IAS Officer J Manjunath 
ಸುದ್ದಿಗಳು

[ಲಂಚ ಪ್ರಕರಣ] 60 ದಿನಗಳಾದರೂ ಆರೋಪ ಪಟ್ಟಿ ಸಲ್ಲಿಸದ ಎಸಿಬಿ; ಐಎಎಸ್‌ ಅಧಿಕಾರಿ ಮಂಜುನಾಥ್‌ಗೆ ಡಿಫಾಲ್ಟ್‌ ಜಾಮೀನು

ತನಿಖಾಧಿಕಾರಿಯ ಅನುಮತಿ ಪಡೆಯದೇ ಆರು ತಿಂಗಳು ರಾಜ್ಯ ತೊರೆಯುವಂತಿಲ್ಲ. ನ್ಯಾಯಾಲಯದ ಅನುಮತಿ ಪಡೆಯದೇ ಆರು ತಿಂಗಳು ದೇಶ ತೊರೆಯುವಂತಿಲ್ಲ ಎಂಬ ಷರತ್ತಿಗೆ ಒಳಪಟ್ಟು ಜಾಮೀನು ಮಂಜೂರು.

Bar & Bench

ಲಂಚ ಪ್ರಕರಣದಲ್ಲಿ ಬಂಧಿತರಾಗಿ ಅಮಾನತುಗೊಂಡಿರುವ ಬೆಂಗಳೂರು ನಗರದ ಹಿಂದಿನ ಜಿಲ್ಲಾಧಿಕಾರಿ ಜೆ ಮಂಜುನಾಥ್‌ ಅವರಿಗೆ ವಿಶೇಷ ನ್ಯಾಯಾಲಯವು ಶನಿವಾರ ಡಿಫಾಲ್ಟ್‌ ಜಾಮೀನು ಮಂಜೂರು ಮಾಡಿದೆ.

ಮಂಜುನಾಥ್‌ ಅವರ ಅರ್ಜಿ ವಿಚಾರಣೆ ನಡೆಸಿದ ಭ್ರಷ್ಟಾಚಾರ ನಿರ್ಮೂಲನೆ ಕಾಯಿದೆ ಅಡಿ ಸ್ಥಾಪಿಸಲಾಗಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಕೆ ಲಕ್ಷ್ಮಿನಾರಾಯಣ್‌ ಭಟ್‌ ಅವರು ಜಾಮೀನು ಮಂಜೂರು ಮಾಡಿದರು. ಭ್ರಷ್ಟಾಚಾರ ನಿಯಂತ್ರಣ ಸಂಸ್ಥೆಯು (ಎಸಿಬಿ) ನಿಗದಿತ 60 ದಿನಗಳಲ್ಲಿ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಪಟ್ಟಿ ಸಲ್ಲಿಸದ ಹಿನ್ನೆಲೆಯಲ್ಲಿ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.

ತನಿಖಾಧಿಕಾರಿಯ ಅನುಮತಿ ಪಡೆಯದೇ ಆರು ತಿಂಗಳು ರಾಜ್ಯ ತೊರೆಯುವಂತಿಲ್ಲ. ನ್ಯಾಯಾಲಯದ ಅನುಮತಿ ಪಡೆಯದೇ ಆರು ತಿಂಗಳು ದೇಶ ತೊರೆಯುವಂತಿಲ್ಲ ಎಂಬ ಷರತ್ತುಗಳನ್ನು ವಿಧಿಸಿ ಜಾಮೀನು ನೀಡಿದೆ.

ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ಮನವಿ ಬಾಕಿ ಇದ್ದರೂ ಸಿಆರ್‌ಪಿಸಿ ನಿಬಂಧನೆಗಳ ಅಡಿ ಅರ್ಜಿದಾರರು ಡಿಫಾಲ್ಟ್‌ ಜಾಮೀನು ಕೋರಲು ಯಾವುದೇ ನಿರ್ಬಂಧವಿಲ್ಲ ಎಂದು ಸುಪ್ರೀಂ ಕೋರ್ಟ್‌ ಈಚೆಗೆ ಆದೇಶ ಮಾಡಿತ್ತು.

ಪ್ರಕರಣದಲ್ಲಿ ಮೂರನೇ ಆರೋಪಿಯಾಗಿರುವ ಮಂಜುನಾಥ್‌ ಅವರನ್ನು ಎಸಿಬಿ ಜುಲೈ 4ರಂದು ಬಂಧಿಸಿತ್ತು. ಸೆಪ್ಟೆಂಬರ್‌ 3ಕ್ಕೆ ಮಂಜುನಾಥ್‌ ಅವರ ಬಂಧನವಾಗಿ 60 ದಿನಗಳು ತುಂಬಿದ್ದವು. ಎಸಿಬಿ ನಿಯಮಗಳ ಪ್ರಕಾರ 60 ದಿನಗಳ ಒಳಗೆ ಆರೋಪ ಪಟ್ಟಿ ಸಲ್ಲಿಕೆಯಾಗದಿದ್ದರೆ ಆರೋಪಿಗೆ ಡಿಫಾಲ್ಟ್‌ ಜಾಮೀನು ದೊರೆಯಲಿದೆ. ಇದೇ ರೀತಿ, ಪ್ರಕರಣದಲ್ಲಿ ಮೊದಲ ಆರೋಪಿಯಾಗಿದ್ದ ಉಪ ತಹಶೀಲ್ದಾರ್‌ ಪಿ ಎಸ್‌ ಮಹೇಶ್‌ ಅವರಿಗೆ ಡೀಫಾಲ್ಟ್‌ ಜಾಮೀನು ದೊರೆತಿದ್ದನ್ನು ನೆನೆಯಬಹುದಾಗಿದೆ.

ಆನೇಕಲ್‌ ತಾಲ್ಲೂಕಿನ ಕೂಡ್ಲು ಗ್ರಾಮದ 38 ಗುಂಟೆ ಜಮೀನು ಒಡೆತನಕ್ಕೆ ಸಂಬಂಧಿಸಿದಂತೆ ಅನುಕೂಲಕರ ಆದೇಶ ಮಾಡಲು ಅಜಂ ಪಾಷಾ ಎಂಬುವರಿಂದ 5 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದಾಗ ಬೆಂಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಉಪ ತಹಶೀಲ್ದಾರ್‌ ಆಗಿದ್ದ ಪಿ ಎಸ್‌ ಮಹೇಶ್‌ ಮತ್ತು ನ್ಯಾಯಾಲಯ ವಿಭಾಗದ ಸಹಾಯಕ ಚೇತನ್‌ ಕುಮಾರ್‌ ಅಲಿಯಾಸ್‌ ಚಂದ್ರ ಅವರನ್ನು ಮೇ 21ರಂದು ಎಸಿಬಿ ಬಂಧಿಸಿತ್ತು. ಈ ಇಬ್ಬರೂ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.