Criminal laws 
ಸುದ್ದಿಗಳು

ಮೂರು ಹೊಸ ಅಪರಾಧಿಕ ಕಾನೂನುಗಳನ್ನು ಸಂಕ್ಷಿಪ್ತನಾಮದಿಂದ ಕರೆಯಿರಿ: ಪಂಜಾಬ್ ಹೈಕೋರ್ಟ್

ಸಂಕ್ಷಿಪ್ತ ನಾಮಗಳನ್ನು ಬಳಸುವುದರಿಂದ ಭಾಷೆಯ ವಿಚಾರದಲ್ಲಿ ಗೊಂದಲವಾಗದೆ ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಪದಗಳ ಉಲ್ಲೇಖಕ್ಕೆ ಸಹಾಯ ಮಾಡುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

Bar & Bench

ಈ ತಿಂಗಳ ಆರಂಭದಲ್ಲಿ ಜಾರಿಗೆ ಬಂದಿರುವ ಮೂರು ಹೊಸ ಅಪರಾಧಿಕ ಕಾನೂನುಗಳ ಶೀರ್ಷಿಕೆ ಕುರಿತಂತೆ ಗೊಂದಲ ಹೋಗಲಾಡಿಸಲು ಅವುಗಳ ಸಂಕ್ಷಿಪ್ತನಾಮಗಳನ್ನು ಬಳಸುವಂತೆ ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ ಹೇಳಿದೆ [ಮನ್ಪ್ರೀತ್ ಕೌರ್ ಮತ್ತು ಪಂಜಾಬ್‌ ಸರ್ಕಾರ ನಡುವಣ ಪ್ರಕರಣ].

ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಬದಲಿಗೆ ಅದರ ಸಂಕ್ಷಿಪ್ತನಾಮವಾದ ಬಿಎನ್‌ಎಸ್‌ಎಸ್‌ ಭಾರತೀಯ ನ್ಯಾಯ ಸಂಹಿತೆ ಬದಲಿಗೆ ಬಿಎನ್‌ಎಸ್‌ ಹಾಗೂ ಭಾರತೀಯ ಸಾಕ್ಷ್ಯ ಅಧಿನಿಯಮವನ್ನು ಬಿಎಸ್‌ಎ ಎಂಬ ಹೆಸರಿನಲ್ಲಿ ಉಚ್ಚರಿಸುವಂತೆ ಅದು ಸಲಹೆ ನೀಡಿದೆ.

ಹಿಂದಿಯೇತರ ರಾಜ್ಯಗಳ ಜನ ಮತ್ತು ವಕೀಲ ವರ್ಗ ಹೊಸ ಕಾನೂನುಗಳ ಶೀರ್ಷಿಕೆ ಉಚ್ಚರಿಸಲು ತಮಗೆ ತೊಂದರೆಯಾಗುತ್ತಿದ್ದುಅವುಗಳ ಹೆಸರುಗಳನ್ನು ಬದಲಿಸುವಂತೆ ನ್ಯಾಯಾಲಯಗಳ ಮೊರೆ ಹೋಗಿದ್ದರ ಮಧ್ಯೆಯೇ ಪಂಜಾಬ್‌ ಹೈಕೋರ್ಟ್‌ ಈ ವಿಚಾರ ತಿಳಿಸಿದೆ.

ಎಫ್‌ಐಆರ್, ಅರ್ಜಿ, ಆದೇಶ ಇತ್ಯಾದಿಗಳಲ್ಲಿ ಈ ಮೂರೂ ಕಾನೂನುಗಳನ್ನು ಬಿಎನ್‌ಎಸ್‌ಎಸ್, ಬಿಎನ್‌ಎಸ್ ಮತ್ತು ಬಿಎಸ್‌ಎ ಎಂದು ಉಲ್ಲೇಖಿಸಿದರೆ ಯಾವುದೇ ತಪ್ಪಿಲ್ಲ ಎಂಬುದಾಗಿ ನ್ಯಾಯಮೂರ್ತಿ ಅನೂಪ್ ಚಿತ್ಕಾರ ಹೇಳಿದರು.

ಹೊಸ ಅಪರಾಧಿಕ ಕಾನೂನುಗಳನ್ನು ಅವುಗಳ ಸಂಕ್ಷಿಪ್ತ ನಾಮಗಳೊಂದಿಗೆ ಕರೆಯುವುದು ಯಾವುದೇ ಕಾನೂನನ್ನು ಉಲ್ಲಂಘಿಸುವುದಿಲ್ಲ, ಬದಲಿಗೆ ಒಳಗೊಳ್ಳುವಿಕೆಯನ್ನು ಉತ್ತೇಜಿಸುತ್ತದೆ ಮತ್ತು ನ್ಯಾಯಾಂಗ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತದೆ ಎಂದು ಏಕ ಸದಸ್ಯ ಪೀಠ ಅಭಿಪ್ರಾಯಪಟ್ಟಿತು.

ಸಂಕ್ಷಿಪ್ತ ನಾಮಗಳನ್ನು ಬಳಸುವುದರಿಂದ ಭಾಷೆಯ ವಿಚಾರದಲ್ಲಿ ಗೊಂದಲವಾಗದೆ ಎಲ್ಲರಿಗೂ  ಅರ್ಥವಾಗುವ ರೀತಿಯಲ್ಲಿ ಪದಗಳ ಉಲ್ಲೇಖಕ್ಕೆ ಸಹಾಯ ಮಾಡುತ್ತದೆ ಎಂದು ಅದು ತಿಳಿಸಿತು.

ಭ್ರಷ್ಟಾಚಾರ ಮತ್ತು ವಂಚನೆ ಪ್ರಕರಣದಲ್ಲಿ ಬಿಎನ್‌ಎಸ್‌ಎಸ್‌ನ ಸೆಕ್ಷನ್ 482ರ ಅಡಿಯಲ್ಲಿ ಜಾಮೀನು ಕೋರಿ ಮಹಿಳೆಯೊಬ್ಬರು ಸಲ್ಲಿಸಿದ್ದ ಮನವಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯವು ಈ ಅವಲೋಕನಗಳನ್ನು ಮಾಡಿದೆ.