Karnataka HCʼs Dharwad Bench Justices S Sunil Dutt Yadav and K S Hemalakha 
ಸುದ್ದಿಗಳು

ಪತಿ ವಿರುದ್ದ ನಿರಾಧಾರವಾಗಿ ನಪುಂಸಕತ್ವ ಆರೋಪ ಮಾಡುವುದು ಮಾನಸಿಕ ಕ್ರೌರ್ಯ ಎಂದ ಹೈಕೋರ್ಟ್‌; ವಿಚ್ಛೇದನಕ್ಕೆ ಅನುಮತಿ

ಪತಿಯ ವಿರುದ್ಧ ಆಧಾರರಹಿತವಾಗಿ ನಪುಂಸಕತ್ವದ ಆರೋಪ ಹೊರಿಸಿದ ಪತ್ನಿಯ ನಡೆಗೆ ಆಕ್ಷೇಪಿಸಿ, ವಿಚ್ಛೇದನ ಮಂಜೂರು ಮಾಡಿದೆ. ಪತ್ನಿ ಪುನರ್‌ ವಿವಾಹವಾಗುವವರೆಗೂ ಪತ್ನಿಗೆ ಮಾಸಿಕ ಎಂಟು ಸಾವಿರ ರೂಪಾಯಿ ಜೀವನಾಂಶ ನೀಡಬೇಕು ಎಂದು ಪತಿಗೆ ಆದೇಶಿಸಿದೆ.

Bar & Bench

ಪತಿಯ ವಿರುದ್ಧ ನಿರಾಧಾರವಾಗಿ ನಪುಂಸಕತ್ವ ಆರೋಪ ಹೊರಿಸುವುದು ಮಾನಸಿಕ ಕ್ರೌರ್ಯವಾಗಿದೆ. ಇದನ್ನು ಆಧರಿಸಿ ಪತಿ ವಿಚ್ಚೇದನ ಕೋರಬಹುದು ಎಂದು ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠ ಈಚೆಗೆ ಹೇಳಿದೆ.

ಸಾಕ್ಷ್ಯಧಾರ ಇಲ್ಲದೇ ಪತ್ನಿ ನಪುಂಸಕತ್ವದ ಆರೋಪ ಮಾಡಿ ಘನತೆಗೆ ಧಕ್ಕೆ ತಂದರೂ ವಿಚ್ಛೇದನ ಮಂಜೂರಾತಿ ಮಾಡಲು ನಿರಾಕರಿಸಿದ ಧಾರವಾಡದ ಪ್ರಧಾನ ಕೌಟುಂಬಿಕ ನ್ಯಾಯಾಲಯದ ಕ್ರಮ ರದ್ದುಪಡಿಸುವಂತೆ ಕೋರಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಪ್ರಥಮ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಎಸ್‌ ಸುನಿಲ್ ದತ್ ಯಾದವ್ ಮತ್ತು ಕೆ ಎಸ್‌ ಹೇಮಲೇಖಾ ನೇತೃತ್ವದ ವಿಭಾಗೀಯವು ಪೀಠ ಪುರಸ್ಕರಿಸಿದೆ.

ಪತಿಯ ವಿರುದ್ಧ ಆಧಾರರಹಿತವಾಗಿ ನಪುಂಸಕತ್ವದ ಆರೋಪ ಹೊರಿಸಿದ ಪತ್ನಿಯ ನಡೆಗೆ ಆಕ್ಷೇಪಿಸಿ, ವಿಚ್ಛೇದನ ಮಂಜೂರು ಮಾಡಿದೆ. ಪತ್ನಿ ಪುನರ್‌ ವಿವಾಹವಾಗುವವರೆಗೂ ಪತ್ನಿಗೆ ಮಾಸಿಕ ಎಂಟು ಸಾವಿರ ರೂಪಾಯಿ ಜೀವನಾಂಶ ನೀಡಬೇಕು ಎಂದು ಪತಿಗೆ ಆದೇಶಿಸಿದೆ.

ಪತಿಯು ವೈವಾಹಿಕ ಜೀವನದ ಜವಾಬ್ದಾರಿ ನಿರ್ವಹಿಸುತ್ತಿಲ್ಲ. ಲೈಂಗಿಕ ಕ್ರಿಯೆ ನಡೆಸಲು ಅಸಮರ್ಥ ಎಂಬುದಾಗಿ ಪತ್ನಿ ಆರೋಪ ಮಾಡಿದ್ದಾರೆ. ಆದರೆ, ಈ ಆರೋಪವು ಸತ್ಯ ಎಂದು ಸಾಬೀತುಪಡಿಸಲು ಯಾವುದೇ ಸಾಕ್ಷ್ಯಧಾರ ಒದಗಿಸಿಲ್ಲ. ಸಾರ್ವಜನಿಕವಾಗಿ ಇಂತಹ ನಿರಾಧಾರ ಆರೋಪ ಮಾಡುವುದರಿಂದ ಪತಿಯ ಘನತೆಗೆ ಧಕ್ಕೆ ತಂದಂತಾಗುತ್ತದೆ. ಪ್ರಜ್ಞಾವಂತ ಮಹಿಳೆ ಮತ್ತೊಬ್ಬರ ಮುಂದೆ ಪತಿಯ ನಪುಂಸಕತ್ವದ ಬಗ್ಗೆ ಸುಳ್ಳು ಆರೋಪ ಮಾಡುವುದಿಲ್ಲ. ಸಾಕ್ಷ್ಯಧಾರವಿಲ್ಲದೆ ಪತಿ ಮಕ್ಕಳನ್ನು ಹೊಂದಲು ಅಸಮರ್ಥ ಎಂಬುದಾಗಿ ಆರೋಪಿಸುವುದು ಮಾನಸಿಕ ಕ್ರೌರ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ.

ಅಲ್ಲದೆ, ತಾನು ವೈದ್ಯಕೀಯ ತಪಾಸಣೆಗೆ ಒಳಗಾಗಲು ಸಿದ್ಧವಾಗಿರುವುದಾಗಿ ಪತಿ ತಿಳಿಸಿದ್ದರು. ಆದರೆ, ಪತ್ನಿಯು ಪತಿಯ ನಪುಂಸಕತ್ವವನ್ನು ವೈದ್ಯಕೀಯ ದಾಖಲೆಗಳೊಂದಿಗೆ ಸಾಬೀತು ಮಾಡುವಲ್ಲಿ ವಿಫಲರಾಗಿದ್ದಾರೆ. ಲೈಂಗಿಕ ಕ್ರಿಯೆ ಅಸಮರ್ಥರು ಎಂದು ಆರೋಪ ಮಾಡುವುದರಿಂದ ಪತಿ-ಪತ್ನಿ ನಡುವೆ ಸಾಮರಸ್ಯ ರಹಿತ ವಾತಾವರಣ ಮತ್ತು ಒಂದಾಗಿ ಜೀವನ ನಡೆಸಲು ಸಾಧ್ಯವಾಗದಂಥ ಪರಿಸ್ಥಿತಿ ಸೃಷ್ಟಿಯಾಗುತ್ತದೆ. ಹಿಂದು ವಿವಾಹ ಕಾಯಿದೆ-1955ರ ಸೆಕ್ಷನ್ 13ರ ಅಡಿಯಲ್ಲಿ ನಪುಂಸಕತ್ವವು ವಿಚ್ಛೇದನ ಪಡೆಯಲು ಕಾರಣವಲ್ಲ ಎಂದು ಹೇಳಲಾಗಿದೆ. ಆದರೆ, ಕಾಯಿದೆಯ ಸೆಕ್ಷನ್ 13(1)(ಐಎ) ಅಡಿಯಲ್ಲಿ ನಪುಸಂಕತ್ವದ ಕುರಿತು ಸುಳ್ಳು ಆರೋಪ ಮಾಡಿದರೆ ಮಾನಸಿಕ ಕ್ರೌರ್ಯವಾಗುತ್ತದೆ. ಈ ಅಂಶದ ಮೇಲೆ ಪತಿಯು ವಿಚ್ಛೇದನ ಕೋರಬರಹುದು ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣದ ಹಿನ್ನೆಲೆ: ಧಾರವಾಡ ಮೂಲದ ಪತಿ ಮತ್ತು ಹಾವೇರಿ ಮೂಲದ ಪತ್ನಿ 2013ರ ಮೇ 13ರಂದು ವಿವಾಹವಾಗಿದ್ದರು. ಕೆಲ ತಿಂಗಳ ನಂತರ ಧಾರವಾಡ ಪ್ರಧಾನ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಪತಿಯು ಮದುವೆಯಾದ ಒಂದು ತಿಂಗಳವರೆಗೂ ಪತ್ನಿ ವೈವಾಹಿಕ ಜೀವನಕ್ಕೆ ಅಗತ್ಯ ಸಹಕಾರ ನೀಡುತ್ತಿದ್ದರು. ತದನಂತರ ಆಕೆಯ ನಡೆವಳಿಕೆಯಲ್ಲಿ ಬದಲಾವಣೆಯಾಗಿತ್ತು. ಮನೆ ಕೆಲಸ ನಿರ್ವಹಿಸಲು ನಿರಾಕರಿಸುತ್ತಿದ್ದರು. ವೈವಾಹಿಕ ಜವಾಬ್ದಾರಿಗಳನ್ನು ನಿರ್ವಹಿಸುತ್ತಿರಲಿಲ್ಲ. ನಾನು ಲೈಂಗಿಕ ಕ್ರಿಯೆ ನಡೆಸಲು ಅಸಮರ್ಥನಾಗಿದ್ದೇನೆ ಎಂದು ಪದೇ ಪದೇ ಸಂಬಂಧಿಕರ ಮುಂದೆ ಹೇಳುತ್ತಿದ್ದರು. ಇದರಿಂದ ತುಂಬಾ ಮುಜುಗರ ಉಂಟಾಗುತ್ತಿತ್ತು. ಪತ್ನಿ ಈ ನಡೆಯಿಂದ ಮಾನಸಿಕ ಹಿಂಸೆ ಉಂಟಾಗುತ್ತಿದ್ದು, ವಿಚ್ಛೇದನ ಮಂಜೂರು ಮಾಡಬೇಕು ಎಂದು ಕೋರಿದ್ದರು. ಆದರೆ, ಪತಿಯ ಮನವಿಯನ್ನು 2015ರ ಜುಲೈ 17ರಂದು ಧಾರವಾಡ ಪ್ರಧಾನ ಕೌಟುಂಬಿಕ ನ್ಯಾಯಾಲಯ ತಿರಸ್ಕರಿಸಿತ್ತು. ಈ ಆದೇಶ ಪ್ರಶ್ನಿಸಿ ಪತಿಯು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ಪತಿಯ ವಾದಕ್ಕೆ ಆಕ್ಷೇಪಿಸಿದ್ದ ಪತ್ನಿಯು ಗಂಡನ ಮನೆಗೆ ತೆರಳಿ ಸಂತೋಷವಾಗಿ ಜೀವನ ನಡೆಸುತ್ತಿದ್ದೆ. ಆದರೆ, ಗಂಡನೇ ತನ್ನಿಂದ ಅಂತರ ಕಾಯ್ದುಕೊಳ್ಳುತ್ತಿದ್ದರು. ಇದರಿಂದ ವೈವಾಹಿಕ ಜೀವನದಲ್ಲಿ ಸುಖ ಮತ್ತು ನೆಮ್ಮದಿ ಇಲ್ಲದಂತಾಯಿತು. ಪತಿಗೆ ಲೈಂಗಿಕ ಕ್ರಿಯೆ ನಡೆಸಲು ಆಸಕ್ತಿ ಇರಲಿಲ್ಲ. ಒಂದಲ್ಲಾ ಒಂದು ಕಾರಣದಿಂದ ಸದಾ ಒಂಟಿಯಾಗಿಯೇ ಇರುತ್ತಿದ್ದರು. ವೈವಾಹಿಕ ಜೀವನ ನಡೆಸಲು ತಾನು ಸದಾ ಸಿದ್ಧಳಿದ್ದೇನೆ. ಆದರೆ, ಗಂಡನೇ ತನ್ನ ಲೋಪ ಮರೆಮಾಚಲು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ಪ್ರತ್ಯಾರೋಪ ಮಾಡಿದ್ದರು.