ಜೈಲಿನಲ್ಲಿ ಶಶಿಕಲಾಗೆ ವಿಶೇಷ ಸೌಲಭ್ಯ: ಐಪಿಎಸ್‌ ಅಧಿಕಾರಿ ರೂಪಾ ವಿರುದ್ಧದ ಮಾನನಷ್ಟ ಮೊಕದ್ದಮೆ ವಜಾ ಮಾಡಿದ ಹೈಕೋರ್ಟ್‌

2017ರ ಜುಲೈ 12ರಂದು ರಾಜ್ಯ ಬಂಧೀಖಾನೆ ಇಲಾಖೆ ಡಿಐಜಿ ಆಗಿದ್ದ ರೂಪಾ ಅವರು ಕಾರಾಗೃಹ ಇಲಾಖೆ ಡಿಜಿಯಾಗಿದ್ದ ಎಚ್ ಎನ್ ಸತ್ಯನಾರಾಯಣ ರಾವ್ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು.
Karnataka HC, IPS officer D Roopa and Rtd IPS officer H N Satyanarayan Rao
Karnataka HC, IPS officer D Roopa and Rtd IPS officer H N Satyanarayan Rao
Published on

ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಹಾಗೂ ಕಾರಾಗೃಹ ಇಲಾಖೆಯ ಹಿಂದಿನ ಡಿಐಜಿ ಡಿ ರೂಪಾ ವಿರುದ್ಧ ನಿವೃತ್ತ ಪೊಲೀಸ್‌ ಮಹಾನಿರ್ದೇಶಕ (ಡಿಜಿ) ಎಚ್ ಎನ್ ಸತ್ಯನಾರಾಯಣ ರಾವ್ ದಾಖಲಿಸಿದ್ದ ಕ್ರಿಮಿನಲ್‌ ಮಾನನಷ್ಟ ದಾವೆಗೆ ಸಂಬಂಧಿಸಿದ ವಿಚಾರಣಾಧೀನ ನ್ಯಾಯಾಲಯದ ಪ್ರಕ್ರಿಯೆಯನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ರದ್ದುಪಡಿಸಿದೆ.

ಕ್ರಿಮಿನಲ್‌ ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದ ತಮ್ಮ ವಿರುದ್ಧದ ವಿಚಾರಣಾಧೀನ ನ್ಯಾಯಾಲಯದ ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ಡಿ ರೂಪಾ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯವು ಪೀಠವು ಪುರಸ್ಕರಿಸಿದೆ.

ಸರ್ಕಾರಿ ಸೇವೆಯಲ್ಲಿರುವ ಡಿ ರೂಪಾ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ಮತ್ತು ಪ್ರಾಸಿಕ್ಯೂಷನ್‌ಗಾಗಿ ದೂರುದಾರರಾದ ಸತ್ಯನಾರಾಯಣ ರಾವ್ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆದಿಲ್ಲ. ಡಿ ರೂಪಾ ಅವರು ಸತ್ಯನಾರಾಯಣ್ ರಾವ್ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿ ಇಲಾಖೆಯ ಮುಖ್ಯಸ್ಥರಿಗೆ ಬರೆದಿರುವ ಪತ್ರವು ಅಧಿಕೃತ ಕರ್ತವ್ಯ ನಿರ್ವಹಣೆಯ ಭಾಗವಾಗಿದೆ. ಹೀಗಾಗಿ, ಅದು ಮಾನನಷ್ಟ ಪ್ರಕರಣವಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ಪ್ರಕರಣದ ವಿಚಾರಣೆ ಮುಂದುವರಿಸಲು ವಿಚಾರಣಾಧೀನ ನ್ಯಾಯಾಲಯಕ್ಕೆ ಅನುಮತಿ ನೀಡಿದರೆ, ಅದು ಕಾನೂನು ದುರ್ಬಳಕೆಯಾಗಲಿದೆ ಎಂದಿರುವ ನ್ಯಾಯಾಲಯವು ರೂಪಾ ವಿರುದ್ಧದ ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದ ಪ್ರಕ್ರಿಯೆಯನ್ನು ರದ್ದುಪಡಿಸಿದೆ.

“ನಿರ್ದಿಷ್ಟ ಹುದ್ದೆಯಲ್ಲಿ ಮುಂದುವರಿದಿಲ್ಲ ಎಂಬ ಕಾರಣಕ್ಕೆ ಸರ್ಕಾರಿ ಅಧಿಕಾರಿ ವಿರುದ್ಧ ದೂರು ದಾಖಲಿಸಲು ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯುವ ಅಗತ್ಯವಿಲ್ಲ ಎಂಬ ವಾದವನ್ನು ಒಪ್ಪಲಾಗದು. ಹುದ್ದೆ ಬದಲಾದ ಮಾತ್ರಕ್ಕೆ ಸರ್ಕಾರಿ ಅಧಿಕಾರಿ ಅಲ್ಲ ಎಂದು ಹೇಳಲು ಸಾಧ್ಯವಿಲ್ಲ. ಸರ್ಕಾರಿ ಅಧಿಕಾರಿಗಳು ಎಲ್ಲಿಯವರಗೆ ಸಾರ್ವಜನಿಕ ಸೇವೆಯಲ್ಲಿ ಇರುತ್ತಾರೋ, ಅಲ್ಲಿಯವರೆಗೂ ಅವರ ವಿರುದ್ಧ ದೂರು ದಾಖಲಿಸಲು ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯ” ಎಂದು ಪೀಠ ಆದೇಶದಲ್ಲಿ ಹೇಳಿದೆ.

ಪ್ರಕರಣದ ಹಿನ್ನೆಲೆ: 2017ರ ಜುಲೈ 12ರಂದು ರಾಜ್ಯ ಬಂಧೀಖಾನೆ ಇಲಾಖೆ ಡಿಐಜಿ ಆಗಿದ್ದ ರೂಪಾ ಅವರು ಕಾರಾಗೃಹ ಇಲಾಖೆ ಡಿಜಿಪಿಯಾಗಿದ್ದ ಎಚ್ ಎನ್ ಸತ್ಯನಾರಾಯಣ ರಾವ್ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಇದರ ಬೆನ್ನಿಗೇ, ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಎಐಎಡಿಎಂಕೆ ನಾಯಕಿ ವಿ ಕೆ ಶಶಿಕಲಾ ಅವರಿಗೆ ವಿಶೇಷ ಸೌಲಭ್ಯ ಕಲ್ಪಿಸಲು ಸತ್ಯನಾರಾಯಣ ರಾವ್ ಎರಡು ಕೋಟಿ ರೂಪಾಯಿ ಲಂಚ ಪಡೆದಿದ್ದಾರೆ ಎಂಬ ವರದಿಗಳು ಮಾಧ್ಯಮಗಳಲ್ಲಿ ಪ್ರಕಟವಾಗಿದ್ದವು.

2017ರ ಜುಲೈ 31ರಂದು ಸೇವೆಯಿಂದ ನಿವೃತ್ತರಾಗಿದ್ದ ಸತ್ಯನಾರಾಯಣ ರಾವ್‌ ಅವರು ರೂಪಾ ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ. ಇದರಿಂದ ತಮ್ಮ ಘನತೆಗೆ ಧಕ್ಕೆಯಾಗಿದೆ ಎಂದು ಆರೋಪಿಸಿ 2018ರ ಫೆಬ್ರವರಿ 5ರಂದು ನಗರದ 9ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ನ್ಯಾಯಾಲಯದಲ್ಲಿ 20 ಕೋಟಿ ರೂಪಾಯಿ ಮೊತ್ತದ ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ದೂರುದಾರರ ಪ್ರಮಾಣೀಕೃತ ಹೇಳಿಕೆ ದಾಖಲಿಸಿಕೊಡಿದ್ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು 2021ರ ಆಗಸ್ಟ್‌ 6ರಂದು ರೂಪಾ ಅವರಿಗೆ ಸಮನ್ಸ್ ಜಾರಿಗೊಳಿಸಿತ್ತು. ಹೀಗಾಗಿ, ಮಾನನಷ್ಟ ಪ್ರಕರಣ ರದ್ದುಪಡಿಸುವಂತೆ ರೂಪಾ ಅವರು ಹೈಕೋರ್ಟ್‌ಗೆ ಮೆಟ್ಟಿಲೇರಿದ್ದರು.

Also Read
ಗಣಿಗಾರಿಕೆಗೆ ಅರಣ್ಯ ಭೂಮಿ ಮಂಜೂರು ಪ್ರಕರಣ: ಮುಚ್ಚಿದ ಲಕೋಟೆಯಲ್ಲಿ ಹೈಕೋರ್ಟ್‌ಗೆ ತನಿಖಾ ವರದಿ ಸಲ್ಲಿಸಿದ ಸರ್ಕಾರ

ರೂಪಾ ಅವರನ್ನು ಪ್ರತಿನಿಧಿಸಿದ್ದ ವಕೀಲ ಮಧುಕರ್‌ ದೇಶಪಾಂಡೆ ಅವರು “ಅರ್ಜಿದಾರರು ತಮ್ಮ ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ ದೂರುದಾರರ ವಿರುದ್ಧ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ತಪಾಸಣೆಯ ವೇಳೆ ಜೈಲಿನಲ್ಲಿ ಕಂಡ ಸತ್ಯಾಂಶಗಳನ್ನು ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಹೀಗಾಗಿ, ಅಪರಾಧ ದಂಡ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 199ರ ಪ್ರಕಾರ ಸರ್ಕಾರಿ ಸೇವಕರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಬೇಕಾದರೆ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯ. ಈ ಪ್ರಕರಣದಲ್ಲಿ ದೂರುದಾರರು ಯಾವುದೇ ಪೂರ್ವಾನುಮತಿ ಪಡೆದಿಲ್ಲ” ಎಂದು ವಾದಿಸಿದ್ದರು.

ಸತ್ಯನಾರಾಯಣ ರಾವ್ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಪುತ್ತಿಗೆ ರಮೇಶ್‌ ಅವರು “ಮಾನನಷ್ಟ ಮೊಕದ್ದಮೆ ದೂರು ದಾಖಲಿಸುವ ಸಂದರ್ಭದಲ್ಲಿ ರೂಪಾ ಅವರು ಬಂಧೀಖಾನೆ ಇಲಾಖೆಯ ಡಿಐಜಿ ಆಗಿರಲಿಲ್ಲ. ಹಾಗಾಗಿ, ಪೂರ್ವಾನುಮತಿ ಪಡೆಯುವ ಅಗತ್ಯವಿಲ್ಲ” ಎಂದು ವಾದಿಸಿದ್ದರು.

Attachment
PDF
D Roopa V. H N Sathyanarayana Rao.pdf
Preview
Kannada Bar & Bench
kannada.barandbench.com