Sharmistha Panoli and Calcutta HC 
ಸುದ್ದಿಗಳು

ಮುಸ್ಲಿಮರ ವಿರುದ್ಧ ಹೇಳಿಕೆ: ಪನೋಲಿಗೆ ಕಲ್ಕತ್ತಾ ಹೈಕೋರ್ಟ್ ಮಧ್ಯಂತರ ಜಾಮೀನು

ಗುರುಗ್ರಾಮದಲ್ಲಿ 22 ವರ್ಷದ ಕಾನೂನು ವಿದ್ಯಾರ್ಥಿನಿ ಪನೋಲಿ ಅವರನ್ನು ಮೇ 30ರ ರಾತ್ರಿ ಬಂಧಿಸಲಾಗಿತ್ತು. ಆಕೆ ಕೊಲ್ಕತ್ತಾದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದರು.

Bar & Bench

ಸಾಮಾಜಿಕ ಮಾಧ್ಯಮದಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ 22 ವರ್ಷದ ಕಾನೂನು ವಿದ್ಯಾರ್ಥಿನಿ ಶಮಿಷ್ಠಾ ಪನೋಲಿಗೆ ಕಲ್ಕತ್ತಾ ಹೈಕೋರ್ಟ್ ಗುರುವಾರ ಮಧ್ಯಂತರ ಜಾಮೀನು ನೀಡಿದೆ [ಶಮಿಷ್ಠಾ ಪನೋಲಿ @ಶರ್ಮಿಷ್ಠಾ ಪನೋಲಿ ರಾಜ್ ಮತ್ತು ಪಶ್ಚಿಮ ಬಂಗಾಳ ಸರ್ಕಾರ ಇನ್ನಿತರರ ನಡುವಣ ಪ್ರಕರಣ] .

ಎರಡೂ ಕಡೆಯ ವಾದಗಳನ್ನು ಆಲಿಸಿದ ನಂತರ ನ್ಯಾಯಮೂರ್ತಿ ರಾಜಾ ಬಸು ಚೌಧರಿ ಈ ಆದೇಶ ಹೊರಡಿಸಿದರು.

ರಾಜ್ಯ ಸರ್ಕಾರದ ಪರವಾಗಿ ಹಾಜರಾದ ಅಡ್ವೊಕೇಟ್ ಜನರಲ್ (ಎಜಿ) ಕಿಶೋರ್ ದತ್ತ, ಪ್ರಕರಣವನ್ನು ನಿಯಮಿತ ವಿಚಾರಣಾ ಪೀಠಕ್ಕೆ ವರ್ಗಾವಣೆ ಮಾಡಬೇಕೆಂದು ಕೇಳಿಕೊಂಡರು. ಇದಕ್ಕೆ ನ್ಯಾಯಾಲಯ ಸಮ್ಮತಿಸಲಿಲ್ಲ. “ಹಿಂದಿನ ಪೀಠ ಕೆಲ ಅವಲೋಕನಗಳನ್ನು ಮಾಡಿದ್ದು ನಾನು ಪ್ರಕರಣ ಆಲಿಸಬೇಕಿದೆ. ಪ್ರಸ್ತುತ ರಜಾಕಾಲೀನ ಪೀಠದ ನ್ಯಾಯಮೂರ್ತಿಗಳಲ್ಲಿ ಬದಲಾವಣೆಯಾಗಿದ್ದರೂ ಅದು ಪರಿಸ್ಥಿತಿಯನ್ನೇನೂ ಭಿನ್ನವಾಗಿಸುವುದಿಲ್ಲ” ಎಂದು ನ್ಯಾ. ಚೌಧರಿ ಹೇಳಿದರು.

ಅಲ್ಲದೆ, "ನೋಟಿಸ್ ಜಾರಿ ಮಾಡಲು ಪ್ರಯತ್ನಗಳು ನಡೆಸಲಾಯಿತು ಆದರೆ ಆರೋಪಿ ವಿಚಾರಣೆಗೆ ಹಾಜರಾಗಲಿಲ್ಲ ಎಂದು ನೀವು ವಾದಿಸಿದ್ದೀರಿ, ಇದರಿಂದಾಗಿ ವಾರಂಟ್ ಕೋರಿದ್ದಾಗಿ ನೀವು ಹೇಳಿದ್ದೀರಿ. ಈ ಹಿನ್ನೆಲೆಯಲ್ಲಿ. ನಾನು ಬಂಧನಕ್ಕೆ ಸಂಬಂಧಿಸಿದ ಮೆಮೋ ನೋಡಿದ್ದೇನೆ... ವಾರಂಟ್‌ನಲ್ಲಿ ಯಾವುದೇ ಆಧಾರಗಳನ್ನು ನೀಡಿಲ್ಲ" ಎಂದು ನ್ಯಾಯಾಲಯವು ಹೇಳಿತು. ಅಂತಿಮವಾಗಿ ಪನೋಲಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿತು.

ಆಪರೇಷನ್ ಸಿಂಧೂರ್ ಕುರಿತಾದ ವಿಡಿಯೋದಲ್ಲಿ ಅಲ್ಪಸಂಖ್ಯಾತ ಸಮುದಾಯದ ಬಗ್ಗೆ ಪನೋಲಿ ಅವರು ಹೇಳಿಕೆ ನೀಡಿದ್ದಕ್ಕಾಗಿ ಅವರ ಮೇಲೆ ಪ್ರಕರಣ ದಾಖಲಿಸಲಾಗಿತ್ತು. ಗುರುಗ್ರಾಮದಲ್ಲಿ 22 ವರ್ಷದ ಕಾನೂನು ವಿದ್ಯಾರ್ಥಿನಿ ಪನೋಲಿ ಅವರನ್ನು ಮೇ 30ರ ರಾತ್ರಿ ಬಂಧಿಸಲಾಗಿತ್ತು. ಆಕೆ ಕೊಲ್ಕತ್ತಾದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದರು.

ವಿಡಿಯೋ ಪ್ರಸಾರದ ಬಳಿಕ ತನನ್ನು ಕೊಲೆ ಮಾಡುವುದಾಗಿ, ಅತ್ಯಾಚಾರ ಎಸಗುವುದಾಗಿ ಬೆದರಿಕೆಗಳು ಬಂದಿವೆ ಎಂದು ಪನೋಲಿ ಹೇಳಿದ್ದರು. ಮೇ 15ರಂದು ವೀಡಿಯೊ ತೆಗೆದುಹಾಕಿದ್ದ ಆಕೆ ನಂತರ ತಮ್ಮ ಎಕ್ಸ್‌ ಖಾತೆಯಲ್ಲಿ ಕ್ಷಮೆ ಯಾಚಿಸಿದ್ದರು.

ಪನೋಲಿ ಪರವಾಗಿ ಹಾಜರಾದ ಹಿರಿಯ ವಕೀಲ ಡಿ ಪಿ ಸಿಂಗ್ ವಾದ ಮಂಡಿಸಿದರು.