ವಕೀಲರಾಗಿದ್ದ ವೇಳೆ ಒಳ ಉಡುಪು ಸಾಕ್ಷ್ಯ ತಿರುಚಿದ ಆರೋಪ ಎದುರಿಸುತ್ತಿದ್ದ ಆಡಳಿತಾರೂಢ ಎಡ ಪ್ರಜಾಸತ್ತಾತ್ಮಕ ರಂಗದ ಭಾಗವಾಗಿರುವ ಜನಾಧಿಪತ್ಯ ಕೇರಳ ಕಾಂಗ್ರೆಸ್ ಪಕ್ಷದ ನಾಯಕ ಹಾಗೂ ರಾಜ್ಯ ಸಾರಿಗೆ ಸಚಿವ ಆಂಟನಿ ರಾಜು ವಿರುದ್ಧದ ಪ್ರಕರಣವನ್ನು ಕೇರಳ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ [ಅಡ್ವೊಕೇಟ್ ಆಂಟೋನಿ ರಾಜು ಮತ್ತು ಕೇರಳ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ರಾಜು ಅವರು ಸಲ್ಲಿಸಿದ ಮನವಿಯನ್ನು ನ್ಯಾಯಮೂರ್ತಿ ಜಿಯಾದ್ ರಹಮಾನ್ ಎ ಎ ಅವರು ಪುರಸ್ಕರಿಸಿದರಾದರೂ ಸಿಆರ್‌ಪಿಸಿ ಸೆಕ್ಷನ್ 195 (1) ಬಿ) ನಿಯಮಾವಳಿ ಪ್ರಕಾರ ಕಾನೂನು ಪ್ರಕ್ರಿಯೆ ಮುಂದುವರಿಸಲು ಅಡ್ಡಿ ಇಲ್ಲ ಎಂದು ಸ್ಪಷ್ಟಪಡಿಸಿದರು.
ಈ ಕ್ರಿಮಿನಲ್ ಅರ್ಜಿಗಳನ್ನು ಅನುಮತಿಸಲಾಗಿದೆ. ಜೆಎಫ್‌ಸಿಎಂ ನ್ಯಾಯಾಲಯದ ವಿಚಾರಣೆಯನ್ನು ರದ್ದುಗೊಳಿಸಲಾಗಿದೆ. ಆದರೆ, ಸಿಆರ್‌ಪಿಸಿಯ ಸೆಕ್ಷನ್ 195 (1) (ಬಿ) ಅಡಿಯಲ್ಲಿ ಪರಿಗಣಿಸಲಾದ ಕಾರ್ಯವಿಧಾನದ ಪ್ರಕಾರ ಸಕ್ಷಮ ಪ್ರಾಧಿಕಾರ ಅಥವಾ ನ್ಯಾಯಾಲಯ ಪ್ರಕರಣ ಕೈಗೆತ್ತಿಕೊಳ್ಳುವುದನ್ನು ಮತ್ತು ವಿಚಾರಣೆ ಮುಂದುವರಿಸುವುದನ್ನು ಇದು ತಡೆಯುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ ಎಂಬುದಾಗಿ ಆದೇಶದಲ್ಲಿ ತಿಳಿಸಲಾಗಿದೆ.
ಎತ್ತಿರುವ ಆರೋಪವು ನ್ಯಾಯಾಂಗ ಕಾರ್ಯಗಳಲ್ಲಿ ಹಸ್ತಕ್ಷೇಪ ಮಾಡುವ ಗಂಭೀರ ಸ್ವರೂಪದ್ದಾಗಿರುವುದರಿಂದ ಪ್ರಕರಣವನ್ನು ಕಟ್ಟುನಿಟ್ಟಾಗಿ ವಿಚಾರಣೆ ನಡೆಸಬೇಕು ಎಂದು ನ್ಯಾಯಾಲಯ ಒತ್ತಿಹೇಳಿತು.
"ತಾಂತ್ರಿಕ ಕಾರಣಗಳಿಗಾಗಿ ನ್ಯಾಯಾಲಯ ವಿಚಾರಣೆಯಲ್ಲಿ ಮಧ್ಯಪ್ರವೇಶಿಸಿದ್ದರೂ, ಎತ್ತಿರುವ ಆರೋಪಗಳು ಗಂಭೀರ ಸ್ವರೂಪದ್ದಾಗಿವೆ ಎಂಬುದನ್ನು ನಿರ್ಲಕ್ಷಿಸಲಾಗುವುದಿಲ್ಲ. ನ್ಯಾಯಾಂಗ ಕಾರ್ಯಗಳಿಗೆ ಅಡ್ಡಿಪಡಿಸುವ ಮತ್ತು ಆ ಮೂಲಕ ನ್ಯಾಯದಾನಕ್ಕೆ ಕಾರಣವಾಗುವ ಕಾರ್ಯವಿಧಾನದ ಮೇಲೆ ಹಿಡಿತ ಸಾಧಿಸುವ ಇಂತಹ ಆರೋಪಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾದ ಸಾಕ್ಷ್ಯಗಳು ಬಹಿರಂಗಪಡಿಸಿವೆ. ಅಂತಹ ಕೃತ್ಯಗಳಲ್ಲಿ ಕಟ್ಟುನಿಟ್ಟಾಗಿ ವ್ಯವಹರಿಸಿ ನ್ಯಾಯಯುತ ವಿಚಾರಣೆ ನಡೆದು ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆಯಾಗುವಂತೆ ಅಧಿಕಾರಿಗಳು ಸಕಾರಾತ್ಮಕ ಮತ್ತು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುತ್ತಾರೆ ಎಂದು ನಿರೀಕ್ಷಿಸಲಾಗಿದೆ” ಎಂಬುದಾಗಿ ನ್ಯಾಯಾಲಯ ವಿವರಿಸಿತು. ಆದ್ದರಿಂದ ಯಾವುದೇ ವಿಳಂಬ ಮಾಡದೆ ಅಗತ್ಯ ಕ್ರಮ ಕೈಗೊಳ್ಳುವಂತೆ ರಿಜಿಸ್ಟ್ರಿಗೆ ಅದು ಸೂಚಿಸಿದೆ.
ವಿದೇಶದ ಆರೋಪಿಯೊಬ್ಬ ಕಾನೂನಿನ ಕಣ್ಣಿಗೆ ಮಣ್ಣೆರಚಿ ಮತ್ತೆ ಅದೇ ಕಾನೂನಿನ ಕುಣಿಕೆಗೆ ಸಿಲುಕಿಕೊಂಡ, ಆ ಮೂಲಕ ಸಚಿವ ರಾಜು ಅವರಿಗೆ ಮುಜುಗರ ಉಂಟು ಮಾಡಿದ ಈ ಸ್ವಾರಸ್ಯಕರ, ರೋಚಕ ಪ್ರಕರಣದ ವಿವರಗಳಿಗಾಗಿ ಕೆಳಗಿನ ಲಿಂಕ್‌ಗಳನ್ನು ಕ್ಲಿಕ್ಕಿಸಿ.