ಉತ್ತರಾಧಿಕಾರ, ಜೀವನಾಂಶ, ವಿಚ್ಛೇದನ ಹಾಗೂ ಪಾಲನೆಗೆ ಸಂಬಂಧಿಸಿದಂತೆ ಏಕರೂಪ ಕಾನೂನು ಜಾರಿಗೆ ತರುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾದ ಅರ್ಜಿಗಳಿಗೆ ಕೇಂದ್ರ ಸರ್ಕಾರ ಶುಕ್ರವಾರ ವಿರೋಧ ವ್ಯಕ್ತಪಡಿಸಿತು.
ಸರ್ಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಕೆ ಎಂ ನಟರಾಜ್ ಅವರು, ಅರ್ಜಿಗಳಲ್ಲಿ ಪ್ರಸ್ತಾಪಿಸಲಾದ ವಿಷಯಗಳು ಶಾಸಕಾಂಗದ ವ್ಯಾಪ್ತಿಗೆ ಬರುತ್ತವೆ ಎಂದರು. ಇದಕ್ಕೆ ಸಮ್ಮತಿಸಿದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಹಾಗೂ ಜೆ ಬಿ ಪರ್ದಿವಾಲಾ ಅವರಿದ್ದ ಪೀಠ “ಇದು ಶಾಸಕಾಂಗದ ವ್ಯಾಪ್ತಿಗೆ ಬರುವ ವಿಚಾರ, ಸಂಸತ್ತು ನಿರ್ಧರಿಸಬೇಕಿದೆ” ಎಂದು ತಿಳಿಸಿ ಪ್ರಕರಣವನ್ನು ಮುಂದೂಡಿತು.
ಮುಸ್ಲಿಂ ಮಹಿಳೆಯ ಪರ ವಾದ ಮಂಡಿಸಿದ ಹಿರಿಯ ವಕೀಲೆ ಹುಝೆಫಾ ಅಹ್ಮದಿ ಅವರು, ಏಕರೂಪದ ವಿವಾಹ ಮತ್ತು ವಿಚ್ಛೇದನ ಕಾನೂನುಗಳ ಕುರಿತಾದ ಇಂತಹ ಮನವಿಗೆ ತನ್ನ ವಿರೋಧವಿದ್ದು ಇಬ್ಬರೂ ಪಕ್ಷಕಾರರು ಒಪ್ಪಿಗೆ ನೀಡಿದ ನಂತರವಷ್ಟೇ ಮುಸ್ಲಿಂ ಕಾನೂನು ವಿಚ್ಛೇದನಕ್ಕೆ ಭರವಸೆ ನೀಡುತ್ತದೆ ಎಂದರು.
ಅರ್ಜಿದಾರರಲ್ಲಿ ಒಬ್ಬರಾದ ವಕೀಲ ಅಶ್ವಿನಿ ಉಪಾಧ್ಯಾಯ ಅವರು ಪ್ರಕರಣದ ಬಗ್ಗೆ ಚರ್ಚಿಸಲು ಮತ್ತು ನ್ಯಾಯಾಲಯಕ್ಕೆ ವರದಿ ಸಲ್ಲಿಸಲು ಭಾರತೀಯ ಕಾನೂನು ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿದರು. ನಾವು ಕಾನೂನು ಆಯೋಗಕ್ಕೆ ನಿರ್ದೇಶನ ನೀಡುವುದಾದರೆ ಅದು ನೆರವಿನ ರೂಪದಲ್ಲಿರಬೇಕು. ಸಂಸತ್ತಿನ ಸಾರ್ವಭೌಮಕ್ಕೆ ನೆರವು ನೀಡುವಂತಿರಬೇಕು. ಕಾನೂನು ರೂಪಿಸುವಂತೆ ನ್ಯಾಯಾಲಯವು ಸಂಸತ್ತನ್ನು ನಿರ್ದೇಶಿಸಲು ಸಾಧ್ಯವೇ?" ಎಂದು ಪೀಠವು ಪ್ರಶ್ನಿಸಿತು.
ಭಾರತದಲ್ಲಿ ಮದುವೆ ಮತ್ತು ವಿಚ್ಛೇದನಕ್ಕೆ ಏಕರೂಪದ ಕಾನೂನು ರೂಪಿಸುವಂತೆ ಕೇರಳ ಹೈಕೋರ್ಟ್ ಇತ್ತೀಚೆಗೆ ಹೇಳಿತ್ತು. ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವ ಸಂಗಾತಿಯನ್ನು ರಕ್ಷಿಸಲು ಕಾನೂನು ರೂಪಿಸುವ ಅಗತ್ಯವಿದೆ ಎಂದು ಒತ್ತಿ ಹೇಳಿದ್ದ ಅದು ಮೊದಲು ಸಾಮಾನ್ಯ ವಿವಾಹ ಸಂಹಿತೆಯನ್ನು ಜಾರಿಗೆ ತರುವುದು ಅವಶ್ಯಕ ಎಂದಿತ್ತು.