Calcutta High Court 
ಸುದ್ದಿಗಳು

ಪಶ್ಚಿಮ ಬಂಗಾಳದ 29 ಉಪಕುಲಪತಿಗಳ ನೇಮಕಾತಿ ರದ್ದುಗೊಳಿಸಿದ ಕಲ್ಕತ್ತಾ ಹೈಕೋರ್ಟ್; ಸರ್ಕಾರಕ್ಕೆ ಅಧಿಕಾರವಿಲ್ಲ ಎಂದ ಪೀಠ

Bar & Bench

ಪಶ್ಚಿಮ ಬಂಗಾಳದ ವಿವಿಧ ವಿಶ್ವವಿದ್ಯಾಲಯಗಳ ಉಪಕುಲಪತಿಗಳ (ವಿಸಿ) ನೇಮಕ, ಮರುನೇಮಕ ಅಥವಾ ಅಧಿಕಾರಾವಧಿಯನ್ನು ವಿಸ್ತರಿಸಲು ರಾಜ್ಯಕ್ಕೆ ಯಾವುದೇ ಅಧಿಕಾರವಿಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಮಂಗಳವಾರ ಹೇಳಿದೆ [ಅನುಪಮ್ ಬೇರಾ ಮತ್ತು ಪಶ್ಚಿಮ ಬಂಗಾಳ ಸರ್ಕಾರ ನಡುವಣ ಪ್ರಕರಣ].

ಆ ಮೂಲಕ 2012 ಮತ್ತು 2014ರಲ್ಲಿ ಪಶ್ಚಿಮ ಬಂಗಾಳ ವಿಶ್ವವಿದ್ಯಾಲಯಗಳ ಕಾಯಿದೆಗೆ ಮಾಡಿದ ತಿದ್ದುಪಡಿಗಳ ಆಧಾರದ ಮೇಲೆ ರಾಜ್ಯ ಸರ್ಕಾರ ನೇಮಿಸಿದ ಅಥವಾ ಮರುನೇಮಕಗೊಂಡ ರಾಜ್ಯದ 29 ವಿಶ್ವವಿದ್ಯಾಲಯಗಳ  ಉಪಕುಲಪತಿಗಳನ್ನು ತೆಗೆದುಹಾಕುವಂತೆ ಮುಖ್ಯ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ ಮತ್ತು ರಾಜರ್ಷಿ ಭಾರದ್ವಾಜ್ ಅವರಿದ್ದ ವಿಭಾಗೀಯ ಪೀಠ ಸೂಚಿಸಿದೆ.

ಕಾಯಿದೆಗೆ 2012 ಮತ್ತು 2014ರಲ್ಲಿ ಮಾಡಲಾದ ತಿದ್ದುಪಡಿಗಳ ಸಿಂಧುತ್ವ  ಪ್ರಶ್ನಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಹಿನ್ನೆಲೆಯಲ್ಲಿ ಈ ಆದೇಶ ನೀಡಲಾಗಿದೆ.

ಗಮನಾರ್ಹವಾಗಿ ಯುಜಿಸಿ, ರಾಜ್ಯ ವಿಶ್ವವಿದ್ಯಾಲಯ ಹಾಗೂ ರಾಜ್ಯಪಾಲರನ್ನು ಒಳಗೊಂಡ 'ಶೋಧನಾ ಸಮಿತಿ' ಉಪಕುಲಪತಿಗಳನ್ನು ನೇಮಿಸಬೇಕು ಎಂದು ಯುಜಿಸಿ ನಿಯಮಾವಳಿಗಳಲ್ಲಿ ಹೇಳಲಾಗಿದೆ. ಕಾಯಿದೆಗೆ ತಿದ್ದುಪಡಿ ಮಾಡುವ ಮೂಲಕ ಯುಜಿಸಿಯ ಕಡ್ಡಾಯ ಪ್ರತಿನಿಧಿ ಬದಲು ಆ ಸ್ಥಾನಕ್ಕೆ ರಾಜ್ಯ ಸರ್ಕಾರದ ಪ್ರತಿನಿಧಿಯೇ ಇರುವಂತಹ ವ್ಯವಸ್ಥೆ ಜಾರಿಗೆ ತಂದಿತ್ತು. ಅದರಂತೆಯೇ ಉಪಕುಲಪತಿಗಳ ನೇಮಕ, ಮರುನೇಮಕ ಮತ್ತು ಅಧಿಕಾರಾವಧಿ ವಿಸ್ತರಣೆ ಕಾರ್ಯ ನಡೆಯುತ್ತಿತ್ತು.

ರಾಜ್ಯದ ಮಾಜಿ ರಾಜ್ಯಪಾಲ ಜಗದೀಪ್ ಧನ್‌ಕರ್ (ಈಗಿನ ಉಪರಾಷ್ಟ್ರಪತಿ) ಕೂಡ ರಾಜ್ಯದಲ್ಲಿ ವಿಸಿಗಳ ನೇಮಕದ ವಿಧಾನದ ಬಗ್ಗೆ ಈ ಹಿಂದೆ ಕಳವಳ ವ್ಯಕ್ತಪಡಿಸಿದ್ದರು.

ವಿಚಾರಣೆ ವೇಳೆ ನ್ಯಾಯಾಲಯ, ಸರ್ಕಾರದ ನಡೆ ಪಶ್ಚಿಮ ಬಂಗಾಳ ರಾಜ್ಯ ಮತ್ತು ಅನಿಂಧ್ಯಾ ಸುಂದರ್ ದಾಸ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ತೀರ್ಪಿಗೆ ವಿರುದ್ಧವಾಗಿದೆ ಎಂದಿತು. ಈ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌ ಉಪಕುಲಪತಿಗಳನ್ನು ನೇಮಕ ಮಾಡುವ ಅಧಿಕಾರವು ಕುಲಪತಿಗಳಿಗಿದ್ದು (ರಾಜ್ಯಪಾಲರು) ಇದನ್ನು ರಾಜ್ಯ ಸರ್ಕಾರವು ಕಿತ್ತುಕೊಳ್ಳಲಾಗದು ಎಂದಿತ್ತು.

ಕೆಲವು ವಿಸಿಗಳ ಅಧಿಕಾರಾವಧಿಯನ್ನು ಯಾವುದೇ ಅಧಿಕಾರ ಇಲ್ಲದೆ ರಾಜ್ಯ ಸರ್ಕಾರ ವಿಸ್ತರಿಸಿದೆ. ಕೆಲವು ವಿಸಿಗಳು ಕನಿಷ್ಠ ಸೇವಾನುಭವವನ್ನು ಪೂರೈಸಿಲ್ಲ ಎಂಬ ಕಾರಣಕ್ಕೆ ನ್ಯಾಯಾಲಯ ನೇಮಕಾತಿಗಳನ್ನು ರದ್ದುಪಡಿಸಿತು.