[ಲಂಚ ಪ್ರಕರಣ] ಸುಪ್ರೀಂ ಕೋರ್ಟ್‌ ಆದೇಶದ ಪ್ರಸ್ತಾಪ; ವಿಚಾರಣೆಯನ್ನು ಜುಲೈ 20ಕ್ಕೆ ಮುಂದೂಡಿದ ಹೈಕೋರ್ಟ್‌

ಜುಲೈ 7ರಂದು ಕರ್ನಾಟಕ ಹೈಕೋರ್ಟ್‌ ಮಾಡಿರುವ ಅವಲೋಕನ ಮತ್ತು ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆ ನೀಡಿದ್ದು, ಜಾಮೀನು ಮನವಿಯ ವಿಚಾರಣೆ ನಡೆಸಲು ಆದೇಶಿಸಿದೆ ಎಂದು ಗಮನಸೆಳೆದ ಎಸಿಬಿ ಪರ ವಕೀಲರು.
Karnataka HC, Anti Corruption Bureau and Justice H P Sandesh
Karnataka HC, Anti Corruption Bureau and Justice H P Sandesh
Published on

ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದಿದೆ ಎನ್ನಲಾದ ಲಂಚ ಪ್ರಕರಣದಲ್ಲಿ ಮೊದಲನೇ ಆರೋಪಿಯಾಗಿರುವ ಉಪ ತಹಶೀಲ್ದಾರ್‌ ಮತ್ತು ಹಿಂದಿನ ಜಿಲ್ಲಾಧಿಕಾರಿ ಜೆ ಮಂಜುನಾಥ್‌ ಆಪ್ತ ಸಹಾಯಕ ಪಿ ಎಸ್‌ ಮಹೇಶ್‌ ಅವರ ಜಾಮೀನು ಮನವಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್‌ ಸೋಮವಾರ ಜುಲೈ 20ಕ್ಕೆ ಮುಂದೂಡಿದೆ.

ಪ್ರಕರಣದ ವಿಚಾರಣೆಯನ್ನು ನ್ಯಾಯಮೂರ್ತಿ ಎಚ್‌ ಪಿ ಸಂದೇಶ್‌ ಅವರ ನೇತೃತ್ವದ ಏಕಸದಸ್ಯ ಪೀಠ ಆರಂಭಿಸಿತು. ಆಗ ಭ್ರಷ್ಟಾಚಾರ ನಿಗ್ರಹ ದಳವನ್ನು ಪ್ರತಿನಿಧಿಸಿದ್ದ ವಕೀಲ ಪಿ ಎನ್‌ ಮನಮೋಹನ್‌ ಅವರು “ಜುಲೈ 7ರಂದು ಕರ್ನಾಟಕ ಹೈಕೋರ್ಟ್‌ ಮಾಡಿರುವ ಅವಲೋಕನ ಮತ್ತು ಆದೇಶಕ್ಕೆ ಸುಪ್ರೀಂ ಕೋರ್ಟ್‌ ಬೆಳಗ್ಗೆ ತಡೆ ನೀಡಿದ್ದು, ಜಾಮೀನು ಮನವಿಯ ವಿಚಾರಣೆ ನಡೆಸಲು ಆದೇಶಿಸಿದೆ. ಆದೇಶ ಇನ್ನಷ್ಟೇ ಕೈಸೇರಬೇಕಿದೆ” ಎಂದರು.

ಆಗ ನ್ಯಾ. ಸಂದೇಶ್‌ ಅವರು “ಹಾಗಾದರೆ, ಸುಪ್ರೀಂ ಕೋರ್ಟ್‌ ಆದೇಶ ಬರಲಿ. ಆನಂತರ ಜಾಮೀನು ಮನವಿ ವಿಚಾರಣೆ ನಡೆಸೋಣ” ಎಂದರು. ಇದಕ್ಕೆ ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಎ ಎಸ್‌ ಪೊನ್ನಣ್ಣ ಹಾಗೂ ಮನಮೋಹನ್‌ ಅವರು ಒಪ್ಪಿದರು. ಇದನ್ನು ಆದೇಶದಲ್ಲಿ ದಾಖಲಿಸಿದ ಪೀಠವು ವಿಚಾರಣೆ ಮುಂದೂಡಿತು.

Also Read
ಎಸಿಬಿ ಹಾಗೂ ಅದರ ಎಡಿಜಿಪಿ ಕುರಿತು ಕರ್ನಾಟಕ ಹೈಕೋರ್ಟ್‌ ಮಾಡಿದ್ದ ಅವಲೋಕನ ಹಾಗೂ ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆ

ಸುಪ್ರೀಂ ಕೋರ್ಟ್‌ ಸೋಮವಾರ ಬೆಳಗ್ಗೆ “ಸೀಮಂತ್‌ ಕುಮಾರ್‌ ಅವರ ಸೇವಾ ದಾಖಲೆ ಕೇಳಿರುವುದು, ಎಸಿಬಿ ಸಲ್ಲಿಸಿರುವ ಬಿ ರಿಪೋರ್ಟ್‌ಗಳ ವರದಿ, ಎಸಿಬಿ ಇತ್ಯಾದಿಯ ವಿರುದ್ಧ ಹೈಕೋರ್ಟ್‌ ವ್ಯಕ್ತಪಡಿಸಿರುವ ಅವಲೋಕನಗಳಿಗೆ ತಡೆ ನೀಡಲಾಗಿದೆ. ಜಾಮೀನು ಮನವಿಗೂ ಹೈಕೋರ್ಟ್‌ ವ್ಯಕ್ತಪಡಿಸಿರುವ ಅಭಿಪ್ರಾಯಗಳಿಗೂ ಮೇಲ್ನೋಟಕ್ಕೆ ಯಾವುದೇ ಸಂಬಂಧವಿಲ್ಲ. ಜಾಮೀನು ಮನವಿಯ ವಿಚಾರಣಾ ವ್ಯಾಪ್ತಿಗೆ ಒಳಪಟ್ಟು ಅಭಿಪ್ರಾಯ ವ್ಯಕ್ತಪಡಿಸಲಾಗಿಲ್ಲ. ಜಾಮೀನು ಮನವಿ ಹಾಗೂ ಎಸಿಬಿ ಅಧಿಕಾರಿಯ ನಡೆತೆಗೆ ಯಾವುದೇ ಸಂಬಂಧವಿಲ್ಲ. ಹೈಕೋರ್ಟ್‌ ಜಾಮೀನು ಮನವಿ ನಿರ್ಧರಿಸಬೇಕು” ಎಂದು ಆದೇಶದಲ್ಲಿ ಹೇಳಿತ್ತು.

Kannada Bar & Bench
kannada.barandbench.com