“ಮಾಜಿ ಸಚಿವರಾದ ಕೆ ಆರ್ ರಮೇಶ್‌ಕುಮಾರ್ ಅವರು ಅರಣ್ಯ ಭೂಮಿಯನ್ನು ದಾನ ಮಾಡಿದ್ದು, ಅದೇ ಭೂಮಿಯನ್ನು ಅಡವಿಟ್ಟು ಬ್ಯಾಂಕಿನಲ್ಲಿ ಸಾಲ ಪಡೆದಿದ್ದಾರೆ. ಅರಣ್ಯ ಭೂಮಿಯನ್ನು ರಮೇಶ್‌ಕುಮಾರ್ ಅವರು ಅಡವಿಡಬಹುದೇ?” ಎಂದು ಮಧ್ಯಪ್ರವೇಶಿಕೆ ಕೋರಿರುವವರ ಪರ ಹಿರಿಯ ವಕೀಲರು ಬುಧವಾರ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದರು.
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಜಿನಗಲಕುಂಟೆ ಅರಣ್ಯ ವಲಯದ ಹೊಸಹುಡ್ಯ ಗ್ರಾಮದಲ್ಲಿ ಒತ್ತುವರಿಯಾಗಿರುವ 60 ಎಕರೆ 23 ಗುಂಟೆ ಜಮೀನನ್ನು 30 ದಿನಗಳೊಳಗೆ ಖಾಲಿ ಮಾಡಿ ಶಾಂತಿಯುತವಾಗಿ ಹಸ್ತಾಂತರಿಸಬೇಕು ಎಂದು ಮೇಲ್ಮನವಿ ಪ್ರಾಧಿಕಾರಿ ಹಾಗೂ ಅರಣ್ಯ ಸಂರಕ್ಷಣಾಧಿಕಾರಿ (ಪ್ರಾದೇಶಿಕ-ಬೆಂಗಳೂರು) ಮಾಡಿರುವ ಆದೇಶ ರದ್ದತಿ ಕೋರಿ ವಿಧಾನಸಭೆ ಮಾಜಿ ಸ್ಪೀಕರ್ ಕೆ ಆರ್ ರಮೇಶ್‌ಕುಮಾರ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರ ಏಕಸದಸ್ಯ ಪೀಠ ನಡೆಸಿತು.
ಮಧ್ಯಪ್ರವೇಶಿಕೆದಾರರ ಪರವಾಗಿ ವಾದಿಸಿದ ಹಿರಿಯ ವಕೀಲರಾದ ಪ್ರಮೀಳಾ ನೇಸರ್ಗಿ ಮತ್ತು ವಿವೇಕ್ ಸುಬ್ಬಾರೆಡ್ಡಿ ಅವರು “ಆಕ್ಷೇಪಾರ್ಹವಾದ ಅರಣ್ಯ ಭೂಮಿಯನ್ನ ಕೆಲವು ಭಾಗವನ್ನು ರಮೇಶ್‌ಕುಮಾರ್ ದಾನ ಮಾಡಿದ್ದಾರೆ. ಕೆಲವು ಸರ್ವೆ ನಂಬರ್‌ಗಳನ್ನು ಬ್ಯಾಂಕಿನಲ್ಲಿ ಅಡವಿಟ್ಟು 70 ಲಕ್ಷ ರೂಪಾಯಿ ಸಾಲ ಪಡೆದಿದ್ದಾರೆ. ಅರಣ್ಯ ಭೂಮಿಯನ್ನು ರಮೇಶ್‌ಕುಮಾರ್ ಅವರು ಅಡವಿಡಬಹುದೇ? ಸರ್ಕಾರ ಏನನ್ನೂ ಹೇಳುತ್ತಿಲ್ಲ” ಎಂದರು.
ರಮೇಶ್‌ಕುಮಾರ್ ಪರ ವಕೀಲ ಆರ್ ಸುಬ್ರಹ್ಮಣ್ಯ ಅವರು “ಯಾರುಬೇಕಾದರೂ ಮಧ್ಯಪ್ರವೇಶಿಕೆ ಕೋರಲಾಗದು. ಮಧ್ಯಪ್ರವೇಶಿಕೆದಾರರ ಹೆಸರಿನಲ್ಲಿ ವಕೀಲರು ರಾಜಕೀಯ ಆರೋಪ ಮಾಡುತ್ತಿದ್ದಾರೆ. ಮಧ್ಯಪ್ರವೇಶಿಕೆ ಕೋರಿರುವವರಿಗೆ ಈ ಪ್ರಕರಣದಲ್ಲಿ ಅಂತ ಆಸಕ್ತಿ ಏನಿದೆ?” ಎಂದರು.
ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಭಾನುಪ್ರಕಾಶ್ ಅವರು “ಮೇಲ್ಮನವಿ ಪ್ರಾಧಿಕಾರವು ಜಮೀನು ತೆರವು ಮಾಡುವಂತೆ ಆದೇಶಿಸಿದೆ. ಇದನ್ನು ರಮೇಶ್‌ಕುಮಾರ್ ಪ್ರಶ್ನಿಸಿದ್ದಾರೆ. ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು” ಎಂದರು.
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಜಿನಗಲಕುಂಟೆ ಅರಣ್ಯ ವಲಯದ ಹೊಸಹುಡ್ಯ ಗ್ರಾಮದಲ್ಲಿ ಒತ್ತುವರಿಯಾಗಿರುವ 60 ಎಕರೆ 23 ಗುಂಟೆ ಜಮೀನನ್ನು ಮೇಲ್ಮನವಿದಾರರಾದ ಕೆ ಆರ್ ರಮೇಶ್ ಕುಮಾರ್ 30 ದಿನಗಳೊಳಗೆ ಖಾಲಿ ಮಾಡಿ ಶಾಂತಿಯುತವಾಗಿ ಹಸ್ತಾಂತರಿಸಬೇಕು ಎಂದು ಮೇಲ್ಮನವಿ ಪ್ರಾಧಿಕಾರಿ ಹಾಗೂ ಅರಣ್ಯ ಸಂರಕ್ಷಣಾಧಿಕಾರಿ (ಪ್ರಾದೇಶಿಕ-ಬೆಂಗಳೂರು) ಮಾಡಿರುವ ಆದೇಶದ ಸಂಬಂಧ ಆತುರದ ಕ್ರಮಕೈಗೊಳ್ಳದಂತೆ ಕರ್ನಾಟಕ ಹೈಕೋರ್ಟ್ ಈಚೆಗೆ ನಿರ್ದೇಶಿಸಿತ್ತು. ಈ ಆದೇಶ ವಿಸ್ತರಿಸಿ, ವಿಚಾರಣೆಯನ್ನು ಜೂನ್ 4ಕ್ಕೆ ಮುಂದೂಡಿದೆ.
ವಿಧಾನಸಭೆ ಮಾಜಿ ಅಧ್ಯಕ್ಷ ರಮೇಶ್ ಕುಮಾರ್ ಸಲ್ಲಿಸಿದ್ದ ಮೇಲ್ಮನವಿಯನ್ನು ತಿರಸ್ಕರಿಸಿ ಏಪ್ರಿಲ್ 10ರಂದು ಮೇಲ್ಮನವಿ ಪ್ರಾಧಿಕಾರ ಆದೇಶಿಸಿತ್ತು. 2011ರ ಜೂನ್ 24ರಂದು ಕೋಲಾರ ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿಯು ಒತ್ತುವರಿ ತೆರವಿಗೆ ಆದೇಶಿಸಿದ್ದ ಕ್ರಮವನ್ನು ಮೇಲ್ಮನವಿ ಪ್ರಾಧಿಕಾರ ಎತ್ತಿಹಿಡಿದಿದೆ. 2025ರ ಜನವರಿ 15 ಹಾಗೂ 16ರಂದು ಕಡೆಸಿದ ಜಂಟಿ ಸಮೀಕ್ಷೆಯಲ್ಲಿ ಒತ್ತುವರಿ ಆಗಿರುವುದು ದೃಢಪಟ್ಟಂತೆ ಹೊಡಹುಡ್ಯ ಗ್ರಾಮದ ಸರ್ವೆ ಸಂಖ್ಯೆ 1ರಲ್ಲಿ ಆರು ಎಕರೆ ಮತ್ತು ಸರ್ವೆ ಸಂಖ್ಯೆ 2ರಲ್ಲಿನ 54 ಎಕರೆ 23 ಗುಂಟೆ ಸೇರಿ ಒಟ್ಟು 60 ಎಕರೆ 23 ಗುಂಟೆ ಜಮೀನನ್ನು ತೆರವುಗೊಳಿಸಬೇಕು ಎಂದು ಆದೇಶಿಸಿದ್ದಾರೆ.
ಒತ್ತುವರಿಯಾಗಿರುವ ಅರಣ್ಯ ಭೂಮಿಯನ್ನು ಮೇಲ್ಮನವಿದಾರರು ನಿಗದಿತ ಅವಧಿಯೊಳಗೆ ಖಾಲಿ ಮಾಡದಿದ್ದಲ್ಲಿ, ಕೋಲಾರ ಜಿಲ್ಲೆಯ ಉಪ ಅರಣ್ಯ ಸಂರಕ್ಷಣಾಧಿಕಾರಿಯು ತಕ್ಷಣ ತೆರವಿಗೆ ವಹಿಸಬೇಕು. ಸಂಬಂಧಿತ ಅರಣ್ಯ ಭೂಮಿಯನ್ನು ಅರಣ್ಯ ಇಲಾಖೆ ವಶಕ್ಕೆ ಪಡೆಯಬೇಕು ಹಾಗೂ ಕರ್ನಾಟಕ ಅರಣ್ಯ ಕಾಯಿದೆ 1963ರ ಸೆಕ್ಷನ್ 64ಎ (2) ಪ್ರಕಾರ ವೆಚ್ಚ ಮಸೂಲಿ ಮಾಡಬೇಕು ಎಂದೂ ಸೂಚನೆ ನೀಡಿದ್ದಾರೆ.