ರಾಷ್ಟ್ರೀಯ ಕಾನೂನು ವಿಶ್ವವಿದ್ಯಾನಿಲಯಗಳ (ಎನ್‌ಎಲ್‌ಯುಗಳ) ಅರ್ಹ ಹಿಂದುಳಿದ ವರ್ಗಕ್ಕೆ ಸೇರಿದ ಪದವಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ʼಪ್ರಾಜೆಕ್ಟ್ ಏಕಲವ್ಯ 2022ʼ ಭಾಗವಾಗಿ, ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಹಳೆಯ ವಿದ್ಯಾರ್ಥಿಗಳ ಒಕ್ಕೂಟ ಪ್ರತಿಷ್ಠಾನ (ಸಿಎಎನ್) ದೇಶದೆಲ್ಲೆಡೆಯ 15 ವಿವಿಗಳ 51 ಪದವಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಿದೆ.
ವಿವಿಧ ವರ್ಗಗಳ ಅಡಿಯಲ್ಲಿ ಈ ವರ್ಷ ನೀಡಲಾದ ವಿದ್ಯಾರ್ಥಿವೇತನದ ಒಟ್ಟು ಮೊತ್ತ ₹ 47 ಲಕ್ಷಗಳು. ಏಕಲವ್ಯ ಯೋಜನೆಯಡಿ ವಾರ್ಷಿಕ ಸ್ಕಾಲರ್‌ಶಿಪ್‌ಗಳು ಅರ್ಹ, ಆದರೆ ಎನ್‌ಎಲ್‌ಯುಗಳ ಹಿಂದುಳಿದ ಪದವಿಪೂರ್ವ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಧನಸಹಾಯ ನೀಡುತ್ತವೆ.
ಪ್ರತಿಷ್ಠಾನಕ್ಕೆ ಈ ವರ್ಷ ಸುಮಾರು 75 ಅರ್ಜಿಗಳು ಬಂದಿದ್ದು ಎರಡು ಹಂತದ ಆಯ್ಕೆ ಪ್ರಕ್ರಿಯೆ ಮೂಲಕ ಪ್ರತಿಷ್ಠಿತ ಕಾನೂನು ವೃತ್ತಿಪರರನ್ನು ಒಳಗೊಂಡ ಆಯ್ಕೆ ಸಮಿತಿ ಪರಿಶೀಲಿಸಿದೆ. ಶ್ರೇಣಿ-1 ಪರಿಶೀಲನಾ ಸಮಿತಿಯು ಎಚ್ಚರಿಕೆಯಿಂದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದು ಇದರಲ್ಲಿ ಅಂತಿಮ ಹಂತದ ಅಭ್ಯರ್ಥಿಗಳ ಹೆಸರನ್ನು ಮೂವರು ಸದಸ್ಯರ ಉನ್ನತಾಧಿಕಾರ ಆಯ್ಕೆ ಸಮಿತಿ ಪರಿಶೀಲಿಸಿ ಅಂತಿಮಗೊಳಿಸಿದೆ.
ಉನ್ನತಾಧಿಕಾರದ ಆಯ್ಕೆ ಸಮಿತಿಯಲ್ಲಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ ಕೆ ಸಿಕ್ರಿ ಜಮ್ಮು ಕಾಶ್ಮೀರ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಗೀತಾ ಮಿತ್ತಲ್ ಹಾಗೂ ಹಿರಿಯ ನ್ಯಾಯವಾದಿ ರಾಜಶೇಖರ ರಾವ್ ಇದ್ದರು.
ವಕೀಲ ವರ್ಗದಲ್ಲಿ ಕನಿಷ್ಠ 12ರಿಂದ 15 ವರ್ಷಗಳ ಅನುಭವ ಇರುವ ಕಿರಿಯ ವಕೀಲರು ಶ್ರೇಣಿ-1 ಪರಿಶೀಲನಾ ಸಮಿತಿಯ ಭಾಗವಾಗಿದ್ದರು. ಅಡ್ವೊಕೇಟ್-ಆನ್-ರೆಕಾರ್ಡ್‌ಗಳಾದ ಅಮಲ್‌ಪುಷ್ಪ್ ಶ್ರೋತಿ, ಅರ್ಚನಾ ಪಾಠಕ್ ದವೆ, ಮೃಗಾಂಕ್ ಪ್ರಭಾಕರ್, ವಕೀಲ ಕೆ ಪರಮೇಶ್ವರ್, ಇಂಡಿಪೆಂಡೆಂಟ್ ಕೌನ್ಸೆಲ್ ಮತ್ತು ಮಧ್ಯಸ್ಥಿಕೆದಾರರಾದ ರಾಧಿಕಾ ಬಿಶ್ವಜಿತ್ ದುಬೆ, ಹೈದರಾಬಾದ್‌ನ ಐಎಎಂಸಿ ರಿಜಿಸ್ಟ್ರಾರ್ ತಾರೀಖ್ ಖಾನ್ ಅವರನ್ನು ಶ್ರೇಣಿ-1 ಸಮಿತಿ ಒಳಗೊಂಡಿತ್ತು.