Calcutta High Court  
ಸುದ್ದಿಗಳು

ಅಸ್ತಿತ್ವದಲ್ಲಿಲ್ಲದ ಸಂಸ್ಥೆಗೆ 2 ಬಾರಿ ನೋಟಿಸ್: ಐಟಿ ಅಧಿಕಾರಿಗೆ ಕಲ್ಕತ್ತಾ ಹೈಕೋರ್ಟ್ ₹20,000 ದಂಡ

ಮೌಲ್ಯಮಾಪನ ಅಧಿಕಾರಿ ಬಿತನ್ ರಾಯ್ ಅವರು ನ್ಯಾಯಾಲಯದ ಆಕ್ರೋಶಕ್ಕೆ ಗುರಿಯಾಗುತ್ತಿರುವುದು ಇದೇ ಮೊದಲಲ್ಲ.

Bar & Bench

ಸಂಸ್ಥೆಯೊಂದು ಮತ್ತೊಂದು ಸಂಸ್ಥೆಯೊಂದಿಗೆ 2019ರಲ್ಲಿ ವಿಲೀನಗೊಂಡ ನಂತರವೂ ಆ ವಿಲೀನಗೊಂಡಿರುವ ಅಸ್ತಿತ್ವದಲ್ಲಿಲ್ಲದ ಕಂಪೆನಿಗೆ ತೆರಿಗೆ ನಿರ್ಧರಣಾ ನೋಟಿಸ್‌ ನೀಡಿದ್ದ ಆದಾಯ ತೆರಿಗೆ ನಿರ್ಧರಣಾ ಅಧಿಕಾರಿ ಬಿತನ್‌ ರಾಯ್‌ ಎಂಬುವವರಿಗೆ ಕಲ್ಕತ್ತಾ ಹೈಕೋರ್ಟ್‌ ಇತ್ತೀಚೆಗೆ ₹ 20,000 ದಂಡ ವಿಧಿಸಿದೆ [ಆರ್ಬಿಟ್‌ ಪ್ರಾಜೆಕ್ಟ್ಸ್‌ ಪ್ರೈ. ಲಿಮಿಟೆಡ್‌ ಮತ್ತು ಆದಾಯ ತೆರಿಗೆ ಅಧಿಕಾರಿ ವಾರ್ಡ್ 5(1), ಕೋಲ್ಕತ್ತಾ ಇನ್ನಿತರರ ನಡುವಣ ಪ್ರಕರಣ].

ತೆರಿಗೆ ನಿರ್ಧರಣಾಧಿಕಾರಿ ಬಿತನ್‌ ರಾಯ್ ಅವರು ನ್ಯಾಯಾಲಯದ ಆಕ್ರೋಶಕ್ಕೆ ಗುರಿಯಾಗುತ್ತಿರುವುದು ಇದೇ ಮೊದಲಲ್ಲ ಎಂದು ಕೂಡ ನ್ಯಾ. ಎಂ ಡಿ ನಿಜಾಮುದ್ದೀನ್ ಈ ಸಂದರ್ಭದಲ್ಲಿ ತಿಳಿಸಿದರು.

ಆದಾಯ ತೆರಿಗೆ ಕಾಯಿದೆ  1961ರ ಸೆಕ್ಷನ್‌ 148ರ ಅಡಿ ಇದೇ ಅಧಿಕಾರಿ ಇದೇ ಅಸ್ತಿತ್ವದಲ್ಲಿಲ್ಲದ ಕಂಪೆನಿಗೆ ಹೊರಡಿಸಿದ್ದ ಮತ್ತೊಂದು ನೋಟಿಸನ್ನು ಕಳೆದ ವರ್ಷ ಅಂದರೆ ಮಾರ್ಚ್ 2022ರಲ್ಲಿ ತಾನು ರದ್ದುಗೊಳಿಸಿದ್ದಾಗಿ ಹೈಕೋರ್ಟ್‌ ತಿಳಿಸಿತು. ಅಧಿಕಾರಿಯ ಪುನರಾವರ್ತಿತ ಲೋಪ ನ್ಯಾಯಾಲಯದ ಕೆಂಗಣ್ಣಿಗೆ ತುತ್ತಾಯಿತು.

“… ಇಂತಹ ನಡೆ ವಾರ್ಡ್  ಸಂಖ್ಯೆ 5(1)ರ  ತೆರಿಗೆ ನಿರ್ಧರಣಾಧಿಕಾರಿಯಾದ ಬಿತನ್‌ ರಾಯ್‌ ಅವರು ವಿವೇಚನೆ ಇಲ್ಲದೆ ಕೆಲಸ ಮಾಡಿರುವುದನ್ನು ಬಿಂಬಿಸುತ್ತಿದ್ದು ಈ ನ್ಯಾಯಾಲಯ ಹಿಂದೆ ನೀಡಿದ್ದ ಆದೇಶವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರುವುದಲ್ಲದೆ ಧಿಕ್ಕರಿಸುತ್ತದೆ” ಎಂದು ನ್ಯಾಯಾಲಯ ಮಾರ್ಚ್ 2ರಂದು ನೀಡಿದ ಆದೇಶದಲ್ಲಿ ತಿಳಿಸಿದೆ.

ಹೀಗಾಗಿ ನೋಟಿಸ್‌ ರದ್ದುಪಡಿಸಿ ಬಿತನ್‌ ರಾಯ್‌ ಅವರಿಗೆ ₹ 20,000 ವೈಯಕ್ತಿಕ ದಂಡ ವಿಧಿಸಿದ ನ್ಯಾ. ನಿಜಾಮುದ್ದೀನ್‌ ಅವರು ದಂಡದ ಮೊತ್ತವನ್ನು ಅಧಿಕಾರಿಯ ವೇತನದಿಂದ ಕಡಿತಗೊಳಿಸಿ ಅರ್ಜಿದಾರ ಕಂಪೆನಿಗೆ ಪಾವತಿಸಲು ಆದೇಶಿಸಿತು.

ಬೇರೊಂದು ಕಂಪೆನಿಗೆ ಸಂಬಂಧಿಸಿದ ಇಂತಹದ್ದೇ ಇನ್ನೊಂದು ಪ್ರಕರಣದಲ್ಲಿಯೂ ನ್ಯಾ. ನಿಜಾಮುದ್ದೀನ್‌ ಅವರು ರಾಯ್‌ ಅವರಿಗೆ ₹10,000 ದಂಡ ವಿಧಿಸಿದ್ದರು. ಆಗಲೂ ವಿವೇಚನಾರಹಿತವಾಗಿ ವರ್ತಿಸಿದ್ದಕ್ಕೆ ನ್ಯಾಯಮೂರ್ತಿಗಳು ಅಧಿಕಾರಿಯನ್ನು ಟೀಕಿಸಿದ್ದರು. ಈ ಅಂಶವನ್ನು ಈಗ ನೀಡಿದ ಆದೇಶದಲ್ಲಿಯೂ ಪ್ರಸ್ತಾಪಿಸಲಾಗಿದೆ.