ಸುದ್ದಿಗಳು

ಕೋವಿಡ್ ಲಸಿಕೆಯಿಂದ ಸಾವು: ಪರಿಹಾರ ನೀತಿ ರೂಪಿಸುವ ಕುರಿತು ಕೇಂದ್ರದ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್‌

ಕೋವಿಡ್ ಸಾಂಕ್ರಾಮಿಕ ರೋಗದ ಕಾರಣಕ್ಕೆ ಲಸಿಕೆ ಅಭಿಯಾನ ಆರಂಭವಾಯಿತು. ಈಗ ತನಗೂ ಅದಕ್ಕೂ ಸಂಬಂಧ ಇಲ್ಲ ಎಂದು ಕೇಂದ್ರ ಸರ್ಕಾರ ವಾದಿಸುವಂತಿಲ್ಲ ಎಂದು ಹೇಳಿದ ನ್ಯಾಯಾಲಯ.

Bar & Bench

ಕೋವಿಡ್-19 ಲಸಿಕೆಯ ಅಡ್ಡಪರಿಣಾಮಗಳಿಂದ ಸಾವನ್ನಪ್ಪಿದವರ ಕುಟುಂಬಗಳಿಗೆ ಪರಿಹಾರ ನೀಡುವ ಬಗ್ಗೆ ನೀತಿ ರೂಪಿಸಬಹುದೇ ಎಂಬ ಬಗ್ಗೆ ಪ್ರತಿಕ್ರಿಯಿಸುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ [ ಭಾರತ ಒಕ್ಕೂಟ ಮತ್ತು ಸಯೀದಾ ಕೆಎ ಹಾಗೂ ಸಂಬಂಧಿತ ಪ್ರಕರಣಗಳು ].

ಕೋವಿಡ್-19 ರೋಗವನ್ನು ಮಾತ್ರ ವಿಪತ್ತು ಎಂದು ಘೋಷಿಸಲಾಗಿದೆಯೇ ಹೊರತು ಕೋವಿಡ್‌ ಲಸಿಕೆಗಳಿಂದ ಉಂಟಾಗುವ ಸಾವುಗಳನ್ನಲ್ಲ. ಆದ್ದರಿಂದ, ವಿಪತ್ತು ನಿರ್ವಹಣಾ ಕಾಯಿದೆಯಡಿಯಲ್ಲಿ ಕೋವಿಡ್‌ ಲಸಿಕೆಗಳಿಗೆ ಸಂಬಂಧಿಸಿದ ಸಾವುಗಳಿಗೆ ಪರಿಹಾರವನ್ನು ನೀಡುವ ಯಾವುದೇ ನೀತಿ ಇಲ್ಲ ಎಂದು ಕೇಂದ್ರ ಸರ್ಕಾರ ಇಂದು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠಕ್ಕೆ ತಿಳಿಸಿತು.

ಆದರೆ, ಕೋವಿಡ್-19 ಸಾವುಗಳನ್ನು ಕೋವಿಡ್ ಲಸಿಕೆಗೆ ಸಂಬಂಧಿಸಿದ ಸಾವುಗಳಿಗಿಂತ ಭಿನ್ನವಾಗಿ ಪರಿಗಣಿಸುವ ಅಗತ್ಯವಿಲ್ಲ ಎಂದು ಪೀಠ ಹೇಳಿತು.

ಕಡೆಗೆ ಕೋವಿಡ್ ಸಾಂಕ್ರಾಮಿಕ ರೋಗದ ಕಾರಣಕ್ಕೆ ಲಸಿಕೆ ಅಭಿಯಾನ ಆರಂಭವಾಯಿತು. ತನಗೂ ಅದಕ್ಕೂ ಸಂಬಂಧ ಇಲ್ಲ ಎಂದು ಕೇಂದ್ರ ಸರ್ಕಾರ ವಾದಿಸುವಂತಿಲ್ಲ ಎಂದು ಅದು ವಿವರಿಸಿತು.

ಮೂರು ವಾರಗಳ ಒಳಗಾಗಿ ಕೋವಿಡ್ ಲಸಿಕೆಗಳಿಂದ ಸಾವನ್ನಪ್ಪಿದವರ ಕುಟುಂಬಗಳಿಗೂ ಪರಿಹಾರ ವಿಸ್ತರಿಸಲು ನೀತಿ ರೂಪಿಸಬಹುದೇ ಎಂಬ ಕುರಿತು ಪ್ರತಿಕ್ರಿಯಿಸುವಂತೆ ಪೀಠ ಕೇಂದ್ರಕ್ಕೆ ಸೂಚಿಸಿತು. ಪ್ರಕರಣದ ಮುಂದಿನ ವಿಚಾರಣೆ ಮಾರ್ಚ್ 18ರಂದು ನಡೆಯಲಿದೆ.

ಕೋವಿಡ್ ಲಸಿಕೆಯ ಅಡ್ಡಪರಿಣಾಮಗಳಿಂದ ಪತಿ ಸಾವನ್ನಪ್ಪಿದ್ದಾರೆ ಎಂದು ಹೇಳಿ ಮಹಿಳೆಯೊಬ್ಬರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಕೇಂದ್ರ ಸರ್ಕಾರದ ಪರವಾಗಿ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಐಶ್ವರ್ಯಾ ಭಾಟಿ ವಾದ ಮಂಡಿಸಿದರು.