ಶೈಕ್ಷಣಿಕ ತಂತ್ರಜ್ಞಾನ ಸಂಸ್ಥೆ ಬೈಜೂಸ್ ವಿರುದ್ಧ ದಾಖಲಾಗಿದ್ದ ದಿವಾಳಿ ನಿರ್ಣಯ ಪ್ರಕ್ರಿಯೆ ವಿರೋಧಿಸಿ ಬೈಜೂಸ್‌ನ ಬೈಜು ರವೀಂದ್ರನ್ ಸಲ್ಲಿಸಿದ್ದ ಮೇಲ್ಮನವಿಯನ್ನು ರಾಷ್ಟ್ರೀಯ ಕಂಪೆನಿ ಕಾನೂನು ಮೇಲ್ಮನವಿ ನ್ಯಾಯಾಧಿಕರಣ (ಎನ್‌ಸಿಎಲ್‌ಎಟಿ) ಶುಕ್ರವಾರ ಪುರಸ್ಕರಿಸಿದೆ.
ಕ್ರಿಕೆಟ್ ಜೆರ್ಸಿ ಪ್ರಾಯೋಜಕತ್ವದ ಬಾಕಿ ₹158 ಕೋಟಿಯನ್ನು ಬಿಸಿಸಿಐಗೆ ಪಾವತಿಸಲು ನಿರ್ಧರಿಸಲಾಗಿದೆ ಎಂಬ ಬೈಜೂಸ್ ಒಪ್ಪಂದ ಒಪ್ಪಿ ನ್ಯಾಯಾಂಗ ಸದಸ್ಯ ರಾಕೇಶ್ ಕುಮಾರ್ ಜೈನ್ ಮತ್ತು ತಾಂತ್ರಿಕ ಸದಸ್ಯ ಜಿತೇಂದ್ರನಾಥ್ ಸ್ವೈನ್ ಅವರ ಪೀಠ ಆದೇಶಿಸಿದೆ.
ಬಿಸಿಸಿಐ ಅರ್ಜಿ ಆಧರಿಸಿ ಬೆಂಗಳೂರಿನ ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯಾಧಿಕರಣವು ಬೈಜೂಸ್ ವಿರುದ್ಧ ಕಾರ್ಪೊರೇಟ್ ದಿವಾಳಿ ನಿರ್ಣಯ ಪ್ರಕ್ರಿಯೆ ಆರಂಭಿಸಿತ್ತು. ಅದನ್ನು ಈಗ ಸ್ಥಗಿತಗೊಳಿಸಲಾಗಿದೆ.
ಬೈಜೂ ರವೀಂದ್ರನ್ ಸಹೋದರ ರಿಜಿ ಅವರು ವೈಯಕ್ತಿಕವಾಗಿ ಬಿಸಿಸಿಐಗೆ ಹಣ ಪಾವತಿಸಲಿದ್ದಾರೆ ಎಂಬ ಖಾತರಿಯ ಒಪ್ಪಂದವನ್ನು ಬೈಜೂಸ್ ಮತ್ತು ಬಿಸಿಸಿಐ ಸಲ್ಲಿಸಿದ್ದು ಅದನ್ನುಎನ್‌ಸಿಎಲ್‌ಎಟಿ ಒಪ್ಪಿಕೊಂಡಿದೆ.
ಬೈಜೂಸ್ ಜೊತೆಗಿನ ವಿವಾದ ಇತ್ಯರ್ಥಕ್ಕೆ ಒಪ್ಪಿಕೊಳ್ಳಲಾಗಿದೆ ಎಂದು ಈಚೆಗೆ ಬಿಸಿಸಿಐ ಎನ್‌ಸಿಎಲ್‌ಎಟಿಗೆ ತಿಳಿಸಿತ್ತು. ರಿಜು ರವೀಂದ್ರನ್ ವೈಯಕ್ತಿಕ ಖಾತೆಯಿಂದ ಬಿಸಿಸಿಐಗೆ ಬಾಕಿ ಹಣ ಪಾವತಿಸಲಾಗುವುದು ಎಂದು ಬೈಜು ರವೀಂದ್ರನ್ ತಿಳಿಸಿದ್ದಾರೆ.
ಇದಕ್ಕೆ ಅಮೆರಿಕಾದ ಸಾಲದಾತ ಹಣಕಾಸು ಸಂಸ್ಥೆಯು ಕದ್ದಿರುವ ಹಣವನ್ನು ಬಿಸಿಸಿಐಗೆ ಪಾವತಿಸುವ ಆತಂಕ ವ್ಯಕ್ತಪಡಿಸಿತ್ತು. ಇದಕ್ಕೆ ಬಿಸಿಸಿಐ ಪ್ರತಿನಿಧಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಕಳಂಕಿತ ಹಣವನ್ನು ಬಿಸಿಸಿಐ ಒಪ್ಪಿಕೊಳ್ಳುವುದಿಲ್ಲ. ಎಲ್ಲಿಂದ ಹಣ ಪಾವತಿಸಲಾಗುತ್ತದೆ ಎಂಬ ಮೂಲವನ್ನು ಬಹಿರಂಗಪಡಿಸಲಾಗಿದೆ. ಹಣವನ್ನು ಬ್ಯಾಂಕ್ ಮೂಲಕ ಪಡೆಯಲಾಗುವುದು ಎಂದರು.
ಸಾಲದಾತ ಸಂಸ್ಥೆ ಪ್ರತಿನಿಧಿಸಿದ್ದ ಹಿರಿಯ ವಕೀಲ ಮುಕುಲ್ ರೋಹಟ್ಗಿ ಅವರು ಹಣ ಮರುಪಾವತಿಗೆ ಸಂಬಂಧಿಸಿದ ಹಣದ ಮೂಲದ ಬಗೆಗಿನ ಅನುಮಾನ ಸ್ಪಷ್ಟವಾಗಿಲ್ಲ ಎಂದರು.