Bulldozer 
ಸುದ್ದಿಗಳು

ಬುಲ್ಡೋಜರ್ ನ್ಯಾಯ ಅಸಾಂವಿಧಾನಿಕ ಎಂದು ಸುಪ್ರೀಂ ಮಹತ್ವದ ತೀರ್ಪು: ಅಧಿಕಾರಿಗಳಿಗೆ ದಂಡ ವಿಧಿಸುವ ಮಾರ್ಗಸೂಚಿ ಬಿಡುಗಡೆ

ಆರೋಪಿಯ ತಪ್ಪು ಅಥವಾ ಮುಗ್ಧತೆಯನ್ನು ಸರ್ಕಾರಿ ಅಧಿಕಾರಿಗಳು ನಿರ್ಧರಿಸುವಂತಿಲ್ಲ. ಆ ಜವಾಬ್ದಾರಿ ನ್ಯಾಯಾಂಗದ್ದು ಎಂದಿದೆ ಪೀಠ.

Bar & Bench

ಆರೋಪಿಯ ಅಪರಾಧ ಹಿನ್ನೆಲೆಯನ್ನು ಪ್ರಸ್ತಾಪಿಸಿ ಸರ್ಕಾರಿ ಅಧಿಕಾರಿಗಳು ಆತನ ಮನೆಯನ್ನು ಕೆಡವುವಂತಿಲ್ಲ. ಅಂತಹ ಬುಲ್ಡೋಜರ್‌ ನ್ಯಾಯ ಕಾನೂನುಬಾಹಿರ ಮತ್ತು ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್‌ ಬುಧವಾರ ಮಹತ್ವದ ತೀರ್ಪು ನೀಡಿದೆ [ಕಟ್ಟಡ ನೆಲಸಮ ವಿಚಾರವಾಗಿ ನೀಡಲಾದ ಮಾರ್ಗಸೂಚಿಗಳ ಕುರಿತಾದ ಪ್ರಕರಣ]

ಆರೋಪಿಯ ತಪ್ಪು ಅಥವಾ ಮುಗ್ಧತೆಯನ್ನು ಸರ್ಕಾರಿ ಅಧಿಕಾರಿಗಳು ನಿರ್ಧರಿಸುವಂತಿಲ್ಲ. ಅಂತಹ ವ್ಯಕ್ತಿಯ ತಪ್ಪನ್ನು ನಿರ್ಧರಿಸುವ ಜವಾಬ್ದಾರಿ ನ್ಯಾಯಾಂಗದ್ದು ಎಂದು  ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಕೆ ವಿ ವಿಶ್ವನಾಥನ್ ಅವರಿದ್ದ ಪೀಠ ತಿಳಿಸಿದೆ.

“ವ್ಯಕ್ತಿಯ ಆರೋಪದ ಕಾರಣಕ್ಕಾಗಿ ಆಸ್ತಿಯನ್ನು ಕೆಡವಿದರೆ, ಅದು ಸಂಪೂರ್ಣವಾಗಿ ಅಸಾಂವಿಧಾನಿಕ. ಯಾರು ತಪ್ಪಿತಸ್ಥರು ಎಂಬುದನ್ನು ಕಾರ್ಯಾಂಗ ನಿರ್ಧರಿಸುವಂತಿಲ್ಲ. ವ್ಯಕ್ತಿ ತಪ್ಪಿತಸ್ಥನೋ ಇಲ್ಲವೋ ಎಂಬುದನ್ನು ನಿರ್ಧರಿಸುವ ನ್ಯಾಯಾಧೀಶರು ಅವರಾಗಲು ಸಾಧ್ಯವಿಲ್ಲ. ಹಾಗೆ ಮಾಡುವುದು ಎಲ್ಲೆ ಮೀರಿದ ನಡೆಯಾಗುತ್ತದೆ. ಸಾಂವಿಧಾನಿಕ ಮೌಲ್ಯಗಳು ಮತ್ತು ನೀತಿಗಳು ಅಂತಹ ಅಧಿಕಾರದ ದುರುಪಯೋಗವನ್ನು ಸಮ್ಮತಿಸುವುದಿಲ್ಲ. ಕಾರ್ಯಾಂಗದ ಅಂತಹ ಕ್ರಮ ಕಾನೂನುಬಾಹಿರವಾಗುವುದರಿಂದ ಶಿಕ್ಷೆಗೊಳಗಾದ ವ್ಯಕ್ತಿಯ ವಿರುದ್ಧವೂ ಅದು ಅಂತಹ ಕ್ರಮ ಕೈಗೊಳ್ಳಲಾಗದು. ಹಾಗೆ ಮಾಡಿದರೆ ಕಾರ್ಯಾಂಗವೇ ಕಾನೂನನ್ನು ಕೈಗೆತ್ತಿಕೊಂಡಂತಾಗುತ್ತದೆ” ಎಂದು ನ್ಯಾಯಾಲಯ ವಿವರಿಸಿದೆ.   

 ಅಲ್ಲದೆ, ಈ ರೀತಿ ವ್ಯಕ್ತಿಯ ಮನೆ ಕೆಡವುವುದು ಸಂವಿಧಾನದ 21 ನೇ ವಿಧಿಯಡಿ ಒದಗಿಸಲಾದ ಆಶ್ರಯ ಪಡೆಯುವ ಹಕ್ಕಿನ ಉಲ್ಲಂಘನೆಯಾಗಲಿದ್ದು ಆರೋಪಿಯ ಕೃತ್ಯಕ್ಕೂ ತಮಗೂ ಸಂಬಂಧವೇ ಇರದ ಕುಟುಂಬ ಸದಸ್ಯರಿಗೆ ಸಾಮೂಹಿಕ ಶಿಕ್ಷೆ ವಿಧಿಸುತ್ತದೆ ಎಂದು ನ್ಯಾಯಾಲಯ ಕಳವಳ ವ್ಯಕ್ತಪಡಿಸಿದೆ.

ಆಶ್ರಯ ನೀಡುವ ಹಕ್ಕು ಮತ್ತು ಅಂತಹ ಹಕ್ಕಿನಿಂದ ನಿರಪರಾಧಿಗಳನ್ನು ವಂಚಿತರನ್ನಾಗಿ ಮಾಡುವುದು ಸಂಪೂರ್ಣ ಅಸಾಂವಿಧಾನಿಕವಾಗುತ್ತದೆ ಎಂದು ಪೀಠ ಒತ್ತಿ ಹೇಳಿದೆ.

ಇಂತಹ ಅಕ್ರಮ ಮತ್ತು ಅನಿಯಂತ್ರಿತ ಕ್ರಮಗಳಿಗೆ ಕಾರಣವಾಗುವ ಸಾರ್ವಜನಿಕ ಇಲ್ಲವೇ ಸರ್ಕಾರಿ ಅಧಿಕಾರಿಗಳಿಗೆ ಅವರೇ ಪರಿಹಾರ ಪಾವತಿಸುವಂತೆ ಮಾಡುವ ಮೂಲಕ ಅವರನ್ನು ಹೊಣೆಗಾರರನ್ನಾಗಿಸಬೇಕು ಎಂದು ಅದು ತಿಳಿಸಿದೆ.

ಈ ನಿಟ್ಟಿನಲ್ಲಿ ಸರ್ಕಾರ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ತಾನು ನಿಗದಿಪಡಿಸುತ್ತಿರುವುದಾಗಿ ಅದು ತಿಳಿಸಿದೆ.

ಕಾನೂನು ಸುವ್ಯವಸ್ಥೆ ಕಾಪಾಡುವುದು ಮತ್ತು ಕಾನೂನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳುವುದು ಸರ್ಕಾದ ಜವಾಬ್ದಾರಿಯಾಗಿದ್ದರೂ, ಅಂತಹ ಅಧಿಕಾರವನ್ನು ಸರ್ಕಾರ ಮನಸೋಇಚ್ಛೆಯಿಂದ ಚಲಾಯಿಸುವಂತಿಲ್ಲ ಮತ್ತು ಆಸ್ತಿಯನ್ನು ವ್ಯಕ್ತಿಯಿಂದ ನಿರಂಕುಶವಾಗಿ ಕಸಿದುಕೊಳ್ಳಲು ಸಾಧ್ಯವಿಲ್ಲ. ವೈಯಕ್ತಿಕ ಸ್ವಾತಂತ್ರ್ಯವನ್ನು ರಕ್ಷಿಸುವುದು ಮುಖ್ಯ ಎಂದು ಪೀಠ ಹೇಳಿದೆ.

ಅಕ್ರಮ ಆಸ್ತಿ ಕುರಿತಂತೆ ನ್ಯಾಯಾಂಗದ ಬದಲು ಕಾರ್ಯಾಂಗವೇ ತೀರ್ಮಾನಕ್ಕೆ ಬರುವಂತಿಲ್ಲ. ಕಾನೂನು ಪ್ರಕ್ರಿಯೆ ಅನುಸರಿಸದೆ ಆರೋಪಿಯ ಆಸ್ತಿಯನ್ನು ಸರ್ಕಾರಿ ಅಧಿಕಾರಿಗಳು ಕೆಡವುವುದು ಅನ್ಯಾಯಯುತವಾಗುತ್ತದೆ ಎಂದು ಅದು ಹೇಳಿದೆ.

ಅಪರಾಧ ಪ್ರಕ್ರಿಯೆಯಲ್ಲಿ ಆರೋಪಿಗಳಾಗಿರುವವರ ಮನೆ ಅಥವಾ ಅಂಗಡಿಗಳನ್ನು ನೆಲಸಮ ಮಾಡುವ ಕಾನೂನುಬಾಹಿರ ಕ್ರಮ ಕೈಗೊಳ್ಳದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಗಳಿಗೆ ಸಂಬಂಧಿಸಿದಂತೆ ನಡೆದ ವಿಚಾರಣೆ ವೇಳೆ ಪೀಠ ಈ ವಿಚಾರಗಳನ್ನು ತಿಳಿಸಿದೆ.

ನ್ಯಾಯಾಲಯದ ಅನುಮತಿ ಪಡೆಯದೆ ಆರೋಪಿಗಳ ಆಸ್ತಿ ನೆಲಸಮ ಮಾಡದಂತೆ ಅಧಿಕಾರಿಗಳಿಗೆ ಈ ಹಿಂದೆ ಪೀಠ ಮಧ್ಯಂತರ ಆದೇಶ ನೀಡಿತ್ತು. ಅಕ್ಟೋಬರ್ 1 ರಂದು ತೀರ್ಪು ಕಾಯ್ದಿರಿಸಿತ್ತು.

ಉತ್ತರ ಪ್ರದೇಶ, ಗುಜರಾತ್ ಹಾಗೂ ಮಧ್ಯಪ್ರದೇಶ ಸರ್ಕಾರಗಳ ಪರವಾಗಿ ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ವಾದ ಮಂಡಿಸಿದರು.

ಸಂತ್ರಸ್ತ ಕಕ್ಷಿದಾರರನ್ನು ಹಿರಿಯ ವಕೀಲರಾದ ಅಭಿಷೇಕ್ ಮನು ಸಿಂಘ್ವಿ, ಸಿ ಯು ಸಿಂಗ್, ಸಂಜಯ್ ಹೆಗ್ಡೆ, ಎಂ ಆರ್ ಶಂಶಾದ್ ಮತ್ತು ವಕೀಲರಾದ ನಿಜಾಮ್ ಪಾಷಾ,  ಅನಸ್ ತನ್ವೀರ್ ಪ್ರತಿನಿಧಿಸಿದ್ದರು.

ನ್ಯಾಯವಾದಿ ವೃಂದಾ ಗ್ರೋವರ್ ಅವರು ವಿಶ್ವಸಂಸ್ಥೆ ಸೂಕ್ತ ವಸತಿ ಸೌಕರ್ಯ ಕುರಿತ ವಿಶೇಷ ವರದಿಗಾರರ ಪರವಾಗಿ  ವಾದ ಮಂಡಿಸಿದರು.

ಸುಪ್ರೀಂ ಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ನೇತೃತ್ವದ ಮತ್ತೊಂದು ಪೀಠ ಈಚೆಗೆ ಕಾನೂನಿನ ಆಳ್ವಿಕೆ ನಡೆಯುವ ಸಮಾಜದಲ್ಲಿ ಬುಲ್ಡೋಜರ್ ನ್ಯಾಯ ಸ್ವೀಕಾರಾರ್ಹವಲ್ಲ ಎಂದಿತ್ತು.