ಪದವಿ ಶಿಕ್ಷಣದ ಹಂತದಲ್ಲಿ ದೂರಶಿಕ್ಷಣದ ಮೂಲಕ ಪದವಿ ಪಡೆದ ವ್ಯಕ್ತಿ ಮುಂದೆ ಕಾನೂನು ಪದವಿ ಗಳಿಸಿದ ನಂತರ ವಕೀಲರಾಗಿ ನೋಂದಾಯಿಸಿಕೊಳ್ಳಲು ಅವಕಾಶ ಇಲ್ಲವೇ ಎಂಬ ವಿಚಾರ ಪರಿಶೀಲಿಸುವುದಾಗಿ ಸುಪ್ರೀಂ ಕೋರ್ಟ್ ಸೋಮವಾರ ತಿಳಿಸಿದೆ [ಎಸ್‌ಟಿಎಸ್ ಗ್ಲಾಡೀಸ್ ಮತ್ತು ಭಾರತೀಯ ವಕೀಲರ ಪರಿಷತ್ತು ಇನ್ನಿತರರ ನಡುವಣ ಪ್ರಕರಣ].
ಅರ್ಜಿದಾರೆ ಎಸ್‌ಟಿಎಸ್ ಗ್ಲಾಡಿಸ್ ಅವರು ದೂರಶಿಕ್ಷಣ ಪದವಿ ಕೋರ್ಸ್ ಮೂಲಕ ಪದವಿ ಪಡೆದಿರುವ ಕಾರಣ, ಆಕೆ ವಕೀಲರಾಗಿ ನೋಂದಾಯಿಸಿಕೊಳ್ಳಲು ಅನುಮತಿ ನೀಡಲಾಗದು ಎಂದು ತೆಲಂಗಾಣ ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು. ಈ ಆದೇಶ ಪ್ರಶ್ನಿಸಿ ಆಕೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಅರ್ಜಿ ಸಂಬಂಧ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ನ್ಯಾಯಮೂರ್ತಿ ಪಿ ಬಿ ವರಾಳೆ ಅವರಿದ್ದ ಪೀಠ ಸೋಮವಾರ ತೆಲಂಗಾಣ ವಕೀಲರ ಪರಿಷತ್ತು ಮತ್ತು ಭಾರತೀಯ ವಕೀಲರ ಪರಿಷತ್ತು (ಬಿಸಿಐ) ನಾಲ್ಕು ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ನೋಟಿಸ್ ನೀಡಿದೆ.
ಅರ್ಜಿದಾರೆ ಕಾಕತೀಯ ವಿಶ್ವವಿದ್ಯಾಲಯದಿಂದ ದೂರಶಿಕ್ಷಣದ ಮೂಲಕ 2012ರಲ್ಲಿ ಕಲಾ ಪದವಿ ಪಡೆದಿದ್ದರು. ಈ ಹಿನ್ನೆಲೆಯಲ್ಲಿ ಆಕೆ ನೋಂದಣಿಗೆ ಅರ್ಹರಲ್ಲ ಎಂದು ಹೈಕೋರ್ಟ್‌ನಲ್ಲಿ ತೆಲಂಗಾಣ ವಕೀಲರ ಪರಿಷತ್ ವಾದಿಸಿತ್ತು.
ಎಂ. ನವೀನ್ ಕುಮಾರ್ ವರ್ಸಸ್ ತೆಲಂಗಾಣ ಸರ್ಕಾರ ಮತ್ತು ಕಟ್ರೋತ್ ಪ್ರದೀಪ್ ರಾಥೋಡ್ ವರ್ಸಸ್ ಬಿಸಿಐ ನಡುವಣ ಪ್ರಕರಣದ ಆದೇಶ ಮತ್ತು ಹಿಂದಿನ ತೀರ್ಪುಗಳನ್ನು ಪರಿಗಣಿಸಿದ ಹೈಕೋರ್ಟ್, ತೆಲಂಗಾಣ ವಕೀಲರ ಪರಿಷತ್ ವಾದ ಪುರಸ್ಕರಿಸಿ ಅರ್ಜಿದಾರೆಯ ಮನವಿ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಗ್ಲಾಡಿಸ್ ಪರ ವಕೀಲರಾದ ಗೌರವ್ ಕುಮಾರ್, ಅಗ್ರಿಮ್ ಟಂಡನ್, ನಮನ್ ಶ್ರೇಷ್ಠ ಮತ್ತು ವಿನೋದ್ ಶರ್ಮಾ ವಾದ ಮಂಡಿಸಿದ್ದರು.