ಪೊಲೀಸ್ ಅಧಿಕಾರಿಗೆ ಗೂಂಡಾ ಪದ ಬಳಕೆ: ಸುವೇಂದು ಅಧಿಕಾರಿ ವಿರುದ್ಧ ಎಫ್ಐಆರ್ ದಾಖಲಿಸಲು ಕಲ್ಕತ್ತಾ ಹೈಕೋರ್ಟ್ ನಕಾರ

ಗಮನಾರ್ಹವಾಗಿ ಕಳೆದ ವರ್ಷ ನ್ಯಾ. ರಾಜಶೇಖರ್ ಅವರು ಸುವೇಂದು ಅವರ ವಿರುದ್ಧ ಹಲವು ಎಫ್ಐಆರ್ ದಾಖಲಾಗದಂತೆ ಆದೇಶಿಸಿದ್ದರು. ಅಲ್ಲದೆ ನ್ಯಾಯಾಲಯದ ಅನುಮತಿ ಹೊರತಾಗಿ ಸುವೇಂದು ಅವರ ವಿರುದ್ಧ ಎಫ್ಐಆರ್ ದಾಖಲಿಸದಂತೆ ಪೊಲೀಸರಿಗೆ ಆದೇಶಿಸಿದ್ದರು.
Suvendu Adhikari, Calcutta High Court
Suvendu Adhikari, Calcutta High Court
Published on

ಕಳೆದ ಆಗಸ್ಟ್‌ನಲ್ಲಿ ಪೊಲೀಸ್‌ ಅಧಿಕಾರಿ ಜೊತೆ ಜಗಳವಾಡಿದ್ದ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಲು ಕಲ್ಕತ್ತಾ ಹೈಕೋರ್ಟ್‌ ಈಚೆಗೆ ಅನುಮತಿ ನಿರಾಕರಿಸಿದ್ದು ಸುವೇಂದು ಅವರಿಗೆ ಮತ್ತೊಂದು ಪ್ರಕರಣದಲ್ಲಿ ಪರಿಹಾರ ದೊರೆತಂತಾಗಿದೆ [ಸುವೆಂದು ಅಧಿಕಾರಿ ಮತ್ತು ಪಶ್ಚಿಮ ಬಂಗಾಳಸರ್ಕಾರ ನಡುವಣ ಪ್ರಕರಣ].

ಪೊಲೀಸ್‌ ಅಧಿಕಾರಿ ಕರ್ತವ್ಯ ನಿರ್ವಹಿಸದಂತೆ ತಡೆದಿದ್ದು ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ನ (ಟಿಎಂಸಿ) ʼಕತ್ತೆʼ ಎಂದು ಆ ಅಧಿಕಾರಿಯನ್ನು ಸುವೇಂದು ಜರೆದಿದ್ದು ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಲು ನ್ಯಾಯಾಲಯ ಅನುಮತಿ ನೀಡಬೇಕೆಂದು ಕೋರಿ ರಾಜ್ಯ ಸರ್ಕಾರ ನ್ಯಾಯಾಲಯದ ಮೊರೆ ಹೋಗಿತ್ತು.

ಆದರೆ ಅರ್ಜಿಗೆ ನ್ಯಾ. ಜೇ ಸೇನ್‌ಗುಪ್ತಾ ಅವರಿದ್ದ ಏಕಸದಸ್ಯ ಪೀಠ ಅನುಮತಿ ನಿರಾಕರಿಸಿತು. “ದೂರು ಮತ್ತು (ಘಟನೆಯ) ವೀಡಿಯೊದಿಂದ ಕಂಡುಬಂದ ಸಂಗತಿಯೆಂದರೆ ಪ್ರತಿಭಟನೆಯೊಂದರ ವೇಳೆ ಪೊಲೀಸರು ಮತ್ತು ಅರ್ಜಿದಾರರ (ಸುವೇಂದು) ನಡುವೆ ಜಗಳ ನಡೆದಿದೆ. ಇದರ ಮಧ್ಯೆ, ಸುವೇಂದು ಅವರು ಜಗಳವಾಡುತ್ತಿರುವುದು ಕಂಡುಬಂದಿದೆ. ಪೊಲೀಸ್ ಅಧಿಕಾರಿ, ಅವರನ್ನು ಸರ್ಕಾರದ ಗೂಂಡಾ ಎಂದು ಕರೆದಿದ್ದಾರೆ ಮತ್ತು ಅಶ್ಲೀಲ ಭಾಷೆ ಬಳಸಿದ್ದಾರೆ” ಎಂದಿತು.

ಕಳೆದ ವರ್ಷ ಡಿಸೆಂಬರ್‌ನಲ್ಲಿ ನೀಡಿದ ಆದೇಶದಲ್ಲಿ ನ್ಯಾಯಮೂರ್ತಿ ರಾಜಶೇಖರ್ ಮಂಥ ಅವರಿದ್ದ ಏಕಸದಸ್ಯ ಪೀಠ ಸುವೇಂದು ಅವರ ವಿರುದ್ಧ ಯಾವುದೇ ಹೊಸ ಎಫ್‌ಐಆರ್‌ ದಾಖಲಿಸದಂತೆ ಪ. ಬಂಗಾಳ ಪೊಲೀಸರಿಗೆ ಆದೇಶಿಸಿದ್ದರು. ಅಲ್ಲದೆ ನ್ಯಾ. ಮಂಥ ಅವರು ಸುವೇಂದು ಅವರ ವಿರುದ್ಧ ದಾಖಲಾದ ಸುಮಾರು 26 ಎಫ್‌ಐಆರ್‌ಗಳನ್ನು ರದ್ದುಗೊಳಿಸಿದ್ದರು. ಟಿಎಂಸಿ ತೊರೆದು ಬಿಜೆಪಿ ಸೇರಿದ 2 ವರ್ಷಗಳ ಅವಧಿಯಲ್ಲಿ ತಮ್ಮ ವಿರುದ್ಧ ಇಷ್ಟು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಸುವೇಂದು ದೂರಿದ್ದರು.

Also Read
'ಪ್ರಚೋದನಕಾರಿ' ಹೇಳಿಕೆ: ಕಲ್ಕತ್ತಾ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಮೊರೆ ಹೋದ ಸುವೇಂದು ಅಧಿಕಾರಿ

ಈ ಆದೇಶವನ್ನು ಪರಿಗಣಿಸಿ, ಪ್ರಸ್ತುತ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಲು ಅನುಮತಿ ಕೋರಿ ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ನ್ಯಾಯಾಲಯ ಅನುಮತಿ ನಿರಾಕರಿಸಿತಾದರೂ ಸುವೇಂದು ಅವರು ಬಳಸಿರುವ ಭಾಷೆ ಕೆಟ್ಟ ಅಭಿರುಚಿಯಿಂದ ಕೂಡಿದೆ ಎಂದು ಹೇಳಿದೆ.

ಆದರೆ ಸಾರ್ವಜನಿಕ ಭಾಷಣದಲ್ಲಿ ಗ್ರಾಮ್ಯ ಭಾಷೆ ಬಳಸಿದಾಗಲೂ ಅಶ್ಲೀಲತೆ ಅಥವಾ ವಿಶೇಷ ಕಾನೂನಿನಡಿ ನಿಷೇಧಿತವಾದ ಪದಗಳನ್ನು ಹೊರತುಪಡಿಸಿದ ಭಾಷೆಯನ್ನಷ್ಟೇ ಬಳಸಿದ್ದಾಗ ಸಂಜ್ಞೇಯ ಅಪರಾಧವಾಗುವುದಿಲ್ಲ ಎಂದು ನ್ಯಾಯಾಲಯ ನುಡಿದಿದೆ.

Kannada Bar & Bench
kannada.barandbench.com