ಪ್ರಸ್ತುತ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಹೊರಗಿನ ಜೈಲುಗಳಲ್ಲಿರುವ ಜಮ್ಮು ಕಾಶ್ಮೀರದ ವಿಚಾರಣಾಧೀನ ಕೈದಿಗಳನ್ನು ಕೇಂದ್ರಾಡಳಿತ ಪ್ರದೇಶದ ಜೈಲುಗಳಿಗೆ ವಾಪಸ್ ಕರೆಸಿಕೊಳ್ಳುವಂತೆ ಕೋರಿ ಮಾಜಿ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ ವಿಚಾರಣಾರ್ಹತೆಯನ್ನು ಜಮ್ಮು ಕಾಶ್ಮೀರ ಹಾಗೂ ಲಡಾಖ್ ಹೈಕೋರ್ಟ್ ಪ್ರಶ್ನಿಸಿದೆ [ಮೆಹಬೂಬಾ ಮುಫ್ತಿ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].
ನವೆಂಬರ್ 3 ರಂದು ಹೊರಡಿಸಲಾದ ಆದೇಶದಲ್ಲಿ ಮುಖ್ಯ ನ್ಯಾಯಮೂರ್ತಿ ಅರುಣ್ ಪಲ್ಲಿ ಮತ್ತು ನ್ಯಾಯಮೂರ್ತಿ ರಜನೇಶ್ ಓಸ್ವಾಲ್ ಅವರ ವಿಭಾಗೀಯ ಪೀಠ ಮುಫ್ತಿ ಅವರು ಪ್ರಕರಣದಲ್ಲಿ ಹೇಗೆ ಬಾಧಿತರು. ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ರೂಪದಲ್ಲಿ ಮನವಿ ಸಲ್ಲಿಸಿರುವುದೇಕೆ ಎಂದು ಆಕ್ಷೇಪಿಸಿತು.
ವಿಚಾರಣಾಧೀನ ಕೈದಿಗಳು ಈ ವಿಚಾರದಲ್ಲಿ ಖುದ್ದು ನ್ಯಾಯಾಲಯವನ್ನು ಸಂಪರ್ಕಿಸಲಾಗದು ಎಂದು ಮುಫ್ತಿ ನಾಯಕತ್ವದ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಪರ ವಾದ ಮಂಡಿಸಿದ ವಕೀಲ ಆದಿತ್ಯ ಗುಪ್ತಾ ಹೇಳಿದಾಗ ಪಿಐಎಲ್ ನಿರ್ವಹಣೆ ಕುರಿತು ಈ ಹಿಂದೆ ನ್ಯಾಯಾಲಯಗಳು ನೀಡಿರುವ ತೀರ್ಪನ್ನು ಪೀಠ ಉಲ್ಲೇಖಿಸಿತು.
ಇದೇ ವೇಳೆ ನ್ಯಾಯಾಲಯವು, ತಾನು ಪ್ರಕರಣವನ್ನುಅಲಿಸಲು "ಒಂದು ಬಾಗಿಲನ್ನು ತೆರೆದಿದ್ದು", ಆದಾಗ್ಯೂ ಅರ್ಜಿಯನ್ನು ಇನ್ನೂ ಪರಿಗಣಿಸಲಾಗಿಲ್ಲ ಎಂದು ತಿಳಿಸಿತು. ಅರ್ಜಿಯನ್ನು ಪರಿಗಣಿಸಿ ಮುಂದುವರಿಯಲು ಅರ್ಜಿದಾರರು ತಮಗೆ ಅರ್ಜಿ ಸಲ್ಲಿಸಲು ಇರುವ ಕಾನೂನಾತ್ಮಕ ಹಕ್ಕಿನ ಕುರಿತು ನ್ಯಾಯಾಲಯ ತೃಪ್ತಿ ಹೊಂದಬೇಕಾಗುತ್ತದೆ ಎಂದಿತು.
ಜಮ್ಮು ಕಾಶ್ಮೀರದ ವಿಚಾರಣಾಧೀನ ಕೈದಿಗಳನ್ನು ಅಲ್ಲಿಂದ ನೂರಾರು ಕಿಮೀ ದೂರದಲ್ಲಿ ಬಂಧಿಸಿಟ್ಟಿರುವುದು ಸಂವಿಧಾನದ 14 ಮತ್ತು 21ನೇ ವಿಧಿಯ ಉಲ್ಲಂಘನೆ ಎಂದು ಮುಫ್ತಿ ವಾದಿಸಿದ್ದಾರೆ.
ಹೀಗೆ ಬಂಧಿಸಿಟ್ಟಿರುವುದರಿಂದ ಅವರು ಕುಟುಂಬ ಸದಸ್ಯರನ್ನು ಭೇಟಿಯಾಗುವ ಹಕ್ಕಿಗೆ ಎರವಾಗಿದ್ದು, ವಕೀಲರನ್ನು ಭೇಟಿಯಾಗುವ ಅವಕಾಶ ಕೈತಪ್ಪಿದೆ. ನ್ಯಾಯಪ್ರಕ್ರಿಯೆಯಲ್ಲಿ ಸೂಕ್ತ ರೀತಿಯಲ್ಲಿ ಪಾಲ್ತೊಂಡು ತ್ವರಿತ ನ್ಯಾಯ ಪಡೆಯಲು ಅಡಚಣೆಯುಂಟಾಗುತ್ತಿದೆ ಎಂದು ಅವರು ವಾದಿಸಿದ್ದಾರೆ.
ವಿಚಾರಣಾಧೀನ ಕೈದಿಗಳೊಡನೆ ಮಾನವೀಯವಾಗಿ ವರ್ತಿಸಬೇಕು ಎಂದಿರುವ ಹಾಗೂ ಅವರಿಗೆ ವಿವಿಧ ಹಕ್ಕುಗಳನ್ನು ಒದಗಿಸಿ ಸರ್ವೋಚ್ಚ ನ್ಯಾಯಾಲಯ ನೀಡಿರುವ ವಿವಿಧ ತೀರ್ಪುಗಳು ಮತ್ತು ಮಾದರಿ ಜೈಲು ಕೈಪಿಡಿಯನ್ನು ಪಾಲಿಸುವಂತೆ ಸೂಚಿಸಬೇಕು ಎಂದು ಅವರು ಕೋರಿದ್ದಾರೆ
[ಆದೇಶದ ಪ್ರತಿ]