ಮಹಿಳಾ ಹಕ್ಕುಗಳ ಕುರಿತಂತೆ ಮಹತ್ವದ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್ ತಾಯಂದಿರು ತಮ್ಮ ಮಕ್ಕಳಿಗೆ ಹಾಲುಣಿಸಲು ನೆರವಾಗುವ ಸಾಕಷ್ಟು ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಬದ್ಧವಾಗಿರಬೇಕು ಎಂದು ಹೇಳಿದೆ [ಅವ್ಯಾನ್ ಪ್ರತಿಷ್ಠಾನದ ಮಾತೃ ಸ್ಪರ್ಶ್ ವಿಭಾಗ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].
ಎದೆಹಾಲುಣಿಸುವಿಕೆಯು ಮಹಿಳೆಯ ಸಂತಾನೋತ್ಪತ್ತಿ ಪ್ರಕ್ರಿಯೆಯ ಅವಿಭಾಜ್ಯ ಅಂಗವಾಗಿದ್ದು ತಾಯಿ ಮತ್ತು ಮಗುವಿನ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಅದು ಅತ್ಯಗತ್ಯ ಎಂದು ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಪ್ರಸನ್ನ ಬಿ ವರಾಳೆ ಅವರಿದ್ದ ಪೀಠ ತಿಳಿಸಿದೆ.
ತಾಯಂದಿರು ತಮ್ಮ ಮಕ್ಕಳಿಗೆ ಎದೆಹಾಲುಣಿಸಲು ಅನುಕೂಲವಾಗುವಂತೆ ಸಾಕಷ್ಟು ಸೌಲಭ್ಯಮತ್ತು ವಾತಾವರಣ ಸೃಷ್ಟಿಸುವುದು ಸರ್ಕಾರಗಳ ಕರ್ತವ್ಯ.ಸುಪ್ರೀಂ ಕೋರ್ಟ್
ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಕೆಲಸದ ಸ್ಥಳಗಳಲ್ಲಿ ಸ್ತನ್ಯಪಾನ ಮಾಡಿಸುವುದಕ್ಕೆ ಕಳಂಕ ಬಾರದಂತೆ ನಾಗರಿಕರು ನೋಡಿಕೊಳ್ಳಬೇಕು ಎಂದು ಕೂಡ ನ್ಯಾಯಾಲಯ ಹೇಳಿದೆ.
" ಮಕ್ಕಳಿಗೆ ಹಾಲುಣಿಸುವ ಹಕ್ಕನ್ನು ತಾಯಂದಿರು ಚಲಾಯಿಸಲು ಅನುಕೂಲವಾಗುವಂತೆ ಮಾಡುವುದು ಸರ್ಕಾರದ ಅತಿ ಪ್ರಾಶಸ್ತ್ಯದ ಕರ್ತವ್ಯವಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಕೆಲಸದ ಸ್ಥಳಗಳಲ್ಲಿ ಹಾಲುಣಿಸುವುದಕ್ಕೆ ಕಳಂಕ ಬರದಂತೆ ನಾಗರಿಕರು ನೋಡಿಕೊಳ್ಳಬೇಕು" ಎಂದು ಅದು ಹೇಳಿತು.
ಸಾರ್ವಜನಿಕ ಸ್ಥಳಗಳಲ್ಲಿ ಶಿಶುಗಳು ಮತ್ತು ತಾಯಂದಿರಿಗೆ ಅಗತ್ಯವಿರುವ ಹಾಲುಣಿಸುವ ಕೊಠಡಿಗಳು ಮತ್ತು ಮಕ್ಕಳ ಆರೈಕೆ ಕೊಠಡಿಗಳು ಅಥವಾ ಅಂತಹ ಬೇರೆ ಸೌಲಭ್ಯಗಳನ್ನು ಸರ್ಕಾರ ರೂಪಿಸಲು ನಿರ್ದೇಶನ ನೀಡುವಂತೆ ಕೋರಿ ಅವ್ಯಾನ್ ಪ್ರತಿಷ್ಠಾನ ಅರ್ಜಿ ಸಲ್ಲಿಸಿತ್ತು.
ಸಾರ್ವಜನಿಕ ಸ್ಥಳಗಳಲ್ಲಿ ಹಾಲುಣಿಸುವ ಕೇಂದ್ರ, ಶಿಶುವಿಹಾರಗಳ ನಿರ್ಮಿಸುವ ಸಂಬಂಧ ಕೇಂದ್ರ ಸರ್ಕಾರ ಫೆಬ್ರವರಿ 2024ರಲ್ಲಿ ನೀಡಿದ್ದ ಸಲಹೆಯನ್ನು ಜ್ಞಾಪನಾಪತ್ರದ ರೂಪದಲ್ಲಿ ಇನ್ನೆರಡು ವಾರಗಳಲ್ಲಿ ರಾಜ್ಯ ಸರ್ಕಾರಗಳಿಗೆ ನೀಡಬೇಕೆಂದು ನ್ಯಾಯಾಲಯ ಇದೇ ವೇಳೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದೆ.
[ತೀರ್ಪಿನ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]