Uttarakhand High Court and oxygen
ಸುದ್ದಿಗಳು

ಕೇಂದ್ರ ಸರ್ಕಾರದ್ದು ನಿರ್ದಯ ನಡೆ: ಉತ್ತರಾಖಂಡ ಹೈಕೋರ್ಟ್‌ ಕೆಂಡಾಮಂಡಲ

“ಕೇಂದ್ರ ಸರ್ಕಾರದ ನಿರ್ದಯ ನಡೆಯು ನಮಗೆ ಆಚ್ಚರಿ ಉಂಟುಮಾಡಿದೆ. ಉತ್ತರಾಖಂಡ ರಾಜ್ಯ ಮಾಡುವ ಪ್ರತಿಯೊಂದು ವಿನಂತಿಯು ಕಿವುಡಾದ ಕಿವಿಗೆ ಬೀಳುತ್ತಿದೆ” ಎಂದು ಮುಖ್ಯ ನ್ಯಾಯಮೂರ್ತಿ ಆರ್‌ ಎಸ್‌ ಚೌಹಾಣ್‌ ಖಾರವಾಗಿ ನುಡಿದಿದ್ದಾರೆ.

Bar & Bench

ಉತ್ತರಾಖಂಡಕ್ಕೆ ಆಮ್ಲಜನಕ ಹಂಚಿಕೆ ಮಾಡುವ ಕುರಿತು ಉತ್ತರಿಸಲು ಕೇಂದ್ರ ಸರ್ಕಾರದ ಪ್ರತಿನಿಧಿ ಹಾಜರಾಗದೆ ಗೈರಾಗಿದ್ದಕ್ಕೆ ಕೆಂಡಾಮಂಡಲವಾದ ಉತ್ತರಾಖಂಡ ಹೈಕೋರ್ಟ್‌ ಗುರುವಾರ ಕೇಂದ್ರ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.

ಉತ್ತರಾಖಂಡಕ್ಕೆ ಆಮ್ಲಜನಕ ಹಂಚಿಕೆ ಮಾಡುವ ವಿಚಾರದಲ್ಲಿ ಕೇಂದ್ರ ಸರ್ಕಾರವು ಮಲತಾಯಿ ಧೋರಣೆ ತೋರುತ್ತಿದ್ದು, ನಿರ್ದಯವಾಗಿ ನಡೆದುಕೊಳ್ಳುತ್ತಿದೆ ಎಂದು ಕೇಂದ್ರ ಸರ್ಕಾರದ ಧೋರಣೆಯ ಬಗ್ಗೆ ಮುಖ್ಯ ನ್ಯಾಯಮೂರ್ತಿ ಆರ್‌ ಚೌಹಾಣ್‌ ಮತ್ತು ನ್ಯಾಯಮೂರ್ತಿ ಅಲೋಕ್‌ ವರ್ಮಾ ಅವರಿದ್ದ ವಿಭಾಗೀಯ ಪೀಠವು ಗಂಭೀರವಾಗಿ ಆಕ್ಷೇಪಿಸಿದೆ.

ಈ ಹಿಂದಿನ ವಿಚಾರಣೆ ವೇಳೆ ಸೂಚಿಸಿದ್ದಂತೆ, ಸರ್ಕಾರದ ಪರವಾಗಿ ಯಾರಾದರೂ ಅಧಿಕಾರಿಗಳು ನ್ಯಾಯಾಲಯಕ್ಕೆ ಉತ್ತರಿಸಲು ಹಾಜರಿದ್ದಾರೆಯೇ ಎಂದು ಕೇಂದ್ರ ಸರ್ಕಾರದ ಪರ ವಕೀಲರಿಗೆ ನ್ಯಾಯಾಲಯ ಪ್ರಶ್ನಿಸಿತು. ಇದಕ್ಕೆ ಕೇಂದ್ರದ ವಕೀಲ ರಾಕೇಶ್‌ ಥಾಪ್ಲಿಯಾಲ್‌ ಅವರು ಅಧಿಕಾರಿಗೆ ಬಿಡುವಿಲ್ಲ ಎಂದರು. “ಅವರಿಗೆ ನ್ಯಾಯಾಲಯಕ್ಕೆ ಹಾಜರಾಗದಷ್ಟು ಬಿಡುವಿಲ್ಲದೆ ಇರಲು ಸಾದ್ಯವಿಲ್ಲ” ಎಂದು ಪೀಠ ಚಾಟಿ ಬೀಸಿತು.

ಉತ್ತರಾಖಂಡದಲ್ಲಿ ಕೋವಿಡ್‌ ನಿರ್ವಹಣೆ ಕುರಿತಾದ ಮನವಿಯ ವಿಚಾರಣೆಯನ್ನು ಪೀಠ ನಡೆಸಿತು. ರಾಜ್ಯದ ಬೇಡಿಕೆಯನ್ನು ಪೂರೈಸದೇ ಇಲ್ಲಿ ಉತ್ಪಾದಿಸಲಾಗುವ ಆಮ್ಲಜನಕವನ್ನು ಬೇರೆ ರಾಜ್ಯಕ್ಕೆ ಪೂರೈಸಲಾಗುತ್ತಿದೆ ಎಂಬ ವಿಚಾರ ನ್ಯಾಯಾಲಯವನ್ನು ಕೆರಳಿಸಿತು. ಇದರಿಂದ ತನಗೆ ಎದುರಾಗುತ್ತಿರುವ ಆಮ್ಲಜನಕ ಕೊರತೆಯನ್ನು ಪೂರೈಸಿಕೊಳ್ಳಲು ಬೇರೆ ರಾಜ್ಯಗಳನ್ನು ಅವಲಂಬಿಸುವ ಪರಿಸ್ಥಿತಿ ಉತ್ತರಾಖಂಡಕ್ಕೆ ನಿರ್ಮಾಣವಾಗಿದೆ ಎಂದು ಅಭಿಪ್ರಾಯಪಟ್ಟಿತು.

“ರಾಜ್ಯ ಸರ್ಕಾರದ ಸಮಂಜಸ ವಿನಂತಿಯನ್ನು ಕೇಂದ್ರ ಸರ್ಕಾರವೇಕೆ ಪರಿಗಣಿಸುತ್ತಿಲ್ಲ? ಇದಕ್ಕೆ ಬದಲಾಗಿ ನಮ್ಮ ಆಮ್ಲಜನಕವನ್ನು ಉತ್ತರ ಪ್ರದೇಶಕ್ಕೆ ಪೂರೈಸಲಾಗುತ್ತಿದೆ? ಹಣ, ಸಮಯ ವ್ಯಯಿಸಿ ಜೆಮ್‌ಶೆಡ್‌ಪುರ ಮತ್ತು ದುರ್ಗಾಪುರದಿಂದ ಆಮ್ಲಜನಕ ತರಿಸಿಕೊಳ್ಳುವ ಬದಲು ನಮ್ಮಲ್ಲಿರುವ ಆಮ್ಲಜನಕವನ್ನು ನಾವೇ ಏಕೆ ಬಳಸಿಕೊಳ್ಳಬಾರದು?” ಎಂದು ಪೀಠ ಪ್ರಶ್ನಿಸಿತು.

ವಿವಿಧ ರಾಜ್ಯಗಳಲ್ಲಿ ಉದ್ಭವಿಸಿರುವ ಆಮ್ಲಜನಕ ಕೊರತೆಯನ್ನು ಸರಿದೂಗಿಸಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ವಕೀಲ ಥಾಪ್ಲಿಯಾಲ್‌ ಪ್ರತಿಕ್ರಿಯಿಸಿದರು. “ಇತರೆ ಕೆಲವು ರಾಜ್ಯಗಳಲ್ಲಿ ಆಮ್ಲಜನಕ ಉತ್ಪಾದನಾ ಘಟಕಗಳೇ ಇಲ್ಲ… ತಮ್ಮದೇ ಸಂಪನ್ಮೂಲದ ಮೂಲಕ ಶೇ. 60ರಷ್ಟು ಆಮ್ಲಜನಕ ಸಂಗ್ರಹಿಸಿಕೊಳ್ಳಲು ಉತ್ತರಾಖಂಡಕ್ಕೆ ಅನುಮತಿಸಲಾಗಿದೆ… ಯಾವುದೇ ಸಂಪನ್ಮೂಲವಿಲ್ಲದ ಇತರೆ ರಾಜ್ಯಗಳತ್ತಲೂ ನಾವು ದೃಷ್ಟಿ ಬೀರಿದ್ದೇವೆ” ಎಂದು ವಿವರಿಸಿದರು.

ವಿಚಾರಣೆ ನಡೆಯುತ್ತಿರುವ ವೇಳೆ ಆಮ್ಲಜನಕದ ಪೂರೈಕೆ ಸಂಬಂಧ ನ್ಯಾಯಾಲಯಕ್ಕೆ ವಿವರಣೆ ನೀಡಬೇಕಿರುವ ಅಧಿಕಾರಿ ಗೈರಾಗಿರುವ ಬಗ್ಗೆ ನ್ಯಾಯಾಲಯವು ಕೆಂಡಾಮಂಡಲವಾಯಿತು. “ಕೇಂದ್ರ ಸರ್ಕಾರದ ಇಲಾಖೆಗೆ ಸಂಬಂಧಿಸಿದ ಪ್ರತಿನಿಧಿ ಹಾಜರಾಗಿ ವಿವರಣೆ ನೀಡಲು ಸೂಚಿಸಿ. ನ್ಯಾಯಾಲಯಕ್ಕೆ ಹಾಜರಾಗದಷ್ಟು ನನಗೆ ಬಿಡುವಿಲ್ಲ ಎಂಬ ಉತ್ತರವನ್ನು ಸ್ವೀಕರಿಸಲು ನಾವು ಸಿದ್ಧರಿಲ್ಲ” ಎಂದು ಪೀಠ ಹೇಳಿತು.

ಉತ್ತರಾಖಂಡಕ್ಕೆ ಆಮ್ಲಜನಕ ಪೂರೈಸುತ್ತಿರುವುದರ ಬಗ್ಗೆ ಹಿಂದಿನ ವಿಚಾರಣೆಯಲ್ಲೂ ನ್ಯಾಯಾಲಯವು ಆತಂಕ ವ್ಯಕ್ತಪಡಿಸಿತ್ತು. ಉತ್ತರಾಖಂಡಕ್ಕೆ 183 ಮೆಟ್ರಿಕ್‌ ಟನ್‌ ಆಮ್ಲಜನಕ ಹಂಚಿಕೆ ಮಾಡಲಾಗಿದೆ ಎಂದು ಇಂದು ನ್ಯಾಯಾಲಯಕ್ಕೆ ತಿಳಿಸಲಾಯಿತು.

ಈ ವಿಚಾರದ ಕುರಿತು ಕೇಂದ್ರಕ್ಕೆ ಪತ್ರ ಬರೆದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂಬ ಅಂಶವನ್ನು ಪೀಠದ ಗಮನಕ್ಕೆ ತರಲಾಯಿತು. ಆಗ ನ್ಯಾಯಾಲಯವು ಕೇಂದ್ರ ಸರ್ಕಾರವು ಉತ್ತರಾಖಂಡದೆಡೆಗೆ ನಿರ್ದಯ ನಡೆ ಅನುಸರಿಸುತ್ತಿದೆ ಎನಿಸುತ್ತಿದೆ ಎಂದಿತು.

ಕೇಂದ್ರ ಸರ್ಕಾರದ ಅಧಿಕಾರಿ ಪಾಲ್ಗೊಳ್ಳದಿದ್ದರೆ ಸಮನ್ಸ್‌ ಜಾರಿಗೊಳಿಸುವ ಎಚ್ಚರಿಕೆಯನ್ನು ಮುಖ್ಯ ನ್ಯಾಯಮೂರ್ತಿ ನೀಡಿದರು. "ಕೇಂದ್ರ ಸರ್ಕಾರದಲ್ಲಿರುವವರಿಗೇಕೆ ಈ ತರ್ಕ ಅರ್ಥವಾಗುತ್ತಿಲ್ಲ ಎಂಬುದು ನಮಗೆ ತಿಳಿಯದಾಗಿದೆ. ನ್ಯಾಯಾಲಯದ ಮುಂದೆ ಹಾಜರಾಗದಷ್ಟು ಬಿಡುವಿಲ್ಲದ ರೀತಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ಅವರು ಹೇಳಿಕೊಂಡಿರುವುದು ನಮಗೆ ಆಶ್ಚರ್ಯವಾಗಿದೆ. ಅವರಿಗೆ ಸಮನ್ಸ್‌ ಬೇಕೆಂದರೆ ನಾವು ಅದನ್ನು ಜಾರಿಗೊಳಿಸುತ್ತೇವೆ. ಇದು ಕೇಂದ್ರ ಸರ್ಕಾರದ ನಿರ್ದಯ ನಡೆಯಾಗಿದೆ. ಅಧ್ಯಕ್ಷರು ಸುಮ್ಮನೆ ಕುಳಿತಿರುವುದೇಕೆ? ಕುಲ್ಬೆ ಸುಮ್ಮನೆ ಕುಳಿತಿರುವುದು ನಮಗೆ ಆಶ್ಚರ್ಯ ಉಂಟು ಮಾಡಿದೆ. ಕುಲ್ಬೆ ಅವರು ಉತ್ತರಾಖಂಡದವರಲ್ಲವೇ. ತಮ್ಮ ರಾಜ್ಯದ ಹಿತಾಸಕ್ತಿಯನ್ನು ಮರೆತು ಅವರು ಕುಳಿತಿರುವುದು ನಮಗೆ ಆಶ್ಚರ್ಯ ತಂದಿದೆ” ಎಂದೂ ನ್ಯಾಯಾಲಯ ಹೇಳಿತು.

ಸದರಿ ವಿಚಾರಕ್ಕೆ ಸಂಬಂಧಿಸಿದಂತೆ ನಡೆಸಲಾಗಿರುವ ಸಂವಹನಕ್ಕೆ ಕೇಂದ್ರ ಸರ್ಕಾರ ಇನ್ನಷ್ಟೇ ಪ್ರತಿಕ್ರಿಯಿಸಬೇಕಿದೆ ಎಂದು ಮುಖ್ಯ ಕಾರ್ಯದರ್ಶಿ ಕಚೇರಿಗೆ ಸೇರಿರುವ ಅಧಿಕಾರಿಯಾದ ಅಮಿತ್‌ ನೇಗಿ ತಿಳಿಸಿದರು. ಈ ವೇಳೆ ಪೀಠವು “ಕೇಂದ್ರ ಸರ್ಕಾರದ ನಿರ್ದಯ ನಡವಳಿಕೆಯು ನಮಗೆ ಅಚ್ಚರಿ ಹುಟ್ಟಿಸಿದೆ. ಉತ್ತರಾಖಂಡ ರಾಜ್ಯ ಮಾಡುವ ಪ್ರತಿಯೊಂದು ವಿನಂತಿಯು ಕಿವುಡಾದ ಕಿವಿಗೆ ಬೀಳುತ್ತಿದೆ” ಎಂದು ಖಾರವಾಗಿ ನುಡಿಯಿತು. ವಿಚಾರಣೆಯನ್ನು ಜೂನ್‌ 9ಕ್ಕೆ ಮುಂದೂಡಲಾಗಿದೆ.