ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎನ್ನುವ ಆರೋಪಗಳ ಹಿನ್ನೆಲೆಯಲ್ಲಿ 32,000 ಶಿಕ್ಷಕರ ನೇಮಕಾತಿಯನ್ನು ರದ್ದುಪಡಿಸಿ ಕಲ್ಕತ್ತಾ ಹೈಕೋರ್ಟ್‌ನ ಏಕಸದಸ್ಯ ಪೀಠ ನೀಡಿದ್ದ ತೀರ್ಪನ್ನು ಕಲ್ಕತ್ತಾ ಹೈಕೋರ್ಟ್ ವಿಭಾಗೀಯ ಪೀಠ ಇತ್ತೀಚೆಗೆ ರದ್ದುಗೊಳಿಸಿದೆ [ ಪಶ್ಚಿಮ ಬಂಗಾಳ ಪ್ರಾಥಮಿಕ ಶಿಕ್ಷಣ ಮಂಡಳಿ ಮತ್ತಿತರರು ಹಾಗೂ ಪ್ರಿಯಾಂಕಾ ನಾಸ್ಕರ್ ಇನ್ನಿತರರ ನಡುವಣ ಪ್ರಕರಣ].
ನೇಮಕಾತಿಯನ್ನು ಪ್ರಶ್ನಿಸದೆ ಕೇವಲ ತಮ್ಮನ್ನು ಖಾಲಿ ಹುದ್ದೆಗೆ ನೇಮಿಸಲು ನಿರ್ದೇಶಿಸಬೇಕೆಂದು ಅರ್ಜಿದಾರರು ಸಲ್ಲಿಸಿದ್ದ ರಿಟ್ ಅರ್ಜಿಗೆ ಸಂಬಂಧಿಸಿದಂತೆ ಏಕಸದಸ್ಯ ಪೀಠವು ಮೇಲಿನ ತೀರ್ಪು ನೀಡಿರುವುದನ್ನು ನ್ಯಾಯಮೂರ್ತಿಗಳಾದ ತಪಬ್ರತ ಚಕ್ರವರ್ತಿ ಮತ್ತು ರೀಟೊಬ್ರೊಟೊ ಕುಮಾರ್ ಮಿತ್ರ ಅವರಿದ್ದ ವಿಭಾಗೀಯ ಪೀಠ ಗಮನಿಸಿತು.
ಅರ್ಜಿದಾರರು ಟಿಇಟಿ 2014ರಲ್ಲಿ ಹಗರಣ ನಡೆದಿದೆ ಎಂದು ಆರೋಪಿಸಿದ್ದರಾದರೂ ಅದರಲ್ಲಿ ನೇಮಕಗೊಂಡ ಶಿಕ್ಷಕರ ಪಾತ್ರ ಇರುವ ಬಗ್ಗೆ ಯಾವುದೇ ಪುರಾವೆ ನೀಡಿಲ್ಲ. ಜೊತೆಗೆ ಆ ಸಾಲಿನ ಟಿಇಟಿ ನೇಮಕಾತಿ ಪರೀಕ್ಷೆಯಲ್ಲಿ ಅರ್ಜಿದಾರರೇ ಉತ್ತೀರ್ಣರಾಗಿದ್ದಾರೆ ಎಂದು ನ್ಯಾಯಾಲಯ ಹೇಳಿತು.
ಭ್ರಷ್ಟಾಚಾರ ಮತ್ತು ಹಗರಣ ಎಂಬುದು ಗಂಭೀರ ಆರೋಪಗಳಾಗಿದ್ದು ಆರೋಪ ಮಾಡುವವರು ಅದನ್ನು ಸೂಕ್ತ ದಾಖಲೆ ಮತ್ತು ಸಾಕ್ಷ್ಯಗಳ ಮೂಲಕ ಸಾಬೀತುಪಡಿಸಬೇಕು. ಊಹೆ ಆದಾರದಲ್ಲಿ ಸಾಮೂಹಿಕವಾಗಿ 32,000 ನೇಮಕಾತಿಗಳನ್ನು ರದ್ದು ಮಾಡಲಾಗದು ಎಂದು ನ್ಯಾಯಪೀಠ ನುಡಿಯಿತು.
ನೇಮಕಾತಿ ರದ್ದುಗೊಳಿಸಿದ್ದ ಏಕಸದಸ್ಯ ಪೀಠದ ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ಬಳಿಕ ಬಿಜೆಪಿ ಸೇರ್ಪಡೆಗೊಂಡು ಇದೀಗ ಸಂಸತ್ ಸದಸ್ಯರಾಗಿದ್ದಾರೆ. ಅವರ ತೀರ್ಪಿಗೆ ಮೇಲ್ಮನವಿ ಹಂತದಲ್ಲಿ ಈಗಾಗಲೇ ತಡೆ ನೀಡಲಾಗಿತ್ತು. ಅಂತಿಮವಾಗಿ ವಿಭಾಗೀಯ ಪೀಠ ಇದೀಗ ಆ ತೀರ್ಪನ್ನು ರದ್ದುಗೊಳಿಸಿದೆ.
ನವೆಂಬರ್ 3 ರಂದು ನೀಡಿದ ತೀರ್ಪಿನಲ್ಲಿ, ನೇಮಕಗೊಂಡವರು ಈಗಾಗಲೇ ಸುಮಾರು ಒಂಬತ್ತು ವರ್ಷಗಳ ಸೇವೆ ಸಲ್ಲಿಸಿದ್ದಾರೆ ಎಂಬ ಅಂಶವನ್ನು ಏಕ ಸದಸ್ಯ ಪೀಠ ಗಣನೆಗೆ ತೆಗೆದುಕೊಳ್ಳಬೇಕಾಗಿತ್ತು ಈಗಾಗಲೇ ಇತ್ಯರ್ಥಗೊಂಡಿರುವ ತೀರ್ಪುಗಳನ್ನು ಅಸ್ಥಿರಗೊಳಿಸುವಂತಹ ತೀರ್ಪನ್ನು ಏಕಸದಸ್ಯ ಪೀಠ ನೀಡಿದೆ. ವ್ಯವಸ್ಥಿತವಾಗಿ ಅಕ್ರಮ ನಡೆದಿದ್ದರೆ ಮಾತ್ರ ಸಾಮೂಹಿಕವಾಗಿ ನೇಮಕಾತಿ ರದ್ದುಪಡಿಸಿದ್ದು ಅರ್ಥಪೂರ್ಣವಾಗಿರುತ್ತಿತ್ತು ಎಂದು ವಿಭಾಗೀಯ ಪೀಠ ಹೇಳಿದೆ.
ನ್ಯಾಯಾಯಾಲಯಗಳು ತಮ್ಮ ಇಚ್ಛೆಯಂತೆ ಹೊಸ ವಿಧಾನಗಳನ್ನು ಶೋಧಿಸುವಂತಿಲ್ಲ. ಅವು ತನ್ನದೇ ಆದ ಆದರ್ಶ ಮತ್ತು ಒಳ್ಳೆಯತನದ ಹಿಂದೆ ಬೆನ್ನತ್ತಿ ಹೋಗುವ ವೀರಕಲಿಯಂತೆ ವರ್ತಿಸಬಾರದು. ಅನೂಚಾನವಾಗಿ ನಡೆದುಕೊಂಡುಬಂದಿರುವ ತತ್ವಗಳ ಪ್ರಕಾರ ಅವುಗಳು ಕೆಲಸ ಮಾಡಬೇಕು ಎಂದು ಪೀಠ ಇದೇ ವೇಳೆ ಕಿವಿ ಹಿಂಡಿತು.
ನ್ಯಾಯಾಯಾಲಯಗಳು ತಮ್ಮ ಇಚ್ಛೆಯಂತೆ ಹೊಸ ವಿಧಾನಗಳನ್ನು ಶೋಧಿಸುವಂತಿಲ್ಲ. ಅವು ತನ್ನದೇ ಆದ ಆದರ್ಶ ಮತ್ತು ಒಳ್ಳೆಯತನದ ಹಿಂದೆ ಬೆನ್ನತ್ತಿ ಹೋಗುವ ವೀರಕಲಿಯಂತೆ ವರ್ತಿಸಬಾರದು.ಕಲ್ಕತ್ತಾ ಹೈಕೋರ್ಟ್
ಪ್ರಕರಣದಲ್ಲಿ ವ್ಯವಸ್ಥಿತ ವಂಚನೆ ಅಥವಾ ಸಮಗ್ರ ಅಕ್ರಮ ಕಂಡುಬಂದಿಲ್ಲ. ಅಲ್ಲದೆ ನೇಮಕಗೊಂಡ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದ ವೇಳೆ ಅವರ ವಿರುದ್ಧ ಯಾವುದೇ ಆರೋಪ ಕೇಳಿ ಬಂದಿಲ್ಲ. ಹಣ ಕೊಟ್ಟ ಅಭ್ಯರ್ಥಿಗಳಿಗೆ ಹೆಚ್ಚಿನ ಅಂಕ ನೀಡಲಾಗಿದೆ ಎಂಬುದಕ್ಕೂ ಸಾಕ್ಷ್ಯಗಳಿಲ್ಲ. ವಿಫಲ ಅಭ್ಯರ್ಥಿಗಳ ಗುಂಪೊಂದು ಇಡೀ ವ್ಯವಸ್ಥೆಯನ್ನು ಹಾನಿಗೊಳಿಸಲು ಅವಕಾಶ ನೀಡಬಾರದು ಮತ್ತು ಅದಕ್ಕಿಂತ ಹೆಚ್ಚಾಗಿ ಮುಗ್ಧ ಶಿಕ್ಷಕರು ಸಹ ದೊಡ್ಡ ಕಳಂಕ ಎದುರಿಸುತ್ತಿದ್ದಾರೆ ಎಂಬುದು ತಳ್ಳಿಹಾಕುವಂತಹ ವಿಚಾರವಲ್ಲ. ನಡೆಯುತ್ತಿರುವ ಕ್ರಿಮಿನಲ್ ಪ್ರಕರಣವನ್ನು ಆಧಾರವಾಗಿ ತೆಗೆದುಕೊಂಡು ಅವರ ಸೇವೆಯನ್ನು ರದ್ದು ಮಾಡುವುದೂ ಕೂಡ ಸರಿಯಲ್ಲ ಎಂದು ನ್ಯಾಯಾಲಯ ನುಡಿಯಿತು.