[ಲಂಚ ಪ್ರಕರಣ] ಬಂಧಿತ ಐಎಎಸ್‌ ಅಧಿಕಾರಿ ಮಂಜುನಾಥ್‌ ಡಿಫಾಲ್ಟ್‌ ಜಾಮೀನು ಕೋರಲು ನಿರ್ಬಂಧವಿಲ್ಲ: ಸುಪ್ರೀಂ ಕೋರ್ಟ್‌

ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ಮನವಿ ಬಾಕಿ ಇದ್ದರೂ ಸಿಆರ್‌ಪಿಸಿ ನಿಬಂಧನೆಗಳ ಅಡಿ ಅರ್ಜಿದಾರರು ಡಿಫಾಲ್ಟ್‌ ಜಾಮೀನು ಕೋರಲು ನಿರ್ಬಂಧವಿಲ್ಲ ಎಂದು ನ್ಯಾಯಾಲಯವು ಆದೇಶದಲ್ಲಿ ಉಲ್ಲೇಖಿಸಿದೆ. ಅಲ್ಲದೇ ವಿಚಾರಣೆಯನ್ನು ಸೆ.19ಕ್ಕೆ ಮುಂದೂಡಿದೆ.
Supreme Court and J Manjunath
Supreme Court and J Manjunath
Published on

ಲಂಚ ಪ್ರಕರಣದಲ್ಲಿ ಬಂಧಿತರಾಗಿರುವ ಐಎಎಸ್‌ ಅಧಿಕಾರಿ ಜೆ ಮಂಜುನಾಥ್‌ ಅವರು ಡಿಫಾಲ್ಟ್‌ ಜಾಮೀನು ಕೋರಿ ವಿಚಾರಣಾಧೀನ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಸುಪ್ರೀಂ ಕೋರ್ಟ್‌ ಈಚೆಗೆ ಆದೇಶ ಮಾಡಿದೆ.

ಕರ್ನಾಟಕ ಹೈಕೋರ್ಟ್‌ ಜಾಮೀನು ತಿರಸ್ಕರಿಸಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಮಂಜುನಾಥ್‌ ಅವರು ಸಲ್ಲಿಸಿರುವ ವಿಶೇಷ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ ಮತ್ತು ಜೆ ಕೆ ಮಹೇಶ್ವರಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ಮನವಿ ಬಾಕಿ ಇದ್ದರೂ ಸಿಆರ್‌ಪಿಸಿ ನಿಬಂಧನೆಗಳ ಅಡಿ ಅರ್ಜಿದಾರರು ಡಿಫಾಲ್ಟ್‌ ಜಾಮೀನು ಕೋರಲು ಯಾವುದೇ ನಿರ್ಬಂಧವಿಲ್ಲ ಎಂದು ನ್ಯಾಯಾಲಯವು ಆದೇಶದಲ್ಲಿ ಉಲ್ಲೇಖಿಸಿದೆ. ಅಲ್ಲದೇ ವಿಚಾರಣೆಯನ್ನು ಸೆಪ್ಟೆಂಬರ್‌ 19ಕ್ಕೆ ಮುಂದೂಡಿದೆ.

ಬೆಂಗಳೂರು ನಗರದ ಹಿಂದಿನ ಜಿಲ್ಲಾಧಿಕಾರಿಯಾಗಿದ್ದ ಮಂಜುನಾಥ್‌ ಅವರನ್ನು ಭ್ರಷ್ಟಾಚಾರ ನಿಗ್ರಹ ದಳವು (ಎಸಿಬಿ) ಜುಲೈ 4ರಂದು ಬಂಧಿಸಿತ್ತು. ಸೆಪ್ಟೆಂಬರ್‌ 3ಕ್ಕೆ ಮಂಜುನಾಥ್‌ ಅವರ ಬಂಧನವಾಗಿ 60 ದಿನಗಳು ತುಂಬಲಿದೆ. ಎಸಿಬಿ ನಿಯಮಗಳ ಪ್ರಕಾರ 60 ದಿನಗಳ ಒಳಗೆ ಆರೋಪ ಪಟ್ಟಿ ಸಲ್ಲಿಕೆಯಾಗದಿದ್ದರೆ ಆರೋಪಿಗೆ ಡಿಫಾಲ್ಟ್‌ ಜಾಮೀನು ದೊರೆಯಲಿದೆ. ಇದೇ ರೀತಿ, ಪ್ರಕರಣದಲ್ಲಿ ಮೊದಲ ಆರೋಪಿಯಾಗಿದ್ದ ಉಪ ತಹಶೀಲ್ದಾರ್‌ ಪಿ ಎಸ್‌ ಮಹೇಶ್‌ ಅವರಿಗೆ ಜಾಮೀನು ದೊರೆತಿತ್ತು.

ಈ ಮಧ್ಯೆ, ಎಸಿಬಿಯನ್ನು ರದ್ದುಪಡಿಸಿ ಕರ್ನಾಟಕ ಹೈಕೋರ್ಟ್‌ ಈಚೆಗೆ ಆದೇಶ ಮಾಡಿದೆ. ಕರ್ನಾಟಕ ಲೋಕಾಯುಕ್ತಕ್ಕೆ ಪ್ರಕರಣಗಳು ವರ್ಗಾವಣೆಯಾಗಲಿವೆ ಎಂದು ಹೈಕೋರ್ಟ್‌ನ ವಿಭಾಗೀಯ ಪೀಠವು ಆದೇಶ ಮಾಡಿತ್ತು. ಹೀಗಾಗಿ, ಮಂಜುನಾಥ್‌ ಅವರಿಗೆ ಡಿಫಾಲ್ಟ್‌ ಜಾಮೀನು ಸಿಗಲಿದೆಯೇ ಎಂಬುದು ಸ್ಪಷ್ಟವಾಗಿಲ್ಲ.

ಇದಕ್ಕೂ ಮುನ್ನ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಡಿ ರಚಿಸಲಾಗಿರುವ ವಿಶೇಷ ನ್ಯಾಯಾಲಯ ಹಾಗೂ ಕರ್ನಾಟಕ ಹೈಕೋರ್ಟ್‌ ಮಂಜುನಾಥ್‌ ಅವರ ಜಾಮೀನು ಮನವಿಯನ್ನು ತಿರಸ್ಕರಿಸಿದ್ದವು.

Also Read
ಲಂಚ ಪ್ರಕರಣ: ಜಾಮೀನು ಕೋರಿ ಸುಪ್ರೀಂ ಮೆಟ್ಟಿಲೇರಿದ ಐಎಎಸ್‌ ಅಧಿಕಾರಿ ಮಂಜುನಾಥ್‌

ಆನೇಕಲ್‌ ತಾಲ್ಲೂಕಿನ ಕೂಡ್ಲು ಗ್ರಾಮದ 38 ಗುಂಟೆ ಜಮೀನು ಒಡೆತನಕ್ಕೆ ಸಂಬಂಧಿಸಿದಂತೆ ಅನುಕೂಲಕರ ಆದೇಶ ಮಾಡಲು ಅಜಂ ಪಾಷಾ ಎಂಬುವರಿಂದ 5 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದಾಗ ಬೆಂಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಉಪ ತಹಶೀಲ್ದಾರ್‌ ಆಗಿದ್ದ ಪಿ ಎಸ್‌ ಮಹೇಶ್‌ ಮತ್ತು ನ್ಯಾಯಾಲಯ ವಿಭಾಗದ ಸಹಾಯಕ ಚೇತನ್‌ ಕುಮಾರ್‌ ಅಲಿಯಾಸ್‌ ಚಂದ್ರ ಅವರನ್ನು ಮೇ 21ರಂದು ಎಸಿಬಿ ಬಂಧಿಸಿತ್ತು. ಈ ಪ್ರಕರಣದಲ್ಲಿ ಮಂಜುನಾಥ್‌ ಮೂರನೇ ಆರೋಪಿಯಾಗಿದ್ದಾರೆ.

ಹಿರಿಯ ವಕೀಲರಾದ ಸಿದ್ಧಾರ್ಥ್‌ ಲೂಥ್ರಾ, ಎಚ್‌ ಎಸ್‌ ಚಂದ್ರಮೌಳಿ, ವಕೀಲರಾದ ಆನಂದ್‌ ಸಂಜಯ್‌ ಮೌಳಿ, ಪ್ರತೀಕ್‌ ಚಂದ್ರಮೌಳಿ, ಆಗಂ ಶರ್ಮಾ, ಆನ್ಮೋಲ್‌ ಖೇತ, ಚೆಸ್ತಾ ಜೇಟ್ಲಿ ಅವರು ಪ್ರತಿನಿಧಿಸಿದ್ದರು.

Kannada Bar & Bench
kannada.barandbench.com