ಪಶ್ಚಿಮ ಬಂಗಾಳದಲ್ಲಿ ಸೂಕ್ತ ನಿಯಮ ಪಾಲಿಸದೆ 2016ರಲ್ಲಿ ನೇಮಕ ಮಾಡಲಾಗಿದ್ದ 36,000ಕ್ಕೂ ಅಧಿಕ ಶಿಕ್ಷಕರ ಹುದ್ದೆಗಳನ್ನು ಕಲ್ಕತ್ತಾ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ [ಪ್ರಿಯಾಂಕಾ ನಾಸ್ಕರ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].
ಲಂಚ ಪಡೆದು ಶಾಲಾ ಶಿಕ್ಷಕರ ನೇಮಕಾತಿ ಮಾಡಿದ್ದ ಹಗರಣದಲ್ಲಿ ʼಅಕ್ರಮದ ವಾಸನೆ ಬರುತ್ತಿದೆʼ ಎಂದು ವಿಚಾರಣೆ ನಡೆಸಿದ ನ್ಯಾ. ಅಭಿಜಿತ್ ಗಂಗೋಪಾಧ್ಯಾಯ ಅವರಿದ್ದ ಏಕಸದಸ್ಯ ಪೀಠ ಹೇಳಿದೆ.
"ಮಂಡಳಿಯು 2016ರಲ್ಲಿ ನಡೆಸಿದ ನೇಮಕಾತಿ ಪ್ರಕ್ರಿಯೆಯಲ್ಲಿ ಆಯ್ಕೆಯಾಗಿದ್ದ ತರಬೇತಿ ಪಡೆಯದ ಎಲ್ಲಾ 36,000 (ಮೂವತ್ತಾರು ಸಾವಿರ) (ಹೆಚ್ಚು ಅಥವಾ ಕಡಿಮೆ) ಅಭ್ಯರ್ಥಿಗಳ ನೇಮಕಾತಿಯನ್ನು ರದ್ದುಗೊಳಿಸಲಾಗಿದೆ” ಎಂದು ತೀರ್ಪು ಹೇಳಿದೆ.
ಭ್ರಷ್ಟಾಚಾರದ ಆರೋಪ ಎದುರಿಸುವ ಬದಲು ಕಾನೂನು ಅಂಶಗಳ ಮೇಲೆ ವ್ಯಾಜ್ಯ ನಿರ್ವಹಿಸಬೇಕು ಎಂಬ ರಾಜ್ಯ ಸರ್ಕಾರದ ವಾದವನ್ನು ನ್ಯಾಯಮೂರ್ತಿಗಳು ಒಪ್ಪಲಿಲ್ಲ.
“ರಿಟ್ ಅರ್ಜಿಯನ್ನು ಒಂದು ವೇಳೆ ಕಾನೂನಿನ ಕೆಲವು ಸೂಕ್ಷ್ಮಗಳ ಅಧಾರದಲ್ಲಿಯೇ ತಿರಸ್ಕರಿಸಿದರೆ ಆಗ ಕಾನೂನಿನ ಸಂರಕ್ಷಣೆಯ ಹೆಸರಿನಲ್ಲಿ ಭ್ರಷ್ಟಾಚಾರವನ್ನು ರಕ್ಷಿಸಿದಂತಾಗುತ್ತದೆ. ಅಂತಹ ಕಾನೂನನ್ನು ಆಧರಿಸಿ ರಿಟ್ ಅರ್ಜಿಯನ್ನು ತಿರಸ್ಕರಿಸಿದರೆ ಕಾನೂನು ರಕ್ಷಣೆಯ ಹೆಸರಿನಲ್ಲಿ ಭ್ರಷ್ಟಾಚಾರವನ್ನು ರಕ್ಷಿಸಿದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ನೀತಿ ಎಷ್ಟೇ ಒಳ್ಳೆಯದಿರಲಿ ಅಥವಾ ಶ್ಲಾಘನೀಯ ಎನಿಸಿದರೂ ನ್ಯಾಯದಾನ ಮಾಡುವ ಆಲಯವಾಗಿ ನ್ಯಾಯ ಪ್ರಜ್ಞೆ ಎಂಬುದು ಕಾನೂನಿನ ಪ್ರಜ್ಞೆಗಿಂತ ಮಿಗಿಲಾದುದು ಎಂಬುದನ್ನು ಚೆನ್ನಾಗಿ ಅರಿತು ನ್ಯಾಯ ನೀಡಲು ವಿಫಲವಾಗಿಬಿಡುತ್ತದೆ. ಸಂವಿಧಾನದ ಆತ್ಮ ಮತ್ತು ಸಾಂವಿಧಾನಿಕ ಆತ್ಮಸಾಕ್ಷಿಯನ್ನು ಗಮನದಲ್ಲಿಟ್ಟುಕೊಂಡು ಸಾಂವಿಧಾನಿಕ ನ್ಯಾಯಾಲಯವು ಎಂದಿಗೂ ಹಾಗೆ ಮಾಡಲು ಸಾಧ್ಯವಿಲ್ಲ. ಹಾಗಾಗಿ, ಈ ನೇಮಕಾತಿ ಹಗರಣದಲ್ಲಿ ಅಕ್ರಮದ ವಾಸನೆ ಹೊಡೆಯುತ್ತಿದೆ ಎಂದು ಹೇಳಬೇಕಿದೆ” ಎಂಬುದಾಗಿ ನ್ಯಾಯಾಲಯ ತಿಳಿಸಿದೆ.
ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಮತ್ತಿತರ ಪರೀಕ್ಷೆಗಳಲ್ಲಿ ಕಡಿಮೆ ಅಂಕ ಗಳಿಸಿದ್ದರೂ ಸಾವಿರಾರು ʼತರಬೇತಿ ಪಡೆಯದʼ ಅಭ್ಯರ್ಥಿಗಳನ್ನು ನೇಮಿಸಲಾಗಿದೆ ಎಂದು ಅದು ಅಸಮಾಧಾನ ವ್ಯಕ್ತಪಡಿಸಿದೆ.
"ಪಶ್ಚಿಮ ಬಂಗಾಳದಲ್ಲಿ ಈ ಪ್ರಮಾಣದ ಭ್ರಷ್ಟಾಚಾರ ಎಂದಿಗೂ ನಡೆದಿರಲಿಲ್ಲ. ಮಾಜಿ ಶಿಕ್ಷಣ ಸಚಿವರು, ಮಂಡಳಿಯ ಮಾಜಿ ಅಧ್ಯಕ್ಷರು ಹಾಗೂ ಹಲವು ಮಧ್ಯವರ್ತಿಗಳ ಮೂಲಕ ಉದ್ಯೋಗಗಳನ್ನುಸರಕಿನಂತೆ ಮಾರಾಟ ಮಾಡಲಾಯಿತು, ಅವರೀಗ ಕಂಬಿ ಎಣಿಸುತ್ತಿದ್ದಾರೆ. ಸಿಬಿಐ ಮತ್ತು ಇ ಡಿ ತನಿಖೆಯನ್ನು ಈಗ ಪೂರ್ಣ ಪ್ರಮಾಣದಲ್ಲಿ ಮುಂದುವರೆಸಬಹುದು”ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.
"ಈ ನೇಮಕಾತಿ ಹಗರಣ ಸಮಾಜದ ವಿರುದ್ಧದ ಅಪರಾಧವಾಗಿದೆ ಮತ್ತು ಮಂಡಳಿ ಮತ್ತು ಅದರ ಮಾಜಿ ಅಧ್ಯಕ್ಷರು ನೇಮಕಾತಿ ನಿಯಮಗಳ ಬಗ್ಗೆ ಚೆನ್ನಾಗಿ ತಿಳಿದಿದ್ದರೂ ಎಳ್ಳಷ್ಟೂ ಕಾಳಜಿ ವಹಿಸದೆ ಮಾಡಿದ ತಂತ್ರ ಮತ್ತು ವಂಚನೆಯಿಂದಾಗಿ ನಿರುದ್ಯೋಗಿ ಯುವಜನ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ವಂಚನೆ ಎಲ್ಲವನ್ನೂ ಬಿಚ್ಚಿಡುತ್ತದೆ ಎಂದಷ್ಟೇ ನಾನು ಹೇಳುತ್ತೇನೆ ಎಂದು ನ್ಯಾಯಮೂರ್ತಿಗಳು ಆದೇಶಿಸಿದ್ದಾರೆ.
ಆದೇಶ ನೀಡಿದ ದಿನದಿಂದ 3 ತಿಂಗಳ ಅವಧಿಯಲ್ಲಿ 2016ರ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಆದರೆ ನೇಮಕಾತಿ ವೇಳೆ ತರಬೇತಿ ಪಡೆಯದ (ಈ ಮಧ್ಯೆ ತರಬೇತಿ ಅರ್ಹತೆ ಪಡೆದ ಅಭ್ಯರ್ಥಿಗಳೂ ಸೇರಿದಂತೆ) ಅಭ್ಯರ್ಥಿಗಳಿಗೆ ಮಾತ್ರ ನೇಮಕಾತಿ ಪ್ರಕ್ರಿಯೆ ನಡೆಸುವಂತೆ ಮಂಡಳಿಗೆ ನ್ಯಾಯಾಲಯ ಆದೇಶಿಸಿತು. ಎಲ್ಲಾ ಅಭ್ಯರ್ಥಿಗಳಿಗೆ ಪರೀಕ್ಷೆ ಮತ್ತು ಸಂದರ್ಶನ ನಡೆಸಬೇಕು ಮತ್ತು ಇಡಿಯಾಗಿ ಸಂದರ್ಶನ ಪ್ರಕ್ರಿಯೆಯನ್ನು ವೀಡಿಯೊ ಮಾಡಿ ಅದನ್ನು ರಕ್ಷಿಸಿಡಬೇಕು ಎಂದು ನ್ಯಾಯಾಲಯ ಸೂಚಿಸಿದೆ.