BCCI and Byju's logos 
ಸುದ್ದಿಗಳು

ಬೈಜೂಸ್ ಪ್ರಕರಣ: ಎನ್‌ಸಿಎಲ್‌ಟಿ ಕೇವಲ ಅಂಚೆ ಕಚೇರಿ ಅಲ್ಲ ಎಂದ ಸುಪ್ರೀಂ ಕೋರ್ಟ್

ಕಂಪೆನಿಯೊಂದು ದಿವಾಳಿ ಪ್ರಕ್ರಿಯೆಗೆ ಒಮ್ಮೆ ಸಮ್ಮತಿಸಿದರೆ ಆಗ ಸಾಲದಾತ ಮತ್ತು ಕಾರ್ಪೊರೆಟ್‌ ಸಾಲಗಾರನ ನಡುವೆ ಇತ್ಯರ್ಥಕ್ಕೆ ಎನ್‌ಸಿಎಲ್‌ಟಿ ಮತ್ತು ಎನ್‌ಸಿಎಲ್‌ಎಟಿ ಹೇಗೆ ವ್ಯವಹರಿಸಬೇಕು ಎಂಬ ಬಗ್ಗೆ ತೀರ್ಪು ವಿವರಿಸುತ್ತದೆ.

Bar & Bench

ಶೈಕ್ಷಣಿಕ ನವೋದ್ಯಮವಾದ ಬೈಜೂಸ್‌ ಮಾತೃಸಂಸ್ಥೆ ಥಿಂಕ್‌ ಅಂಡ್‌ ಲರ್ನ್‌ ಪ್ರೈವೇಟ್‌ ಲಿಮಿಟೆಡ್‌ ವಿರುದ್ಧದ ದಿವಾಳಿ ಪ್ರಕ್ರಿಯೆಗೆ ತಡೆ ನೀಡಿದ್ದ ತೀರ್ಪು ಪ್ರಶ್ನಿಸಿ ಅಮೆರಿಕ ಮೂಲದ ಹಣಕಾಸು ಸಾಲಗಾರ ಸಂಸ್ಥೆ ಗ್ಲಾಸ್‌ ಟ್ರಸ್ಟ್‌ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್‌ ಬುಧವಾರ ಪುರಸ್ಕರಿಸಿದೆ.

ಆ ಮೂಲಕ ಬೈಜು ರವೀಂದ್ರನ್ ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಡುವಿನ ಒಪ್ಪಂದವನ್ನು ಅಂಗೀಕರಿಸಿದ್ದ ಎನ್‌ಸಿಎಲ್‌ಎಟಿ ಆದೇಶವನ್ನು ಅದು ರದ್ದುಗೊಳಿಸಿತು. ಬಿಸಿಸಿಐ ಅರ್ಜಿ ಆಧರಿಸಿ ಬೆಂಗಳೂರಿನ ಎನ್‌ಸಿಎಲ್‌ಟಿ ಬೈಜೂಸ್‌ ವಿರುದ್ಧ ಕಾರ್ಪೊರೆಟ್‌ ದಿವಾಳಿ ಪರಿಹಾರ ಪ್ರಕ್ರಿಯೆ ಆರಂಭಿಸಿತ್ತು.

ಕಾರ್ಪೊರೆಟ್‌ ದಿವಾಳಿತನ ಪರಿಹಾರ ಪ್ರಕ್ರಿಯೆಗೆ (CIRP) ಕಂಪನಿ ಒಳಪಟ್ಟ ನಂತರ ಸಾಲದಾತ ಮತ್ತು ಕಾರ್ಪೊರೆಟ್‌ ಸಾಲಗಾರನ ನಡುವೆ ಇತ್ಯರ್ಥಕ್ಕೆ ಎನ್‌ಸಿಎಲ್‌ಟಿ ಮತ್ತು ಎನ್‌ಸಿಎಲ್‌ಎಟಿ ಹೇಗೆ ವ್ಯವಹರಿಸಬೇಕು ಎಂಬ ಬಗ್ಗೆ ಸುಪ್ರೀಂ ಕೋರ್ಟ್‌ನ ತೀರ್ಪು ಕಾನೂನು ರೂಪಿಸಿದೆ.  

ಸಿಜೆಐ ಡಿ ವೈ ಚಂದ್ರಚೂಡ್‌ ನೇತೃತ್ವದ ಪೀಠ ಪ್ರಕರಣವನ್ನು ಎನ್‌ಸಿಎಲ್‌ಟಿಗೆ ಮರಳಿಸಿದೆ. ಇತ್ಯರ್ಥವನ್ನು ಒಪ್ಪಬೇಕೆ ಅಥವಾ ಬೇಡವೇ ಮತ್ತು ಬೈಜೂಸ್‌ ಅನ್ನು ಸಿಐಆರ್‌ಪಿಯಿಂದ ತೆಗೆದುಹಾಕಬೇಕೇ ಎಂಬ ಕುರಿತು ತೀರ್ಪು ನೀಡುವ ಮುನ್ನ ಎಲ್ಲಾ ಸಾಲಗಾರರ ವಾದವನ್ನು ಅದು ಆಲಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯ ತಿಳಿಸಿದೆ.

ಸಿಐಆರ್‌ಪಿಯನ್ನು ರದ್ದುಗೊಳಿಸುವ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಸಾಲಗಾರರಿಗೆ ಇರುವ ಅರ್ಹತೆ, ಎನ್‌ಸಿಎಲ್‌ಎಟಿಯ ಅಂತರ್ಗತ ಅಧಿಕಾರಗಳು ಹಾಗೂ ಇತ್ಯರ್ಥದಲ್ಲಿ ಅಮಾನತಾದ ಆಡಳಿತ ಸಂಸ್ಥೆಯ ಪಾತ್ರ ಇತ್ಯಾದಿಗಳ ಕುರಿತ ವಿವರವಾಗಿ ಚರ್ಚಿಸಿರುವ ಸುಪ್ರೀಂ ಕೋರ್ಟ್‌ ಎನ್‌ಸಿಎಲ್‌ಟಿ ಕೇವಲ ಅಂಚೆ ಕಚೇರಿಯಂತೆ ವರ್ತಿಸಬಾರದು ಎಂದು ಕಿವಿಮಾತು ಹೇಳಿದೆ.

ಎನ್‌ಸಿಎಲ್‌ಟಿ ಎಂಬುದು ಪಕ್ಷಕಾರರು ಸಲ್ಲಿಸಿದ ಹಿಂಪಡೆಯುವ ಅರ್ಜಿಗಳ ಮೇಲೆ ಮುದ್ರೆ ಹಾಕುವ ಅಂಚೆ ಕಚೇರಿಯಂತೆ ಅಲ್ಲ. ತೀರ್ಪು ನೀಡುವ ಮುನ್ನ ಎಲ್ಲಾ ಪಕ್ಷಕಾರರ ವಾದವನ್ನು ಅದು ಆಲಿಸಿ ಸಂಬಂಧಪಟ್ಟ ಎಲ್ಲಾ ವಾಸ್ತವಾಂಶಗಳನ್ನು ಪರಿಗಣಿಸಬೇಕು  ಎಂದು ಸರ್ವೋಚ್ಚ ನ್ಯಾಯಾಲಯ ತಿಳಿಸಿದೆ.