
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತೀಯ ಪೌರತ್ವ ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ವಿಚಾರಣೆ ನಡೆಸಲು ಅಲಾಹಾಬಾದ್ ಹೈಕೋರ್ಟ್ ಬುಧವಾರ ನಿರಾಕರಿಸಿದೆ.
ಗಮನಾರ್ಹ ಸಂಗತಿ ಎಂದರದೆ ರಾಹುಲ್ ಅವರ ಪೌರತ್ವ ಪ್ರಶ್ನಿಸಿ ವಿಘ್ನೇಶ್ ಶಿಶಿರ್ ಎಂಬುವರು ಸಲ್ಲಿಸಿರುವ ಮೂರನೇ ಅರ್ಜಿ ಇದಾಗಿದೆ. ಅವರು ಈ ಹಿಂದೆ ಸಲ್ಲಿಸಿದ್ದ ಅರ್ಜಿಗಳನ್ನೂ ನ್ಯಾಯಾಲಯ ತಿರಸ್ಕರಿಸಿತ್ತು.
ರಾಹುಲ್ ಅವರು ಬೇರೊಂದು ದೇಶದ ಪಾಸ್‌ಪೋರ್ಟ್ ಅಥವಾ ಬೇರೆ ಪೌರತ್ವ ಹೊಂದಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಯಾವುದೇ ಪುರಾವೆಗಳು ಲಭ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಅಟ್ಟೌ ಆರ್ ಮಸೂದಿ ಮತ್ತು ನ್ಯಾಯಮೂರ್ತಿ ಅಜಯ್ ಕುಮಾರ್ ಶ್ರೀವಾಸ್ತವ ಅವರಿದ್ದ ವಿಭಾಗೀಯ ಪೀಠ ತಿಳಿಸಿತು.
"ಆ ಪಾಸ್‌ಪೋರ್ಟ್ ಎಲ್ಲಿದೆ... ನಮ್ಮೆಡೆಗೆ ಸುಮ್ಮನೆ ಅರ್ಜಿಯನ್ನು ತೂರಿಬಿಡಬೇಡಿ...ಆ ಪಾಸ್‌ಪೋರ್ಟ್ ಅಧಿಕೃತವಾಗಿ ಎಲ್ಲಿದೆ?" ಎಂದು ನ್ಯಾಯಾಲಯ ಪ್ರಶ್ನಿಸಿತು.
ಅರ್ಜಿದಾರರು ಕೇಂದ್ರ ಸರ್ಕಾರಕ್ಕೆ ಈ ವಿಚಾರವಾಗಿ ಮನವಿ ಸಲ್ಲಿಸಿದ್ದು, ಕಾನೂನುಬದ್ಧ ಸಮರ್ಥನೆಗಳನ್ನು ಪ್ರಸ್ತುತಪಡಿಸದೆ ನ್ಯಾಯಾಲಯ ಅಖಾಡಕ್ಕೆ ಇಳಿಯಲು ಆಗದು ಎಂದು ಪೀಠ ಹೇಳಿತು.
ಬ್ರಿಟನ್ ಪಾಸ್‌ಪೋರ್ಟ್‌ನೊಂದಿಗೆ ರಾಹುಲ್ ವಿಯೆಟ್ನಾಂಗೆ ಪ್ರವೇಶಿಸುವ ವಿಡಿಯೋ ಇದೆ ಎಂದು ಶಿಶಿರ್ ವಾದಿಸಿದ್ದರು. ಬ್ರಿಟನ್ ಸರ್ಕಾರ ಭಾರತ ಸರ್ಕಾರಕ್ಕೆ ಪಾಸ್‌ಪೋರ್ಟ್ ಕಳಿಸಿಕೊಟ್ಟಿದೆ ಎಂದು ಅವರು ಆರೋಪಿಸಿದರು.
"ಗಾಂಧಿ ಬ್ರಿಟನ್ ಪ್ರಜೆ ಎಂದು ಸಾಬೀತುಪಡಿಸಲು ನನ್ನ ಬಳಿ 200 ಪುಟದ ದಾಖಲೆಗಳಿವೆ" ಎಂದು ಶಿಶಿರ್ ಹೇಳಿದರು. ಆದರೂ ಪೀಠ ವಾದಗಳಿಂದ ತೃಪ್ತಿಗೊಳ್ಳಲಿಲ್ಲ ಮತ್ತು ಮನವಿ ಪರಿಗಣಿಸಲು ನಿರಾಕರಿಸಿತು.
ಅಂತಿಮವಾಗಿ, ನ್ಯಾಯಾಲಯ ಶಿಶಿರ್ ಅವರಿಗೆ ಅರ್ಜಿಯನ್ನು ಹಿಂಪಡೆಯಲು ಅವಕಾಶ ನೀಡಿ ಹಿಂದಿನ ಆದೇಶದ ಬಗ್ಗೆ ಮರುಪರಿಶೀಲನಾ ಅರ್ಜಿ ಸಲ್ಲಿಸುವ ಸ್ವಾತಂತ್ರ್ಯ ನೀಡಿತು.