Karnataka HC , J Manjunath and ACB
Karnataka HC , J Manjunath and ACB 
ಸುದ್ದಿಗಳು

ಲಂಚ ಪ್ರಕರಣ: ಜಾಮೀನು ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ ಐಎಎಸ್‌ ಅಧಿಕಾರಿ ಮಂಜುನಾಥ್‌

Bar & Bench

ಲಂಚ ಪ್ರಕರಣದಲ್ಲಿ ಬಂಧಿತರಾಗಿ ಅಮಾನತುಗೊಂಡಿರುವ ಬೆಂಗಳೂರು ನಗರದ ಹಿಂದಿನ ಜಿಲ್ಲಾಧಿಕಾರಿ ಜೆ ಮಂಜುನಾಥ್‌ ಅವರು ಜಾಮೀನು ಕೋರಿ ಕರ್ನಾಟಕ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ಪ್ರಕರಣವು ಇನ್ನಷ್ಟೇ ವಿಚಾರಣೆಗೆ ನಿಗದಿಯಾಗಬೇಕಿದೆ.

ಲಂಚ ಸ್ವೀಕರಿಸುವಾಗ ತಾನು ಸ್ಥಳದಲ್ಲಿರಲಿಲ್ಲ. ಮೊದಲ ಮತ್ತು ಎರಡನೇ ಆರೋಪಿಗೆ ಸಂಬಂಧಿಸಿದಂತೆ ಕಾಲಕಾಲಕ್ಕೆ ಎಸಿಬಿಯು ಸಲ್ಲಿಸಿದ ರಿಮ್ಯಾಂಡ್‌ ಅರ್ಜಿಯಲ್ಲಿಯೂ ತಮ್ಮ ಬಗ್ಗೆ ಯಾವುದೇ ಉಲ್ಲೇಖ ಮಾಡಲಾಗಿಲ್ಲ.

2022ರ ಜೂನ್‌ 22ರಂದು ಏಕಾಏಕಿ ಸಿಆರ್‌ಪಿಸಿ ಸೆಕ್ಷನ್‌ 41ಎ ಅಡಿ ನೋಟಿಸ್‌ ಜಾರಿ ಮಾಡಲಾಗಿದ್ದು, ಪೊಲೀಸರ ಮುಂದೆ ಹಾಜರಾಗುವಂತೆ ಸೂಚಿಸಲಾಗಿತ್ತು. ಅಂತೆಯೇ ತನಿಖಾಧಿಕಾರಿಯ ಮುಂದೆ ಹಾಜರಾಗಿ ಅವರ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಬಾಹ್ಯ ಸಂಗತಿಗಳು ಮತ್ತು ಎರಡನೇ ಆರೋಪಿ ಮಹೇಶ್‌ ಅವರ ಜಾಮೀನು ಮನವಿಯ ವಿಚಾರಣೆಯ ಸಂದರ್ಭದಲ್ಲಿ ಹೈಕೋರ್ಟ್‌ ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಆಧರಿಸಿ, ಹೆಚ್ಚುವರಿ ವರದಿ ಸಲ್ಲಿಸಿ ತನಿಖಾಧಿಕಾರಿಯು ತಮ್ಮನ್ನು ಪ್ರಕರಣದಲ್ಲಿ ಸಿಲುಕಿಸಿದ್ದಾರೆ. ಇದನ್ನು ಒಪ್ಪಲಾಗದು, ನ್ಯಾಯಸಮ್ಮತವಲ್ಲ ಎಂದಿದ್ದು ಪ್ರಕರಣದ ವ್ಯಾಪ್ತಿ ಮೀರಿದ್ದಾಗಿದೆ ಎಂದು ವಿವರಿಸಲಾಗಿದೆ. ಪ್ರಥಮ ಮಾಹಿತಿ ವರದಿಯಲ್ಲಿ ಮಂಜುನಾಥ್‌ ಅವ ವಿರುದ್ಧ ಯಾವುದೇ ಆರೋಪವಿಲ್ಲ. ಲಂಚ ಸ್ವೀಕಾರ ಪ್ರಕರಣದಲ್ಲಿ ಯಾವುದೇ ರೀತಿಯಲ್ಲೂ ಅವರು ಭಾಗಿಯಾಗಿಲ್ಲ ಎಂದೂ ಹೇಳಲಾಗಿದೆ.

ಈಚೆಗೆ ಸೆಷನ್ಸ್‌ ನ್ಯಾಯಾಲಯವು ಮಂಜುನಾಥ್‌ ಅವರ ಜಾಮೀನು ಮನವಿ ತಿರಸ್ಕರಿಸಿತ್ತು. ಜುಲೈ 4ರಂದು ಬಂಧಿಸಲ್ಪಟ್ಟ ಮಂಜುನಾಥ್‌ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.

ಅರ್ಜಿದಾರರನ್ನು ವಕೀಲರಾದ ಪ್ರತೀಕ್‌ ಚಂದ್ರಮೌಳಿ ಮತ್ತು ಕೀರ್ತನಾ ನಾಗರಾಜ್‌ ಅವರು ಪ್ರತಿನಿಧಿಸಿದ್ದಾರೆ.