ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಬ್ರಿಟಿಷ್ ಪೌರತ್ವ ಹೊಂದಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಕೋರಿ ರಾಯ್‌ಬರೇಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದ ದೂರನ್ನು ಅಲಾಹಾಬಾದ್ ಹೈಕೋರ್ಟ್ ಇತ್ತೀಚೆಗೆ ಲಖನೌ ನ್ಯಾಯಲಯಕ್ಕೆ ವರ್ಗಾಯಿಸಿದೆ.
ರಾಯ್ರಾಯ್ಬರೇಲಿ ನ್ಯಾಯಾಲಯದಲ್ಲಿ ರಾಹುಲ್ ಅವರ ಬೆಂಬಲಿಗರು ದೂರುದಾರರಿಗೆ ಪ್ರಕರಣದ ವಾದ ಮಂಡಿಸಲು ಅವಕಾಶ ನೀಡುತ್ತಿಲ್ಲ ಎಂಬ ದೂರುದಾರರ ಹೇಳಿಕೆಯನ್ನುಪರಿಗಣಿಸಿದ ನ್ಯಾಯಮೂರ್ತಿ ಬ್ರಿಜ್ ರಾಜ್ ಸಿಂಗ್ ಅವರು ಪ್ರಕರಣವನ್ನು ಲಖನೌಗೆ ವರ್ಗಾಯಿಸುವಂತೆ ಆದೇಶಿಸಿದರು.
ಇದಲ್ಲದೆ, ರಾಹುಲ್ ಗಾಂಧಿ ರಾಯ್‌ಬರೇಲಿ ಕ್ಷೇತ್ರದ ಲೋಕಸಭಾ ಸದಸ್ಯರಾಗಿರುವ ಕಾರಣ, ಅಲ್ಲಿನ ಅವರ ಬೆಂಬಲಿಗರು ಮತ್ತು ರಾಯ್‌ಬರೇಲಿ ಜಿಲ್ಲೆಯ ವಕೀಲರು ಗಲಾಟೆ ಸೃಷ್ಟಿಸುತ್ತಿದ್ದಾರೆ” ಎಂಬ ಆರೋಪವನ್ನೂ ನ್ಯಾಯಾಲಯ ದಾಖಲಿಸಿಕೊಂಡಿತು.
ರಾಹುಲ್ ಗಾಂಧಿ ಅವರು ರಾಯ್‌ಬರೇಲಿ ಕ್ಷೇತ್ರದ ಹಾಲಿ ಲೋಕಸಭಾ ಸದಸ್ಯರಾಗಿರುವುದರಿಂದ, ಪ್ರಕರಣವನ್ನು ಬೇರೆ ಜಿಲ್ಲೆಗೆ ವರ್ಗಾಯಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ. ಎಲ್ಲಾ ವಾಸ್ತವಾಂಶಗಳನ್ನು ಪರಿಗಣಿಸಿ, ನ್ಯಾಯಸಮ್ಮತತೆಯ ದೃಷ್ಟಿಯಿಂದ ಅರ್ಜಿಯನ್ನು ರಾಯ್‌ಬರೇಲಿ ಜಿಲ್ಲೆಯಿಂದ ಲಖನೌಗೆ ವರ್ಗಾಯಿಸುವುದು ಯುಕ್ತವಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಅದರಿಂದ, ರಾಯ್‌ಬರೇಲಿಯ ಅಡಿಷನಲ್ ಚೀಫ್ ಜುಡಿಷಿಯಲ್ ಮ್ಯಾಜಿಸ್ಟ್ರೇಟ್–IV (ಜನ ಪ್ರತಿನಿಧಿಗಳ ನ್ಯಾಯಾಲಯ) ಮುಂದೆ ಬಾಕಿ ಇದ್ದ ದೂರನ್ನು ಲಖನೌನಲ್ಲಿ ಜನ್ರಪತಿನಿಧಿಗಳ ಪ್ರಕರಣಗಳನ್ನು ವಿಚಾರಣೆ ನಡೆಸುವ ನ್ಯಾಯಾಲಯಕ್ಕೆ ವರ್ಗಾಯಿಸಲು ಅದು ನಿರ್ದೇಶನ ನೀಡಿದೆ.
ಈ ಆದೇಶ ಹೊರಡಿಸುವ ಮೊದಲು, ರಾಹುಲ್ ಗಾಂಧಿ ಅವರಿಗೆ ನ್ಯಾಯಾಲಯ ನೋಟಿಸ್ ನೀಡಲಿಲ್ಲ. ದೂರುದಾರರ ಪರ ವಕೀಲರು, ಬಿಎನ್‌ಎಸ್‌ಎಸ್ ಸೆಕ್ಷನ್ 173(4) ಅಡಿಯಲ್ಲಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಇನ್ನೂ ಎಫ್‌ಐಆರ್ ದಾಖಲಿಸುವ ಯಾವುದೇ ಆದೇಶ ನೀಡಿಲ್ಲ. ಆದ್ದರಿಂದ ರಾಹುಲ್ ಈ ಹಂತದಲ್ಲಿ ಬಾಧಿತ ವ್ಯಕ್ತಿ ಅಲ್ಲ ಎಂದು ವಾದಿಸಿದರು.
ರಾಹುಲ್ ಗಾಂಧಿ ಅವರು ಬ್ರಿಟಿಷ್ ಪೌರತ್ವ ಹೊಂದಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಕೋರಿ ರಾಯ್‌ಬರೇಲಿ ನ್ಯಾಯಾಲಯಕ್ಕೆ ಎಸ್ ವಿಘ್ನೇಶ್ ಶಿಶಿರ್ ಅವರು ಅರ್ಜಿ ಸಲ್ಲಿಸಿದ್ದರು.
ಎಸ್. ವಿಘ್ನೇಶ್ ಶಿಶಿರ್ ಸಲ್ಲಿಸಿರುವ ದೂರುದಲ್ಲಿ, ರಾಹುಲ್ ಗಾಂಧಿ ಾವರ ವಿರುದ್ಧ ಬಿಎನ್‌ಎಸ್, ಅಧಿಕೃತ ರಹಸ್ಯಗಳ ಕಾಯಿದೆ ಪಾಸ್‌ಪೋರ್ಟ್ ಕಾಯಿದೆ ಮತ್ತು ವಿದೇಶಿಗರ ಕಾಯಿದೆಗಳ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಮನವಿ ಮಾಡಲಾಗಿದೆ. ಶಿಶಿರ್ ಅವರ ಪ್ರಕಾರ, ರಾಹುಲ್ ಗಾಂಧಿ ಇಂಗ್ಲೆಂಡ್‌ನ ಬ್ಯಾಕಪ್ಸ್ ಲಿಮಿಟೆಡ್ ಎಂಬ ಕಂಪನಿಯ ನಿರ್ದೇಶಕರಾಗಿದ್ದು, ಆ ಕಂಪನಿಯ ದಾಖಲೆಗಳಲ್ಲಿ ತಾವೇ ತಮ್ಮ ರಾಷ್ಟ್ರೀಯತೆಯನ್ನು ಬ್ರಿಟಿಷ್ ಎಂದು ಘೋಷಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
[ಆದೇಶದ ಪ್ರತಿ]