ಸ್ಮಶಾನ ಭೂಮಿ: ಎಲ್ಲರೂ ಸ್ವಾರ್ಥಿಗಳಾಗಿ ಬದಲಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ಹೈಕೋರ್ಟ್‌

ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆಯುತ್ತಿದೆ. ಆದರೂ, ಜನತೆಗೆ ಬುದ್ದಿ ಬಂದಿಲ್ಲ.  ಹಣ ಪಡೆದು ಮತ ಹಾಕುವ ಚಾಳಿ ಮುಂದುವರಿದಿದೆ.  ಜನ ಎಚ್ಚೆತ್ತುಕೊಳ್ಳದಿದ್ದರೆ ನಾವೇನು ಮಾಡುವುದಕ್ಕೆ ಸಾಧ್ಯವಿಲ್ಲ ಎಂದ ನ್ಯಾಯಾಲಯ.
High Court of Karnataka
High Court of Karnataka

ಸ್ಮಶಾನ ಭೂಮಿ ಇಲ್ಲದ ಗ್ರಾಮದವರು ಮನವಿ ಸಲ್ಲಿಸುವಂತೆ ಕೋರಿ ರಾಜ್ಯದ 31 ಜಿಲ್ಲೆಗಳಲ್ಲಿಯೂ ಸ್ಥಳೀಯ ಮತ್ತು ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಪ್ರಕಟಣೆ ಹೊರಡಿಸಿದರೂ ಜನತೆ ಮುಂದಾಗದಿರುವುದಕ್ಕೆ ಕರ್ನಾಟಕ ಹೈಕೋರ್ಟ್‌ ಗುರುವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಎಲ್ಲರೂ ಸ್ವಾರ್ಥಿಗಳಾಗಿ ಬದಲಾಗುತ್ತಿದ್ದಾರೆ ಎಂದು ಬೇಸರಿಸಿತು.

ರಾಜ್ಯದಲ್ಲಿ ಸ್ಮಶಾನ ಜಾಗ ಇಲ್ಲದ ಗ್ರಾಮ ಮತ್ತು ಪಟ್ಟಣ ಪ್ರದೇಶಗಳಿಗೆ ಅಗತ್ಯ ಜಮೀನು ಒದಗಿಸಲು ಸರ್ಕಾರಕ್ಕೆ ನಿರ್ದೇಶಿಸಿ ಹೈಕೋರ್ಟ್ ಹೊರಡಿಸಿದ ಆದೇಶ ಜಾರಿಯಾಗದ ಹಿನ್ನೆಲೆಯಲ್ಲಿ ಬೆಂಗಳೂರು ನಿವಾಸಿ ಮಹಮ್ಮದ್ ಇಕ್ಬಾಲ್ ಎಂಬುವರು ಸಲ್ಲಿಸಿರುವ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಬಿ ವೀರಪ್ಪ ಮತ್ತು ನ್ಯಾಯಮೂರ್ತಿ ಟಿ ವೆಂಕಟೇಶ್ ನಾಯ್ಕ್ ಅವರಿದ್ದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.

“ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆಯುತ್ತಿದೆ. ಆದರೂ, ಜನತೆಗೆ ಬುದ್ದಿ ಬಂದಿಲ್ಲ. ಹಣ ಪಡೆದು ಮತ ಹಾಕುವ ಚಾಳಿ ಮುಂದುವರಿದಿದೆ. ಜನ ಎಚ್ಚೆತ್ತುಕೊಳ್ಳದಿದ್ದರೆ ನಾವೇನೂ ಮಾಡುವುದಕ್ಕೆ ಸಾಧ್ಯವಿಲ್ಲ. ಜನರು ಸರಿಯಾದರೆ ಎಲ್ಲವೂ ಸರಿಯಾಗಲಿದೆ” ಎಂದು ಪೀಠ ಮೌಖಿಕವಾಗಿ ಹೇಳಿತು.

ಅರ್ಜಿದಾರರನ್ನು ಉದ್ದೇಶಿಸಿದ ಪೀಠವು ರಾಜ್ಯದಲ್ಲಿ ಎಷ್ಟು ಗ್ರಾಮಗಳಿವೆ ಎಂಬುದರ ಕುರಿತು ಮಾಹಿತಿ ಇದೆಯೇ ಎಂದು ಪ್ರಶ್ನಿಸಿತು. ಇದಕ್ಕೆ 'ಇಲ್ಲ' ಎಂದು ಅವರು ಉತ್ತರಿಸಿದರು.

ಇದರಿಂದ ಕೆರಳಿದ ಪೀಠವು 2018ರಿಂದ ಅರ್ಜಿ ವಿಚಾರಣೆ ನಡೆಯುತ್ತಿದೆ. ಇದನ್ನು ನ್ಯಾಯಾಲಯ ಮೇಲ್ವಿಚಾರಣೆ ಮಾಡುತ್ತಿದೆ.  ಅಲ್ಲದೆ, ನ್ಯಾಯಾಲಯ ಪ್ರತಿ 15 ದಿನಕ್ಕೊಮ್ಮೆ ಎಷ್ಟು ಗ್ರಾಮಗಳಿಗೆ ಸ್ಮಶಾನ ಭೂಮಿ ಒದಗಿಸಲಾಗಿದೆ ಎಂಬ ಅಂಶನ್ನು ಪಡೆದು ವಿಚಾರಣೆ ನಡೆಸುತ್ತಿದೆ. ಆದರೂ ರಾಜ್ಯದಲ್ಲಿ ಎಷ್ಟು ಗ್ರಾಮಗಳಿವೆ ಎಂಬುದು ಅರ್ಜಿದಾರರಿಗೆ ಗೊತ್ತಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿತು. ಅಲ್ಲದೇ, ಈ ಅರ್ಜಿಯಲ್ಲಿ ಸಾರ್ವಜನಿಕ ಹಿತಾಸಕ್ತಿ ಇದೆಯೋ, ಖಾಸಗಿ ಇತಾಸಕ್ತಿ ಇದಿಯೋ ಗೊತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡಿತು.

Also Read
ಸ್ಮಶಾನ ಜಾಗ ಕಲ್ಪಿಸುವಲ್ಲಿ ಸರ್ಕಾರದ ವೈಫಲ್ಯ: 75 ವರ್ಷಗಳಿಂದ ಕೇವಲ ನಾಟಕ ಮಾಡುತ್ತಿದ್ದೀರಿ ಎಂದು ಹೈಕೋರ್ಟ್‌ ಕಿಡಿ

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಸರ್ಕಾರದ ವಕೀಲರು, ಯಾವೆಲ್ಲಾ ಗ್ರಾಮಗಳಲ್ಲಿ ಸ್ಮಶಾನ ಭೂಮಿ ಇಲ್ಲ ಎಂಬುದರ ಮಾಹಿತಿ ಸಂಗ್ರಹಿಸುವ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸುವಂತೆ ಪೀಠವು ಈ ಹಿಂದೆ ನೀಡಿದ್ದ ನಿರ್ದೇಶನದ ಅನುಪಾಲನೆ ಮಾಡಿರುವ ವರದಿಯನ್ನು ಪೀಠಕ್ಕೆ ಸಲ್ಲಿಸಿದರು.

ರಾಜ್ಯದ 31 ಜಿಲ್ಲೆಗಳಲ್ಲಿ ರಾಜ್ಯ ಮಟ್ಟದ ಮತ್ತು ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟಣೆ ಹೊರಡಿಸಲಾಗಿದೆ. ಆದರೆ, ಈವರೆಗೂ ಸ್ಮಶಾನ ಭೂಮಿ ಇಲ್ಲ ಎಂದು ಯಾವುದೇ ಗ್ರಾಮದಿಂದ ಮನವಿ ಬಂದಿಲ್ಲ. ಮನವಿ ಬಂದಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಪೀಠಕ್ಕೆ ವಿವರಿಸಿದರು. ಈ ಮಾಹಿತಿ ದಾಖಲಿಸಿಕೊಂಡ ಪೀಠವು ವಿಚಾರಣೆಯನ್ನು ಏಪ್ರಿಲ್ 20ಕ್ಕೆ ಮುಂದೂಡಿತು.

Kannada Bar & Bench
kannada.barandbench.com