Suvendu Adhikari, Calcutta High Court  
ಸುದ್ದಿಗಳು

ಬಿಜೆಪಿ ನಾಯಕ ಸುವೇಂದು ಅಧಿಕಾರಿ ವಿರುದ್ಧದ ಪೊಲೀಸ್‌ ಕಾರ್ಯಾಚರಣೆಗೆ ಕಲ್ಕತ್ತಾ ಹೈಕೋರ್ಟ್‌ ತಡೆ

Bar & Bench

ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ಸುವೇಂದು ಅಧಿಕಾರಿ ನಿವಾಸದಲ್ಲಿ ಶೋಧ ನಡೆಸಿದ ಪಶ್ಚಿಮ ಬಂಗಾಳ ಪೊಲೀಸರ ನಡೆಯನ್ನು ಶುಕ್ರವಾರ ಕಟುವಾಗಿ ಟೀಕಿಸಿರುವ ಕಲ್ಕತ್ತಾ ಹೈಕೋರ್ಟ್‌, ಆಡಳಿತ ಪಕ್ಷದ ನಾಯಕರ ವಿರುದ್ಧ ಪೊಲೀಸರು ಇದೇ ರೀತಿ ವರ್ತಿಸುತ್ತಿದ್ದರೆ ಎಂದು ಪ್ರಶ್ನಿಸಿದೆ.

ಕೋಲಾಘಾಟ್‌ನಲ್ಲಿನ ತಮ್ಮ ನಿವಾಸಕ್ಕೆ 21ರಂದು ಪ್ರವೇಶಿಸಿದ್ದ ಪೊಲೀಸರ ವಿರುದ್ಧ ಕ್ರಮಕೈಗೊಳ್ಳುವಂತೆ ಸುವೇಂದು ಅಧಿಕಾರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಮ್ರಿತಾ ಸಿನ್ಹಾ ಅವರು ಪೊಲೀಸರ ನಡೆಯನ್ನು ಖಂಡಿಸಿದರು. ತಮ್ಮ ನಿವಾಸಕ್ಕೆ ಅಕ್ರಮ ಪ್ರವೇಶ ಮಾಡದಂತೆ ಅಧಿಕಾರಿಗಳಿಗೆ ನಿರ್ಬಂಧ ವಿಧಿಸಬೇಕು ಎಂದೂ ಅರ್ಜಿಯಲ್ಲಿ ಸುವೇಂದು ಕೋರಿದ್ದಾರೆ.

ಜೂನ್‌ 17ರವರೆಗೆ ಸುವೇಂದು ಅಧಿಕಾರಿ ವಿರುದ್ಧ ಯಾವುದೇ ಕ್ರಮಕೈಗೊಳ್ಳುವಂತಿಲ್ಲ ಎಂದು ಪೊಲೀಸರಿಗೆ ನಿರ್ದೇಶಿಸಿರುವ ನ್ಯಾಯಾಲಯವು ಕೆಲವು ದಿನ ತಡೆದರೆ ಆಕಾಶವೇನೂ ಕಳಚಿ ಬೀಳುವುದಿಲ್ಲ ಎಂದಿದೆ.

ದಾಳಿ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯನ್ನೂ ನ್ಯಾಯಾಲಯವು ತಡೆದಿದೆ. ನೀತಿ ಸಂಹಿತೆ ಜಾರಿಯಲ್ಲಿರುವಾಗ ಚುನಾವಣಾ ವಿಚಕ್ಷಣಾ ದಳ ಮಾತ್ರ ದಾಳಿ ನಡೆಸಲು ಅವಕಾಶವಿದೆ ಎಂದು ನ್ಯಾಯಾಲಯ ಹೇಳಿದ್ದು, ಪೊಲೀಸರ ಕ್ರಮವನ್ನು ಪ್ರಶ್ನಿಸಿದೆ.

“ಆಡಳಿತ ಪಕ್ಷದ ನಾಯಕರ ಬಗ್ಗೆ ಇಂಥ ಮಾಹಿತಿ ನಿಮಗೆ ಸಿಗಬೇಕಿತ್ತು ಎಂದು ನಾನು ಭಾವಿಸುತ್ತೇನೆ. ಆಗ ನೀವು ಇಷ್ಟೇ ಕ್ಷಿಪ್ರಗತಿಯಲ್ಲಿ ನಡೆದುಕೊಳ್ಳುತ್ತಿದ್ದಿರಾ?” ಎಂದು ನ್ಯಾ. ಸಿನ್ಹಾ ಹೇಳಿದ್ದಾರೆ.

ವಿರೋಧ ಪಕ್ಷದ ನಾಯಕರ ವಿರುದ್ಧ ಯಾವುದೇ ಕ್ರಮಕೈಗೊಳ್ಳದಂತೆ ಪೊಲೀಸರಿಗೆ ನ್ಯಾಯಾಲಯ ನಿರ್ಬಂಧ ವಿಧಿಸಿದೆ.

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ತಮ್ಮ ಚಟುವಟಿಕೆಗಳನ್ನು ತಡೆಯುವ ಉದ್ದೇಶದಿಂದ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರದ ಆದೇಶ ಮೇರೆಗೆ ಶೋಧ ನಡೆಸಲಾಗಿದೆ ಎಂದು ಅಧಿಕಾರಿ ಆಕ್ಷೇಪಿಸಿದ್ದಾರೆ.

ಪ್ರಕರಣವೊಂದರಲ್ಲಿ ನಾಪತ್ತೆಯಾಗಿರುವ ದುಷ್ಕರ್ಮಿಗಾಗಿ ಮೇ 21ರಂದು ಅಪಾರ ಸಂಖ್ಯೆಯ ಪೊಲೀಸರು ಸುವೇಂದು ಅಧಿಕಾರಿ ಮನೆಯಲ್ಲಿ ತಪಾಸಣೆ ನಡೆಸಿದ್ದಾರೆ. ಆದರೆ, ಯಾರನ್ನೂ ಬಂಧಿಸಲಾಗಿಲ್ಲ ಎಂದು ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ.