ರಾಜ್ಯದ ಜನತೆಯನ್ನು ಬೆಚ್ಚಿ ಬೀಳಿಸಿದ್ದ ಅನಿವಾಸಿ ಭಾರತೀಯ ಉದ್ಯಮಿ, ಉಡುಪಿ ಮೂಲದ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ಪತ್ನಿ ರಾಜೇಶ್ವರಿ ಶೆಟ್ಟಿ ಅವರಿಗೆ ಗುರುವಾರ ಕರ್ನಾಟಕ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಧಿಸಿರುವ ಜೀವಾವಧಿ ಶಿಕ್ಷೆ ರದ್ದುಪಡಿಸಬೇಕು ಮತ್ತು ಅಧೀನ ನ್ಯಾಯಾಲಯ ವಿಧಿಸಿರುವ ಶಿಕ್ಷೆಯನ್ನು ಅಮಾನತಿನಲ್ಲಿ ಇಟ್ಟು ಜಾಮೀನು ಮಂಜೂರು ಮಾಡಬೇಕು ಎಂದು ಕೋರಿ ರಾಜೇಶ್ವರಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಜಿ ನರೇಂದರ್ ಮತ್ತು ಇ ಎಸ್ ಇಂದಿರೇಶ್ ಅವರಿದ್ದ ಪೀಠ ನಡೆಸಿತು.
ರಾಜೇಶ್ವರಿ ಪರ ವಾದಿಸಿದ್ದ ವಕೀಲ ಹಸ್ಮತ್ ಪಾಷಾ ಅವರು “ಹೋಮಕುಂಡದಲ್ಲಿ ಭಾಸ್ಕರ್ ಶೆಟ್ಟಿ ಅವರನ್ನು ಸುಟ್ಟು ಕೊಲೆ ಮಾಡಲಾಗಿದೆ ಎಂದು ತನಿಖಾಧಿಕಾರಿಗಳು ಆರೋಪಿಸಿದ್ದಾರೆ. ಆದರೆ, ಹೋಮಕುಂಡದಲ್ಲಿ ಮೃತದೇಹ ದೊರೆತಿಲ್ಲ. ಪ್ರಕರಣದಲ್ಲಿ ಡಿಎನ್‌ಎ ಪರೀಕ್ಷೆಯ ವಿಶ್ಲೇಷಣೆ ಸೂಕ್ತವಾಗಿಲ್ಲ. ರಾಜೇಶ್ವರ ಶೆಟ್ಟಿ ಅವರೇ ಕೊಲೆ ಮಾಡಿರುವುದಕ್ಕೆ ಸೂಕ್ತ ಸಾಕ್ಷ್ಯಾಧಾರಗಳು ಇಲ್ಲ. ಅದನ್ನು ಪರಿಗಣಿಸದೇ ವಿಚಾರಣಾ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಹೀಗಾಗಿ, ಶಿಕ್ಷೆಯನ್ನು ಅಮಾನತ್ತಿನಲ್ಲಿರಿಸಿ, ಜಾಮೀನು ಮಂಜೂರು ಮಾಡಬೇಕು” ಎಂದು ಮನವಿ ಮಾಡಿದ್ದರು.
2016ರ ಜುಲೈ 28ರಂದು ಉದ್ಯಮಿ ಇಂದ್ರಾಳಿಯ ಭಾಸ್ಕರ್ ಅವರನ್ನು ಭೀಕರವಾಗಿ ಕೊಲೆ ಮಾಡಿ ಶವವನ್ನು ಹೋಮಕುಂಡದಲ್ಲಿ ದಹಿಸಲಾಗಿತ್ತು. ಅವಶೇಷಗಳನ್ನು ಹತ್ತಿರದ ನದಿಗೆ ಎಸೆಯಲಾಗಿತ್ತು. ಅದೇ ತಿಂಗಳ 31ರಂದು ತಮ್ಮ ಮಗ ನಾಪತ್ತೆಯಾಗಿರುವ ಬಗ್ಗೆ ಭಾಸ್ಕರ್ ಅವರ ತಾಯಿ ಮಣಿಪಾಲ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ತನಿಖೆ ನಡೆಸಿದ ಪೊಲೀಸರು ಆಗಸ್ಟ್‌ನಲ್ಲಿ ಆರೋಪಿಗಳನ್ನು ಬಂಧಿಸಿದ್ದರು.
ಅಪರಾಧಿಗಳಾದ ಪತ್ನಿ ರಾಜೇಶ್ವರಿ ಶೆಟ್ಟಿ, ಪುತ್ರ ನವನೀತ್ ಶೆಟ್ಟಿ ಹಾಗೂ ಜ್ಯೋತಿಷಿ ನಿರಂಜನ್ ಭಟ್‌ಗೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 302 (ಕೊಲೆಗೆ ದಂಡನೆ), 201(ಸಾಕ್ಷ್ಯ ನಾಶ ಅಥವಾ ಅಪರಾಧಿಯ ರಕ್ಷಣೆಗೆ ಸುಳ್ಳು ಹೇಳುವುದು), ಮತ್ತು 120 ಬಿ (ಅಪರಾಧಿಕ ಒಳಸಂಚಿಗೆ ದಂಡನೆ), ಸೆಕ್ಷನ್ 34ರ (ಸಮಾನ ಉದ್ದೇಶ ಈಡೇರಿಕೆಗಾಗಿ ವಿವಿಧ ವ್ಯಕಿಗಳು ಎಸಗುವ ಕೃತ್ಯ) ಅಡಿ ಶಿಕ್ಷೆ ವಿಧಿಸಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜೆ ಎನ್ ಸುಬ್ರಹ್ಮಣ್ಯ ತೀರ್ಪು ಪ್ರಕಟಿಸಿದ್ದರು.