Justices UU Lalit, Ravindra Bhat and Bela Trivedi 
ಸುದ್ದಿಗಳು

ಚರ್ಮದಿಂದ ಚರ್ಮ ಸ್ಪರ್ಶಿಸಿದ್ದರೆ ಮಾತ್ರ ಲೈಂಗಿಕ ದೌರ್ಜನ್ಯ ಎನ್ನುವ ಬಾಂಬೆ ಹೈಕೋರ್ಟ್ ತೀರ್ಪು ರದ್ದುಗೊಳಿಸಿದ ಸುಪ್ರೀಂ

ಪೊಕ್ಸೊ ಕಾಯಿದೆಯಡಿ 'ಲೈಂಗಿಕ ಆಕ್ರಮಣ'ದ ಅಪರಾಧ ನಿರ್ಧರಿಸುವ ಪ್ರಮುಖ ಅಂಶ ಲೈಂಗಿಕ ಉದ್ದೇಶವೇ ವಿನಾ ಚರ್ಮದಿಂದ ಚರ್ಮಕ್ಕೆ ಸಂಪರ್ಕ ಹೊಂದುವುದಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

Bar & Bench

ಮಕ್ಕಳ ಸ್ತನವನ್ನು ಬಟ್ಟೆ ತೆಗೆಯದೆ ಸ್ಪರ್ಶಿಸಿdರೆ ಅದು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆಯ ಸೆಕ್ಷನ್ 7 ರ ಅಡಿಯಲ್ಲಿ ʼಲೈಂಗಿಕ ದೌರ್ಜನ್ಯʼ ಆಗುವುದಿಲ್ಲ ಎಂದು ಬಾಂಬೆ ಹೈಕೋರ್ಟ್‌ ಕೆಲ ತಿಂಗಳುಗಳ ಹಿಂದೆ ನೀಡಿದ್ದ ವಿವಾದಾತ್ಮಕ ತೀರ್ಪನ್ನು ಸುಪ್ರೀಂಕೋರ್ಟ್‌ ಗುರುವಾರ ರದ್ದುಗೊಳಿಸಿದೆ (ಭಾರತದ ಅಟಾರ್ನಿ ಜನರಲ್ ಮತ್ತು ಸತೀಶ್ ನಡುವಣ ಪ್ರಕರಣ).

ಪೊಕ್ಸೊ ಕಾಯಿದೆಯಡಿ 'ಲೈಂಗಿಕ ಆಕ್ರಮಣ'ದ ಅಪರಾಧ ನಿರ್ಧರಿಸುವ ಪ್ರಮುಖ ಅಂಶ ಲೈಂಗಿಕ ಉದ್ದೇಶವೇ ವಿನಾ ಚರ್ಮದಿಂದ ಚರ್ಮಕ್ಕೆ ಸಂಪರ್ಕ ಹೊಂದುವುದಲ್ಲ ಎಂದು ನ್ಯಾಯಮೂರ್ತಿಗಳಾದ ಯು ಯು ಲಲಿತ್, ಎಸ್ ರವೀಂದ್ರ ಭಟ್ ಹಾಗೂ ಬೇಲಾ ಎಂ ತ್ರಿವೇದಿ ಅವರಿದ್ದ ಪೀಠ ತಿಳಿಸಿತು.

ನಿಯಮವೊಂದು ಕಾಯಿದೆಯನ್ನು ಸೋಲಿಸುವ ಬದಲು ಅದು ಶಾಸಕಾಂಗದ ಉದ್ದೇಶದ ಮೇಲೆ ಪರಿಣಾಮ ಬೀರುವ ರೀತಿಯ ವ್ಯಾಖ್ಯಾನ ನೀಡಬೇಕು ಎಂದು ನ್ಯಾಯಾಲಯ ಒತ್ತಿ ಹೇಳಿದೆ. "ಲೈಂಗಿಕ ದೌರ್ಜನ್ಯದ ಅಪರಾಧವನ್ನು ನಿರ್ಧರಿಸುವ ಪ್ರಮುಖ ಅಂಶವೆಂದರೆ ಲೈಂಗಿಕ ಉದ್ದೇಶವೇ ಹೊರತು ಮಗುವಿನೊಂದಿಗೆ ಚರ್ಮದಿಂದ ಚರ್ಮದ ಸಂಪರ್ಕ ಹೊಂದುವುದಲ್ಲ. ನಿಯಮವೊಂದನ್ನು ರೂಪಿಸುವುದು ನಿಯಮಕ್ಕೆ ಪರಿಣಾಮಕಾರಿಯಾಗುವಂತೆ ಇರಬೇಕೆ ವಿನಾ ಅದನ್ನು ನಾಶಗೊಳಿಸುವಂತೆ ಇರಬಾರದು. ಶಾಸಕಾಂಗದ ಉದ್ದೇಶ ಕಾರ್ಯಗತಗೊಳಿಸದೆ ವ್ಯಾಪಕ ವ್ಯಾಖ್ಯಾನ ನೀಡಬಾರದು” ಎಂದು ನ್ಯಾಯಾಲಯ ಹೇಳಿದೆ.

ಚರ್ಮದಿಂದ ಚರ್ಮಕ್ಕೆ ಸಂಪರ್ಕ ಹೊಂದಿದ್ದರೆ ಮಾತ್ರ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಕಡ್ಡಾಯಗೊಳಿಸುವುದು ಸಂಕುಚಿತ ಮತ್ತು ಅಸಂಬದ್ಧ ವ್ಯಾಖ್ಯಾನಕ್ಕೆ ಕಾರಣವಾಗುತ್ತದೆ ಎಂದು ನ್ಯಾಯಾಲಯ ವಿವರಿಸಿದೆ.

ಆದ್ದರಿಂದ, ಲೈಂಗಿಕ ಉದ್ದೇಶದಿಂದ ಮಗುವಿನ ಯಾವುದೇ ಲೈಂಗಿಕ ಭಾಗವನ್ನು ಸ್ಪರ್ಶಿಸುವ ಯಾವುದೇ ಕ್ರಿಯೆಯನ್ನು ಪೊಕ್ಸೊ ಕಾಯಿದೆಯ ಸೆಕ್ಷನ್ 7ರ ವ್ಯಾಪ್ತಿಯಿಂದ ತೆಗೆದುಹಾಕಲಾಗದು ಎಂದು ಅದು ತೀರ್ಪು ನೀಡಿದೆ. ನ್ಯಾಯಮೂರ್ತಿ ರವೀಂದ್ರ ಭಟ್ ಅವರು ಈ ಕುರಿತಾಗಿ ಪ್ರತ್ಯೇಕ ತೀರ್ಪು ನೀಡಿದರು.

ಕಾನೂನಿಗೆ ಸಂಬಂಧಿಸಿದಂತೆ ಶಾಸಕಾಂಗ ಸ್ಪಷ್ಟ ಉದ್ದೇಶ ವ್ಯಕ್ತಪಡಿಸಿರುವಾಗ, ನ್ಯಾಯಾಲಯಗಳು ಅದಕ್ಕೆ ಸಂಬಂಧಿಸಿದಂತೆ ಅಸ್ಪಷ್ಟತೆ ಮೂಡಿಸಬಾರದು ಎಂದು ನ್ಯಾಯಾಲಯ ಇಂದಿನ ತೀರ್ಪಿನಲ್ಲಿ ಹೇಳಿದೆ. “ಕಾನೂನಿನ ಉದ್ದೇಶ ಅಪರಾಧಿಯನ್ನು ಕಾನೂನಿನ ಜಾಲದಿಂದ ತಪ್ಪಿಸಿಕೊಳ್ಳಲು ಅನುಮತಿಸುವಂತೆ ಇರಬಾರದು" ಎಂದು ಅದು ತಿಳಿಸಿದೆ.

ಇದೇ ವೇಳೆ ಹೈಕೋರ್ಟ್ ತೀರ್ಪನ್ನು ತಳ್ಳಿಹಾಕಿದ ನ್ಯಾಯಾಲಯ ಆರೋಪಿಯು 3 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ಒಂದು ತಿಂಗಳ ಸಾದಾ ಜೈಲು ಶಿಕ್ಷೆ ಅನುಭವಿಸಬೇಕು ಎಂದು ಆದೇಶಿಸಿದೆ.

ಹಿನ್ನೆಲೆ

12 ವರ್ಷದ ಹುಡುಗಿಯ ಬಟ್ಟೆ ತೆಗೆಯದೆ ಆಕೆಯ ಸ್ತನ ಸ್ಪರ್ಶಿಸಿದರೆ ಅದನ್ನು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆಯ (ಪೊಕ್ಸೊ) ಸೆಕ್ಷನ್ 7ರ ಅಡಿ ಲೈಂಗಿಕ ದೌರ್ಜನ್ಯ ಎಂದು ವ್ಯಾಖ್ಯಾನಿಸಲಾಗದು. ಬದಲಿಗೆ ಇದು ಮಹಿಳೆಯ ಘನತೆಗೆ ಧಕ್ಕೆ ತರುವುದನ್ನು ಅಪರಾಧೀಕರಿಸುವ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 354 ರ ವ್ಯಾಪ್ತಿಗೆ ಬರುತ್ತದೆ ಎಂದು ಬಾಂಬೆ ಹೈಕೋರ್ಟ್‌ ನಾಗಪುರ ಪೀಠದ ನ್ಯಾಯಮೂರ್ತಿ ಪುಷ್ಪಾ ವಿ ಗಣೇದಿವಾಲಾ ಈ ವರ್ಷದ ಜನವರಿಯಲ್ಲಿ ತೀರ್ಪು ನೀಡಿದ್ದರು. ತೀರ್ಪಿನ ಹಿಂದಿನ ತಾರ್ಕಿಕತೆಯನ್ನು ಕಾನೂನು ತಜ್ಞರು ಮತ್ತು ಜನ ಸಾಮಾನ್ಯರು ತೀವ್ರವಾಗಿ ಟೀಕಿಸಿದ್ದರು.

ಅಟಾರ್ನಿ ಜನರಲ್‌ ಕೆ ಕೆ ವೇಣುಗೋಪಾಲ್‌ ಅವರು “ಇದು (ಬಾಂಬೆ ಹೈಕೋರ್ಟ್‌ನ) ಬಹಳ ಗೊಂದಲಮಯ ತೀರ್ಪು” ಎಂದು ನ್ಯಾಯಾಲಯಕ್ಕೆ ತಿಳಿಸಿದ ನಂತರ ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ಅವರಿದ್ದ ಸುಪ್ರೀಂಕೋರ್ಟ್‌ ಪೀಠ ತಡೆಯಾಜ್ಞೆ ನೀಡಿತ್ತು.