Justice DY Chandrachud
Justice DY Chandrachud 
ಸುದ್ದಿಗಳು

ನ್ಯಾ. ಕರಿಯೆಲ್ ವರ್ಗಾವಣೆ: ಸಿಜೆಐ ಭೇಟಿಗೆ ಮುಂದಾದ ಗುಜರಾತ್ ಹೈಕೋರ್ಟ್ ವಕೀಲರ ಸಂಘದ ನಿಯೋಗ

Bar & Bench

ನ್ಯಾಯಮೂರ್ತಿ ನಿಖಿಲ್ ಕರಿಯೆಲ್ ಅವರನ್ನು ಗುಜರಾತ್ ಹೈಕೋರ್ಟ್‌ನಿಂದ ಪಾಟ್ನಾ ಹೈಕೋರ್ಟ್‌ಗೆ ವರ್ಗಾಯಿಸುವ ಪ್ರಸ್ತಾವವನ್ನು ಮರುಪರಿಶೀಲಿಸುವಂತೆ ಒತ್ತಾಯಿಸುವ ಸಲುವಾಗಿ ಗುಜರಾತ್ ಹೈಕೋರ್ಟ್ ವಕೀಲರ ಸಂಘದ (ಜಿಎಚ್‌ಸಿಎಎ) ಏಳು ಮಂದಿ ಸದಸ್ಯರ ನಿಯೋಗವು ನವೆಂಬರ್ 21, ಸೋಮವಾರದಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಅವರನ್ನು ಭೇಟಿಯಾಗಲಿದೆ.

ನಿಯೋಗವು ನಾಲ್ವರು ಹಿರಿಯ ನ್ಯಾಯವಾದಿಗಳು, ಸಂಘದ ಪ್ರಭಾರ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಹಾಗೂ ಮಹಿಳಾ ವಕೀಲರನ್ನು ಒಳಗೊಂಡಿರುತ್ತದೆ ಎಂದು ಜಿಎಚ್‌ಸಿಎಎ ಅಧ್ಯಕ್ಷ ಪೃಥ್ವಿರಾಜ್ ಜಡೇಜಾ ಅವರು ತಿಳಿಸಿದ್ದಾರೆ.

ಸೋಮವಾರ ಮಧ್ಯಾಹ್ನ 1.30ಕ್ಕೆ ಸಿಜೆಐ ಅವರೊಂದಿಗೆ ಸಭೆ ನಡೆಯಲಿದೆ. ಈ ವೇಳೆ ಸಿಜೆಐ ಅವರಿಗೆ ಮನವಿ ಸಲ್ಲಿಸಲಿರುವ ನಿಯೋಗ ನ್ಯಾಯಮೂರ್ತಿ ಕೆರಿಯಲ್ ಅವರ ವರ್ಗಾವಣೆಯ ಪ್ರಸ್ತಾಪವನ್ನು ಮರುಪರಿಶೀಲಿಸುವಂತೆ ಒತ್ತಾಯಿಸಲಿದೆ. ಅಲ್ಲದೆ ಕೊಲಿಜಿಯಂನ ಇತರ ನ್ಯಾಯಮೂರ್ತಿಗಳನ್ನೂ ಅದು ಭೇಟಿಯಾಗುವ ನಿರೀಕ್ಷೆ ಇದೆ.  

ನ್ಯಾ. ಕರಿಯೆಲ್‌ ಅವರನ್ನು ಪಾಟ್ನಾ ಹೈಕೋರ್ಟ್‌ಗೆ ವರ್ಗಾಯಿಸುವ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ಜಿಎಚ್‌ಸಿಎಎ ಗುರವಾರದಿಂದ ಪ್ರತಿಭಟನೆಯಲ್ಲಿ ತೊಡಗಿದೆ. ಅಂದು ಬೆಳಿಗ್ಗೆ ನ್ಯಾಯಾಲಯ ಕಲಾಪದ ವೇಳೆ ಮುಖ್ಯ ನ್ಯಾಯಮೂರ್ತಿ ಅರವಿಂದ್‌ ಕುಮಾರ್ ಅವರ ಕೋರ್ಟ್‌ ಹಾಲ್‌ನಲ್ಲಿ 300ಕ್ಕೂ ಹೆಚ್ಚು ವಕೀಲರು ಜಮಾಯಿಸಿ ಇಂದು ನ್ಯಾಯಾಂಗ ಸ್ವಾತಂತ್ರ್ಯದ ಮರಣದ ದಿನವಾಗಿದೆ ಎಂದು ಮೌನಾಚರಣೆ ಮೂಲಕ ಪ್ರತಿಭಟಿಸಿದ್ದರು. ಬಳಿಕ ಸಂಘ ಕೆಲಸದಿಂದ ದೂರ ಉಳಿಯಲು ನಿರ್ಧರಿಸಿತ್ತು. ಶುಕ್ರವಾರವೂ ವಕೀಲರು ಕರ್ತವ್ಯದಲ್ಲಿ ತೊಡಗಿಕೊಳ್ಳಲಿಲ್ಲ. ದಾವೆದಾರರು, ಖುದ್ದು ಹಾಜರಿದ್ದವರು ವಿರಳ ಸಂಖ್ಯೆಯಲ್ಲಿ ಕಂಡುಬಂದರು. ನ್ಯಾಯಮೂರ್ತಿಗಳು ಖಾಲಿ ಕೋರ್ಟ್‌ ಹಾಲ್‌ಗಳಿಗೆ ಎದುರಾದರು.