Jail 
ಸುದ್ದಿಗಳು

ಷರತ್ತು ಉಲ್ಲಂಘಿಸಿದವರ ಜಾಮೀನು ತನ್ನಿಂತಾನೇ ರದ್ದಾಗುತ್ತದೆ ಎಂದು ಆದೇಶಿಸಲಾಗದು: ಮಧ್ಯಪ್ರದೇಶ ಹೈಕೋರ್ಟ್

ಪೊಲೀಸರೆದುರು ಹಾಜರಾಗದ ಹಿನ್ನೆಲೆಯಲ್ಲಿ ತನ್ನ ಜಾಮೀನು ಸ್ವಯಂಚಾಲಿತವಾಗಿ ರದ್ದಾಗಿದ್ದು ತನ್ನನ್ನು ಬಂಧಿಸುವಂತೆ ನೀಡಿದ್ದ ಆದೇಶ ಹಿಂಪಡೆಯುವಂತೆ ಆರೋಪಿ ಕೋರಿದ್ದ.

Bar & Bench

ಜಾಮೀನು ಪಡೆದ ಆರೋಪಿ ಜಾಮೀನು ಷರತ್ತು ಉಲ್ಲಂಘಿಸಿದ್ದರೆ ಅವರ ಜಾಮೀನು ತನ್ನಿಂತಾನೇ ರದ್ದುಗೊಳ್ಳುತ್ತದೆ ಎಂದು ಆದೇಶಿಸಲು ಸಾಧ್ಯವಿಲ್ಲ ಎಂಬುದಾಗಿ  ಮಧ್ಯಪ್ರದೇಶ ಹೈಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ [ಮನೀಷ್ @ ವೀರೇಂದ್ರ @ ಸರೋಜ್ ರೈ ಮತ್ತು ಮಧ್ಯಪ್ರದೇಶ ಸರ್ಕಾರ ನಡುವಣ ಪ್ರಕರಣ]

ಜಾಮೀನು ರದ್ದುಗೊಳಿಸಿದರೆ ಅದು  ವ್ಯಕ್ತಿಯ ಮೂಲಭೂತ ಹಕ್ಕುಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ನ್ಯಾಯಮೂರ್ತಿ ವಿಶಾಲ್ ಧಗತ್ ಅಭಿಪ್ರಾಯಪಟ್ಟಿದ್ದಾರೆ. ಆದ್ದರಿಂದ, ವ್ಯಕ್ತಿಯ ಸ್ವಾತಂತ್ರ್ಯದ ಮೇಲೆ ಪರಿಣಾಮ ಬೀರುವ ಯಾವುದೇ ಆದೇಶವನ್ನು ವಿಚಾರಣೆಗೆ ಸಮಂಜಸವಾದ ಅವಕಾಶ ನೀಡಿದ ನಂತರವೇ ಜಾರಿಗೊಳಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ಮಾರ್ಚ್ 2022ರಲ್ಲಿ ನ್ಯಾಯಾಲಯದ ಏಕಸದಸ್ಯ ಪೀಠ ನೀಡಿದ್ದ ಆದೇಶ  ಮಾರ್ಪಡಿಸುವಂತೆ ಕೋರಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಧಗತ್ ವಿಚಾರಣೆ ನಡೆಸಿದರು.

ಪೊಲೀಸರೆದುರು ಹಾಜರಾಗದ ಹಿನ್ನೆಲೆಯಲ್ಲಿ ಹೈಕೋರ್ಟ್‌ ವಿಧಿಸಿದ್ದ ಷರತ್ತಿನಂತೆ ತನ್ನ ಜಾಮೀನು ಸ್ವಯಂಚಾಲಿತವಾಗಿ ರದ್ದಾಗಿದ್ದು ತನ್ನನ್ನು ಬಂಧಿಸುವಂತೆ ಆಗ ಉಚ್ಚ ನ್ಯಾಯಾಲಯ ಪೊಲೀಸರಿಗೆ ನೀಡಿದ್ದ ನಿರ್ದೇಶನ ಹಿಂಪಡೆಯುವಂತೆ ಆರೋಪಿ ಕೋರಿದ್ದ.

ಆರೋಪಿಗೆ ನವೆಂಬರ್ 2021 ರಲ್ಲಿ ಜಾಮೀನು ನೀಡಿದ್ದ ಹೈಕೋರ್ಟ್‌ ಪೊಲೀಸರೆದರು ತಿಂಗಳಿಗೊಮ್ಮೆ ಹಾಜರಾಗಬೇಕು. ಒಂದೇ ಒಂದು ಬಾರಿ ಹಾಜರಾಗಲು ಸಾಧ್ಯವಾದಿದ್ದರೂ ಆತನ ಜಾಮೀನು ಅರ್ಜಿ ತನ್ನಿಂತಾನೇ ರದ್ದುಗೊಳ್ಳುತ್ತದೆ ಎಂದು ನ್ಯಾಯಾಲಯ ಷರತ್ತು ವಿಧಿಸಿತ್ತು.

 ಆದರೆ ಆರೋಪಿ 2022ರ ಜನವರಿ ಮತ್ತು ಫೆಬ್ರವರಿಯಲ್ಲಿ ಎರಡು ಬಾರಿ ಪೊಲೀಸರೆದುರು ಹಾಜರಾಗದ ಹಿನ್ನೆಲೆಯಲ್ಲಿ, 2021ರ ಆದೇಶದಲ್ಲಿ ನಿಗದಿಪಡಿಸಿದ ಜಾಮೀನು ಷರತ್ತುಗಳನ್ನು ಮಾರ್ಪಡಿಸಲು ಆತ ಅರ್ಜಿ ಸಲ್ಲಿಸಿದ್ದ.

ಆದರೆ ಮಾರ್ಚ್ 2022 ರಲ್ಲಿ, ಹೈಕೋರ್ಟ್‌ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಆರೋಪಿಯನ್ನು ಬಂಧಿಸುವಂತೆ ಪೊಲೀಸರಿಗೆ ಆದೇಶಿಸಿತು. ಜಾಮೀನು ರದ್ದತಿ ಆದೇಶ ಹಿಂಪಡೆಯುವಂತೆ ಮತ್ತೆ ಆತ ನ್ಯಾಯಾಲಯದ ಮೆಟ್ಟಿಲೇರಿದ.  ಉತ್ತರ ಪ್ರದೇಶದ ಬನಾರಸ್‌ ನಿವಾಸಿಯಾಗಿರುವ ತಾನು ಮಧ್ಯಪ್ರದೇಶದ ಠಾಣೆಯೊಂದಕ್ಕೆ ಹಾಜರಾಗಲು ನಾಲ್ಕು ದಿನ ಹಿಡಿಯುತ್ತದೆ ಎಂದು ಆತ ಅಳಲು ತೋಡಿಕೊಂಡಿದ್ದ.

ಆರೋಪಿಯ ಮನವಿಗೆ ಆಕ್ಷೇಪಿಸಿದ ಸರ್ಕಾರ ಜಾಮೀನು ನೀಡವಾಗ ಷರತ್ತು ವಿಧಿಸಲು ಹೈಕೋರ್ಟ್‌ಗೆ ಅಧಿಕಾರ ಇದೆ ಎಂದಿತು.  

ವಾದ ಆಲಿಸಿದ ನ್ಯಾಯಾಲಯ ಆರೋಪಿಯ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ನಿರ್ಧರಿಸಿತು. ಅಂತೆಯೇ ಜಾಮೀನು ರದ್ದತಿ ಆದೇಶ ಹಿಂಪಡೆದ ಅದು ಜಾಮೀನು ಷರತ್ತು ಮಾರ್ಪಾಡು ಕೋರಿರುವ ಮನವಿ ಆಲಿಸಲು ದಿನಾಂಕ ನಿಗದಿಪಡಿಸುವಂತೆ ರಿಜಿಸ್ಟ್ರಿಗೆ ಸೂಚಿಸಿತು.