Justices B Veerappa and T Venkatesh Naik 
ಸುದ್ದಿಗಳು

[ಸ್ಮಶಾನ ಭೂಮಿ] ಜನರಿಗೆ ಮೂಲಸೌಲಭ್ಯ ಪಡೆಯುವುದಕ್ಕಿಂತ ಚುನಾವಣೆ ಬಗ್ಗೆ ಹೆಚ್ಚು ಆಸಕ್ತಿ: ಹೈಕೋರ್ಟ್‌ ಬೇಸರ

ಜನರಿಗೇ ಮೂಲಸೌಲಭ್ಯ ಬೇಕಿಲ್ಲ ಎಂದಾದರೆ, ಪ್ರಕರಣ ಮುಕ್ತಾಯಗೊಳಿಸೋಣ. ಇದು ಬಿಟ್ಟು ಏನು ಮಾಡೋಕೆ ಆಗುತ್ತದೆ. ನ್ಯಾಯದಾನ ಮಾಡುತ್ತೇವೆ; ಕೋರ್ಟ್‌ಗೆ ಬನ್ನಿ ಎಂದು ಸಾರಿ ಹೇಳಿದರೂ ಯಾರೊಬ್ಬರೂ ಮುಂದೆ ಬಾರದ ಪರಿಸ್ಥಿತಿ ಇದೆ ಎಂದು ಬೇಸರಿಸಿದ ಪೀಠ.

Bar & Bench

ಸಾರ್ವಜನಿಕ ಪ್ರಕಟಣೆ ನೀಡಿದ ಹೊರತಾಗಿಯೂ ಇಡೀ ರಾಜ್ಯದ ಯಾವೊಂದು ಭಾಗದಿಂದಲೂ ಸ್ಮಶಾನ ಜಾಗಕ್ಕೆ ಭೂಮಿ ಮಂಜೂರಾತಿ ಕೋರಿ ರಾಜ್ಯ ಸರ್ಕಾರಕ್ಕೆ ಜನರು ಮನವಿ ಸಲ್ಲಿಸದ ಬಗ್ಗೆ ಗುರುವಾರ ತೀವ್ರ ಬೇಸರ ವ್ಯಕ್ತಪಡಿಸಿದ ಕರ್ನಾಟಕ ಹೈಕೋರ್ಟ್, “ಜನರಿಗೆ ಮೂಲಸೌಲಭ್ಯ ಪಡೆಯುವುದಕ್ಕಿಂತ ಚುನಾವಣೆ ಬಗ್ಗೆಯೇ ಹೆಚ್ಚು ಆಸಕ್ತಿ. ಮತ ಹಾಕಲು ಹಣ ವಸೂಲಿ ಮಾಡಬೇಕಲ್ಲವೇ?” ಎಂದು ಮೌಖಿಕವಾಗಿ ಕಟುವಾಗಿ ನುಡಿದಿದೆ.

ರಾಜ್ಯದಲ್ಲಿ ಸ್ಮಶಾನ ಇಲ್ಲದ ಗ್ರಾಮ ಮತ್ತು ಪಟ್ಟಣ ಪ್ರದೇಶಗಳಿಗೆ ಅಗತ್ಯ ಜಮೀನು ಒದಸುವಂತೆ ಸೂಚಿಸಿ ಹೈಕೋರ್ಟ್ ಹೊರಡಿಸಿರುವ ಆದೇಶ ಜಾರಿ ಮಾಡದಿರುವುದಕ್ಕೆ ಬೆಂಗಳೂರು ನಿವಾಸಿ ಮಹಮ್ಮದ್ ಇಕ್ಬಾಲ್ ಸಲ್ಲಿಸಿರುವ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಬಿ ವೀರಪ್ಪ ಮತ್ತು ಟಿ ವೆಂಕಟೇಶ್‌ ನಾಯ್ಕ್‌ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಇದಕ್ಕೂ ಮುನ್ನ, ವಿಚಾರಣೆ ವೇಳೆ ಸರ್ಕಾರಿ ವಕೀಲ ಕಿರಣ್ ಕುಮಾರ್ ಅವರು 2023ರ ಏಪ್ರಿಲ್‌ 19ರಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಒದಗಿಸಿರುವ ಪತ್ರ ಒಳಗೊಂಡ ಮೆಮೊವನ್ನು ಪೀಠಕ್ಕೆ ಸಲ್ಲಿಸಿದರು.

2023ರ ಏಪ್ರಿಲ್‌ 6ರ ಹೈಕೋರ್ಟ್ ಆದೇಶದಂತೆ ರಾಜ್ಯದಲ್ಲಿ ಸ್ಮಶಾನಕ್ಕೆ ಜಾಗವಿಲ್ಲದ ಗ್ರಾಮಕ್ಕೆ ಭೂಮಿ ಮಂಜೂರಾತಿ ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸಬಹುದು ಎಂದು ತಿಳಿಸಿ ಪತ್ರಿಕೆಗಳಲ್ಲಿ ಸಾರ್ವಜನಿಕ ಪ್ರಕಟಣೆ ನೀಡಲಾಗಿತ್ತು. ಆದರೆ, ಸಾರ್ವಜನಿಕ ಪ್ರಕಟಣೆ ಪ್ರಕಟಿಸಿದ ಹೊರತಾಗಿಯೂ ಇಡೀ ರಾಜ್ಯದ ಯಾವುದೇ ಭಾಗದಿಂದಲೂ ಯಾವೊಬ್ಬ ಗ್ರಾಮಸ್ಥರಿಂದಲೂ ಸ್ಮಶಾನಕ್ಕೆ ಭೂಮಿ ಮಂಜೂರಾತಿ ಕೋರಿ ಮನವಿ ಬಂದಿಲ್ಲ ಎಂದು ಪತ್ರದಲ್ಲಿ ತಿಳಿಸಲಾಗಿತ್ತು.

ಈ ಪತ್ರ ನೋಡಿ ಬೇಸರಗೊಂಡ ನ್ಯಾಯಮೂರ್ತಿ ಬಿ ವೀರಪ್ಪ ಅವರು, "ಇಷ್ಟೇ ರೀ....ನಮ್ಮ ದೇಶ. ಸ್ಮಶಾನಕ್ಕೆ ಭೂಮಿ ಇತ್ಯಾದಿ ಮೂಲಸೌಲಭ್ಯ ಪಡೆಯುವುದರ ಬಗ್ಗೆ ಜನರಿಗೆ ಆಸಕ್ತಿ ಇಲ್ಲ. ಚುನಾವಣೆ ವಿಚಾರವಾಗಿ ಹೆಚ್ಚಿನ ಗಮನ ಹರಿಸುತ್ತಾರೆ. ಚುನಾವಣೆ ಬಂತಲ್ಲ; ಹಣ ವಸೂಲಿ ಮಾಡುವ ಕುರಿತು ಯೋಚಿಸುತ್ತಿದ್ದಾರೆ. ಹಣ ಸ್ವೀಕರಿಸಿ ಮತ ಹಾಕಬೇಕಲ್ಲವೇ? ಅದುವೇ ಜನರಿಗೆ ಇಷ್ಟದ ವಿಷಯ. ಜನರೇ ಹೀಗಿದ್ದರೆ ನಾವು ಏನು (ನ್ಯಾಯಾಲಯ) ಮಾಡಲು ಸಾಧ್ಯವಿದೆ?" ಎಂದರು.

ಅಲ್ಲದೆ, ತಮಗೆ ಬೇಕಾದ ಮೂಲ ಸೌಲಭ್ಯದ ಬಗ್ಗೆ ಜನ ಆಸಕ್ತಿ ತೋರದಿರುವುದಕ್ಕೆ ನಮ್ಮ ದೇಶ ಹೀಗಿರುವುದು. ಸ್ವಾತಂತ್ರ್ಯ ಸಿಕ್ಕಿದೆ; ಎಂಜಾಯ್ ಮಾಡಬೇಕಷ್ಟೇ ಎಂಬ ಮನಸ್ಥಿತಿ ಜನರಲ್ಲಿದೆ. ಮತ್ತೆ ಸ್ವಾತಂತ್ರ್ಯ ಹೋದಾಗ ಅದರ ಮೌಲ್ಯ ತಿಳಿಯುತ್ತದೆ. ಮೊದಲು ಸಾರ್ವಜನಿಕರು ಮತ್ತು ಅವರ ಮನಸ್ಥಿತಿ ಬದಲಾಗಬೇಕು. ಪ್ರಕರಣದಲ್ಲಿ ನ್ಯಾಯಾಲಯವು ತನ್ನ ಕೆಲಸ ಮಾಡಿದೆ. ಜನರಿಗೇ ಮೂಲ ಸೌಲಭ್ಯ ಬೇಕಿಲ್ಲ ಎಂದಾದರೆ, ಈ ಪ್ರಕರಣವನ್ನು ಮುಕ್ತಾಯಗೊಳಿಸೋಣ. ಅದು ಬಿಟ್ಟು ಮತ್ತೇನು ಮಾಡೋಕೆ ಆಗುತ್ತದೆ. ನ್ಯಾಯದಾನ ಮಾಡುತ್ತೇವೆ; ಕೋರ್ಟ್‌ಗೆ ಬನ್ನಿ ಎಂದು ಸಾರಿ ಹೇಳಿದರೂ ಯಾರೊಬ್ಬರೂ ಮುಂದೆ ಬಾರದ ಪರಿಸ್ಥಿತಿ ಮನೆ ಮಾಡಿರುವುದು ವಿಷಾದನೀಯ ಎಂದರು.

ಅರ್ಜಿದಾರ ವಕೀಲ ಮೊಹಮ್ಮದ್ ಇಕ್ಬಾಲ್, ಸರ್ಕಾರವು 2023ರ ಏಪ್ರಿಲ್‌ 20ವರೆಗೆ (ಗುರುವಾರ) ರಾಜ್ಯದ ಯಾವೆಲ್ಲಾ ಗ್ರಾಮಗಳಿಗೆ ಸ್ಮಶಾನಕ್ಕೆ ಭೂಮಿ ಕಲ್ಪಿಸಲಾಗಿದೆ ಎಂಬ ಬಗ್ಗೆ ಪರಿಶೀಲನೆ ನಡೆಸಿ ಸಮಗ್ರ ಅಫಿಡವಿಟ್‌ ಸಲ್ಲಿಸಲಾಗುವುದು. ಅದಕ್ಕೆ ಕಾಲಾವಕಾಶ ನೀಡಬೇಕು ಎಂದು ಕೋರಿದರು. ಅದಕ್ಕೆ ಒಪ್ಪಿದ ಪೀಠವು ಅರ್ಜಿದಾರರಿಗೆ ಮೇ 23ರವರೆಗೆ ಕಾಲಾವಕಾಶ ನೀಡಿ ವಿಚಾರಣೆ ಮುಂದೂಡಿತು.

ರಾಜ್ಯದಲ್ಲಿ ಒಟ್ಟು 30,762 ಗ್ರಾಮಗಳಿವೆ. ಅದರಲ್ಲಿ 2,491 ಬೇಚರಕ್ (ಜನವಸತಿಯಿಲ್ಲದ) ಗ್ರಾಮಗಳಿವೆ. ಬೇಚರಕ್ ಗ್ರಾಮಗಳನ್ನು ಹೊರತುಪಡಿಸಿದ ಒಟ್ಟು 28,271 ಗ್ರಾಮಗಳ ಪೈಕಿ 28,260 ಗ್ರಾಮಗಳಿಗೆ ಸ್ಮಶಾನ ಭೂಮಿ ಒದಗಿಸಲಾಗಿದೆ ಎಂದು ಕಳೆದ ಫೆಬ್ರವರಿಯಲ್ಲಿ ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿತ್ತು. ಸರ್ಕಾರ ಒದಗಿಸಿದ ಈ ಮಾಹಿತಿ ಸೂಕ್ತವಾಗಿಲ್ಲ ಎಂದು ಆಕ್ಷೇಪಿಸಿದ್ದ ಹೈಕೋರ್ಟ್, ಪತ್ರಿಕಾ ಪ್ರಕಟಣೆ ಹೊರಡಿಸಿ ಯಾವ ಗ್ರಾಮದಲ್ಲಿ ಸ್ಮಶಾನ ಭೂಮಿ ಇಲ್ಲ ಎಂಬುದರ ಬಗ್ಗೆ ಜನರಿಂದ ಮಾಹಿತಿ ಪಡೆಯುವಂತೆ ಸೂಚಿಸಿತ್ತು.