ರಮೇಶ್‌ ಕುಮಾರ್‌ಗೆ ಜಮೀನು ಒತ್ತುವರಿ ತೆರವಿಗೆ ಆದೇಶ: ಆತುರದ ಕ್ರಮಕ್ಕೆ ಮುಂದಾಗದಂತೆ ಸರ್ಕಾರಕ್ಕೆ ನಿರ್ದೇಶನ

ವಿಧಾನಸಭೆ ಮಾಜಿ ಅಧ್ಯಕ್ಷ ರಮೇಶ್‌ ಕುಮಾರ್‌ ಸಲ್ಲಿಸಿದ್ದ ಮೇಲ್ಮನವಿಯನ್ನು ತಿರಸ್ಕರಿಸಿ ಏಪ್ರಿಲ್‌ 10ರಂದು ಮೇಲ್ಮನವಿ ಪ್ರಾಧಿಕಾರ ಆದೇಶಿಸಿತ್ತು.
ರಮೇಶ್‌ ಕುಮಾರ್‌ಗೆ ಜಮೀನು ಒತ್ತುವರಿ ತೆರವಿಗೆ ಆದೇಶ: ಆತುರದ ಕ್ರಮಕ್ಕೆ ಮುಂದಾಗದಂತೆ ಸರ್ಕಾರಕ್ಕೆ ನಿರ್ದೇಶನ
Published on

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಜಿನಗಲಕುಂಟೆ ಅರಣ್ಯ ವಲಯದ ಹೊಸಹುಡ್ಯ ಗ್ರಾಮದಲ್ಲಿ ಒತ್ತುವರಿಯಾಗಿರುವ 60 ಎಕರೆ 23 ಗುಂಟೆ ಜಮೀನನ್ನು ಮೇಲ್ಮನವಿದಾರರಾದ ಕೆ ಆರ್‌ ರಮೇಶ್‌ ಕುಮಾರ್‌ 30 ದಿನಗಳೊಳಗೆ ಖಾಲಿ ಮಾಡಿ ಶಾಂತಿಯುತವಾಗಿ ಹಸ್ತಾಂತರಿಸಬೇಕು ಎಂದು ಮೇಲ್ಮನವಿ ಪ್ರಾಧಿಕಾರಿ ಹಾಗೂ ಅರಣ್ಯ ಸಂರಕ್ಷಣಾಧಿಕಾರಿ (ಪ್ರಾದೇಶಿಕ-ಬೆಂಗಳೂರು) ಮಾಡಿರುವ ಆದೇಶದ ಸಂಬಂಧ ಆತುರದ ಕ್ರಮಕೈಗೊಳ್ಳದಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ನಿರ್ದೇಶಿಸಿದೆ.

ಬೆಂಗಳೂರಿನ ಮೇಲ್ಮನವಿ ಪ್ರಾಧಿಕಾರ ಹಾಗೂ ಅರಣ್ಯ ಸಂರಕ್ಷಣಾಧಿಕಾರಿ ಹೊರಡಿಸಿರುವ ಆದೇಶ ರದ್ದುಪಡಿಸಬೇಕು ಮತ್ತು ಕೋಲಾರ ಜಿಲ್ಲಾಧಿಕಾರಿ 08/10/2013, 08/10/2014 ಮತ್ತು 25/01/2025ರಂದು ಸಲ್ಲಿಸಿರುವ ವರದಿ ಸಂಬಂಧ ಕ್ರಮಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಮಾಜಿ ಸಚಿವ ಕೆ ಆರ್‌ ರಮೇಶ್‌ ಕುಮಾರ್‌ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ಅವರ ಏಕಸದಸ್ಯ ಪೀಠ ನಡೆಸಿತು.

ಅರ್ಜಿ ವಿಚಾರಣೆ ನಡೆಸಿದ ಪೀಠವು 21.04.2026ರವರೆಗೆ ಪ್ರತಿವಾದಿಗಳು ಆತುರದ ಕ್ರಮಕೈಗೊಳ್ಳಬಾರದು ಎಂದು ಆದೇಶಿಸಿದೆ.

ವಿಧಾನಸಭೆ ಮಾಜಿ ಅಧ್ಯಕ್ಷ ರಮೇಶ್‌ ಕುಮಾರ್‌ ಸಲ್ಲಿಸಿದ್ದ ಮೇಲ್ಮನವಿಯನ್ನು ತಿರಸ್ಕರಿಸಿ ಏಪ್ರಿಲ್‌ 10ರಂದು ಮೇಲ್ಮನವಿ ಪ್ರಾಧಿಕಾರ ಆದೇಶಿಸಿತ್ತು.

Also Read
ಮಾಜಿ ಸ್ಪೀಕರ್ ರಮೇಶ್‌ ಕುಮಾರ್‌ ವಿರುದ್ಧದ ಭೂಹಗರಣ ಆರೋಪ: ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಿದ ಹೈಕೋರ್ಟ್‌

2011ರ ಜೂನ್‌ 24ರಂದು ಕೋಲಾರ ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿಯು ಒತ್ತುವರಿ ತೆರವಿಗೆ ಆದೇಶಿಸಿದ್ದ ಕ್ರಮವನ್ನು ಮೇಲ್ಮನವಿ ಪ್ರಾಧಿಕಾರ ಎತ್ತಿಹಿಡಿದಿದೆ. 2025ರ ಜನವರಿ 15 ಹಾಗೂ 16ರಂದು ಕಡೆಸಿದ ಜಂಟಿ ಸಮೀಕ್ಷೆಯಲ್ಲಿ ಒತ್ತುವರಿ ಆಗಿರುವುದು ದೃಢಪಟ್ಟಂತೆ ಹೊಡಹುಡ್ಯ ಗ್ರಾಮದ ಸರ್ವೆ ಸಂಖ್ಯೆ 1ರಲ್ಲಿ ಆರು ಎಕರೆ ಮತ್ತು ಸರ್ವೆ ಸಂಖ್ಯೆ 2ರಲ್ಲಿನ 54 ಎಕರೆ 23 ಗುಂಟೆ ಸೇರಿ ಒಟ್ಟು 60 ಎಕರೆ 23 ಗುಂಟೆ ಜಮೀನನ್ನು ತೆರವುಗೊಳಿಸಬೇಕು ಎಂದು ಆದೇಶಿಸಿದ್ದಾರೆ.

ಒತ್ತುವರಿಯಾಗಿರುವ ಅರಣ್ಯ ಭೂಮಿಯನ್ನು ಮೇಲ್ಮನವಿದಾರರು ನಿಗದಿತ ಅವಧಿಯೊಳಗೆ ಖಾಲಿ ಮಾಡದಿದ್ದಲ್ಲಿ, ಕೋಲಾರ ಜಿಲ್ಲೆಯ ಉಪ ಅರಣ್ಯ ಸಂರಕ್ಷಣಾಧಿಕಾರಿಯು ತಕ್ಷಣ ತೆರವಿಗೆ ವಹಿಸಬೇಕು. ಸಂಬಂಧಿತ ಅರಣ್ಯ ಭೂಮಿಯನ್ನು ಅರಣ್ಯ ಇಲಾಖೆ ವಶಕ್ಕೆ ಪಡೆಯಬೇಕು ಹಾಗೂ ಕರ್ನಾಟಕ ಅರಣ್ಯ ಕಾಯಿದೆ 1963ರ ಸೆಕ್ಷನ್‌ 64ಎ (2) ಪ್ರಕಾರ ವೆಚ್ಚ ಮಸೂಲಿ ಮಾಡಬೇಕು ಎಂದೂ ಸೂಚನೆ ನೀಡಿದ್ದಾರೆ.

Kannada Bar & Bench
kannada.barandbench.com