಸಲಾಗಿದೆ. ನಾವು ಕೇವಲ ಕನಿಷ್ಠ ವಾಸ್ತವಾಂಶಗಳು ಮತ್ತು ದಿನಗಳನ್ನು ಉಲ್ಲೇಖಿಸುತ್ತೇವೆ” ಎಂದು ಪೀಠ ವಿವರಿಸಿತು.
ಅದರಂತೆ ಎಫ್‌ಐಆರ್ ದಾಖಲಿಸಿಕೊಳ್ಳಲು ತಿಂಗಳ ಕಾಲ ವಿಳಂಬ ಮಾಡಿದ್ದನ್ನು ಪರಿಗಣಿಸಿದ ನ್ಯಾಯಾಲಯ ಮಧ್ಯಂತರ ರಕ್ಷಣೆ ಪಡೆಯಲು ಶ್ರೀನಿವಾಸ್ ಅರ್ಹರು ಎಂದು ನಿರ್ಧರಿಸಿತು.
ಶ್ರೀನಿವಾಸ್ ಅವರನ್ನು ₹ 50,000 ಬಾಂಡ್ ಮತ್ತು ಒಂದು ಅಥವಾ ಎರಡು ಶ್ಯೂರಿಟಿಗಳನ್ನು ಪಡೆದು ನಿರೀಕ್ಷಣಾ ಜಾಮೀನು ನೀಡುವಂತೆ ನ್ಯಾಯಾಲಯ ಆದೇಶಿಸಿತು. ತನಿಖೆಗೆ ಸಹಕರಿಸುವಂತೆ ಶ್ರೀನಿವಾಸ್ ಅವರಿಗೆ ನಿರ್ದೇಶನ ನೀಡಿದ ನ್ಯಾಯಾಲಯ ಈ ಸಂಬಂಧ ಅಸ್ಸಾಂ ಸರ್ಕಾರಕ್ಕೂ ನೋಟಿಸ್ ನೀಡಿತು.
ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸಲು ನಿರಾಕರಿಸಿರುವ ಗುವಾಹಟಿ ಹೈಕೋರ್ಟ್ ಆದೇಶ ಪ್ರಶ್ನಿಸಿ ಶ್ರೀನಿವಾಸ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ನೀಡಿದೆ.