ಏಕರೂಪ ನಾಗರಿಕ ಸಂಹಿತೆಗೆ ಆಳವಾದ ಅಧ್ಯಯನ ಬೇಕು ಎಂದ ಕೇಂದ್ರ; ದೆಹಲಿ ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ಪಿಐಎಲ್‌ಗೆ ವಿರೋಧ

ಬಿಜೆಪಿಯ ವಕ್ತಾರ ಅಶ್ವಿನಿ ಕುಮಾರ್‌ ಉಪಾಧ್ಯಾಯ ಅವರು ಮೂರು ತಿಂಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಕರಡು ಸಿದ್ಧಪಡಿಸುವಂತೆ ಕೋರಿರುವ ಮನವಿಯನ್ನು ವಜಾ ಮಾಡುವಂತೆ ಕೋರಿದ ಕೇಂದ್ರ ಸರ್ಕಾರ.
Delhi High Court, Uniform Civil Code

Delhi High Court, Uniform Civil Code

Published on

ಕೇಂದ್ರ ಸರ್ಕಾರಕ್ಕೆ ಮೂರು ತಿಂಗಳಲ್ಲಿ ಏಕರೂಪ ನಾಗರಿಕ ಸಂಹಿತೆಯ (ಯುಸಿಸಿ) ಕರಡು ಸಿದ್ಧಪಡಿಸುವಂತೆ ಆದೇಶಿಸಬೇಕು ಎಂದು ಬಿಜೆಪಿಯ ವಕ್ತಾರ ಅಶ್ವಿನಿ ಕುಮಾರ್‌ ಉಪಾಧ್ಯಾಯ ಸಲ್ಲಿಸಿದ್ದ ಮನವಿ ವಜಾ ಮಾಡುವಂತೆ ಕೇಂದ್ರ ಕಾನೂನು ಇಲಾಖೆಯು ದೆಹಲಿ ಹೈಕೋರ್ಟ್‌ಗೆ ಮನವಿ ಮಾಡಿದೆ.

ವಿವಿಧ ಸಮುದಾಯಗಳ ಆಡಳಿತಕ್ಕೆ ಸಂಬಂಧಿಸಿದ ವೈಯಕ್ತಿಕ ಕಾನೂನುಗಳನ್ನು ಆಳವಾಗಿ ಅಧ್ಯಯನ ಮಾಡಿದ ಬಳಿಕ ಮಾತ್ರವೇ ಯುಸಿಸಿಯನ್ನು ಪರಿಚಯಿಸಬಹುದು. ನ್ಯಾಯಾಲಯದ ಆದೇಶಗಳನ್ನು ಆಧರಿಸಿ ಮೂರು ತಿಂಗಳಲ್ಲಿ ಅದನ್ನು ಮಾಡಲಾಗದು ಎಂದು ದೆಹಲಿ ಹೈಕೋರ್ಟ್‌ಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಕಾನೂನು ಇಲಾಖೆಯು ವಿವರಿಸಿದೆ.

ಸಾಂವಿಧಾನಿಕ ನಡೆಯ ಅನುಸಾರ ಯುಸಿಸಿ ಸೇರಿದಂತೆ ಯಾವುದೇ ಕಾನೂನು ಜಾರಿ ಮಾಡುವ ವಿಚಾರ ಸಂಸತ್ತಿಗೆ ಸಂಬಂಧಪಟ್ಟಿರುತ್ತದೆ. ಈ ವಿಚಾರದಲ್ಲಿ ನಿರ್ದಿಷ್ಟ ಕಾನೂನು ರೂಪಿಸುವಂತೆ ನ್ಯಾಯಾಲಯಗಳು ಆದೇಶ ಮಾಡಲಾಗದು ಎಂದು ಕಾನೂನು ಇಲಾಖೆಯು ಅಫಿಡವಿಟ್‌ನಲ್ಲಿ ತಿಳಿಸಿದೆ.

Also Read
[ದ್ವೇಷ ಭಾಷಣ] ಹಾಸ್ಯ ಕಲಾವಿದರಿಗೆ ಸಿಗುವ ರಕ್ಷಣೆ ಕ್ಯಾಥೊಲಿಕ್‌ ಪಾದ್ರಿಗೂ ವಿಸ್ತರಿಸಲಾಗದು: ಮದ್ರಾಸ್‌ ಹೈಕೋರ್ಟ್‌

“ಕಾನೂನು ರಚಿಸುವ ಸಾರ್ವಭೌಮ ಅಧಿಕಾರವು ಸಂಸತ್ತಿಗೆ ಮಾತ್ರ ಇದೆ. ಬಾಹ್ಯ ಶಕ್ತಿಗಳು ನಿರ್ದಿಷ್ಟ ಕಾನೂನು ರೂಪಿಸುವಂತೆ ಸಂಸತ್ತಿಗೆ ನಿರ್ದೇಶಿಸಲಾಗದು ಎಂಬುದನ್ನು ಹಲವು ತೀರ್ಪುಗಳಲ್ಲಿ ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿದೆ. ಹೀಗಾಗಿ, ಕಾನೂನು ರೂಪಿಸುವಂತೆ ನ್ಯಾಯಾಲಯವು ಸಂಸತ್ತಿಗೆ ನಿರ್ದೇಶಿಸಲಾಗದು” ಎಂದು ಕೇಂದ್ರ ಸರ್ಕಾರವು ಹೇಳಿದೆ.

ಏಕರೂಪ ನಾಗರಿಕ ಸಂಹಿತೆಯ ಕರಡನ್ನು ಮೂರು ತಿಂಗಳಲ್ಲಿ ಸಿದ್ಧಪಡಿಸಲು ನ್ಯಾಯಾಂಗ ಆಯೋಗ ಅಥವಾ ಉನ್ನತ ಮಟ್ಟದ ತಜ್ಞರ ಸಮಿತಿ ರಚಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಉಪಾಧ್ಯಾಯ ಅವರು ದೆಹಲಿ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದಾರೆ.

Kannada Bar & Bench
kannada.barandbench.com